Advertisement

ಜಿಲ್ಲೆಯ 1,985 ಮತಗಟ್ಟೆಗಳಿಗೆ 8,734 ಸಿಬ್ಬಂದಿ ನಿಯೋಜನೆ

09:52 PM Apr 16, 2019 | Lakshmi GovindaRaju |

ಹಾಸನ: ಜಿಲ್ಲಾಡಳಿತವು ಹಾಸನ ಲೋಕಸಭಾ ಚುನಾವಣೆಗೆ ಸರ್ವ ರೀತಿಯಲ್ಲೂ ಸಜ್ಜಾಗಿದ್ದು, ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಒಟ್ಟು 1985 ಮತಗಟ್ಟೆಗಳಲ್ಲಿ ಏ.18 ರಂದು ಮತದಾನಕ್ಕೆ ಒಟ್ಟು 8734 ಸಿಬ್ಬಂದಿಯನ್ನು ನಿಯೋಜಿಸಿದೆ.

Advertisement

ಮತದಾನ ಕೇಂದ್ರಗಳಿಗೆ 2184 ಅಧ್ಯಕ್ಷಾಧಿಕಾರಿ, 2184 ಸಹಾಯಕ ಅಧ್ಯಕ್ಷಾಧಿಕಾರಿ, 4368 ಎರಡನೇ ಮತ್ತು ಮೂರನೇ ಮಗಟ್ಟೆ ಅಧಿಕಾರಿಗಳನ್ನು ನಿಯೀಜಿಸಲಾಗಿದೆ. ಈ ಎಲ್ಲಾ ಸಿಬ್ಬಂದಿಗೂ ಈಗಾಗಲೇ ತರಬೇತಿ ನೀಡಿದ್ದು, ಇವರೆಲ್ಲರೂ ಏ.17 ರಂದು ಬೆಳಗ್ಗೆ 6 ಗಂಟೆಗೆ ಆಯಾ ತಾಲೂಕುಗಳ ತಾಲೂಕು ಕಚೇರಿಗಳ ಬಳಿ ಮಸ್ಟರಿಂಗ್‌ ನಂತರ

ಇವಿಎಂ ಮತ್ತು ವಿ.ವಿ.ಪ್ಯಾಟ್‌ ಹಾಗೂ ಚುನಾವಣಾ ಮತದಾನದ ಸಾಮಗ್ರಿಗಳೊಂದಿಗೆ ಹೊರಟು 8 ಗಂಟೆಯೊಳಗೆ ಆಯಾ ಮತದಾನ ಕೇಂದ್ರಗಳಿಗೆ ತಲಪುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.

ವಾಹನ ವ್ಯವಸ್ಥೆ: ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 300 ಬಸ್‌ಗಳು ಸೇರಿದಂತೆ ಒಟ್ಟಾರೆ 495 ವಾಹನಗಳ ವ್ಯವಸ್ಥೆ ಮಾಡಿದ್ದು, ಹಾಸನದಿಂದ 34 ಬಸ್‌ಗಳು ತೆರಳಲಿವೆ. ಶ್ರವಣಬೆಳಗೊಳ ಕ್ಷೇತ್ರಕ್ಕೆ ಚನ್ನರಾಯಪಟ್ಟಣದಿಂದ 39, ಅರಸೀಕೆರೆ-44, ಬೇಲೂರು-38, ಹೊಳೆನರಸೀಪುರ-50, ಅರಕಲಗೂಡು-52 ಹಾಗೂ ಸಕಲೇಶಪುರದಿಂದ 43 ಬಸ್‌ಗಳನ್ನು ಚುನಾವಣಾ ಅಧಿಕಾರಿ ಮತ್ತು ಸಿಬ್ಬಂದಿಗಳ ಸಾರಿಗೆ ಸೌಲಭ್ಯಕ್ಕಾಗಿ ನಿಯೋಜಿಸಿದೆ. ಇದಲ್ಲದೆ ಚುನಾವಣಾ ಕರ್ತವ್ಯಗಳಿಗೆ 102 ಜೀಪ್‌, 28, ಮ್ಯಾಕ್ಸಿಕ್ಯಾಬ್‌,65 ಮಿನಿಬಸ್‌ಗಳ ವ್ಯಸ್ಥೆ ಮಾಡಲಾಗಿದೆ ಎಂದು ವಿವರ ನೀಡಿದರು.

237 ಸೆಕ್ಟರ್‌ ಅಧಿಕಾರಿಗಳು: 10 ರಿಂದ 12 ಮತಗಟ್ಟೆಗಳಿಗೆ ಒಬ್ಬರಂತೆ ಒಟ್ಟು 237 ಸೆಕ್ಟರ್‌ ಅಧಿಕಾರಿಗಳನ್ನು ನೇಮಿಸಿ ಅವರಿಗೆ ಮ್ಯಾಜಿಸಟೇರಿಯಲ್‌ ಅಧಿಕಾರ ನೀಡಿದ್ದು, ಈ ಅಧಿಕಾರಿಗಳು ಗಸ್ತು ನಡೆಸಲು 237 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಆಯಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗನುಗುಣವಾಗಿ ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸಲು ಪಾಳಿ ಆಧಾರದಲ್ಲಿ 28 ವಿಶೇಷ ಫ್ಲೈಯಿಂಗ್‌ ಸ್ವಾಡ್‌ ತಂಡಗಳನ್ನು ನೇಮಿಸಲಾಗಿದೆ ಎಂದರು.

Advertisement

ಮತಗಟ್ಟೆಗಳಿಗೆ ಭದ್ರತೆ: ಹಿಂದಿನ ಚುನಾವಣೆಗಳಲ್ಲಿ ನಡೆದ ಘಟನಾವಳಿಗಳ ಅಧರಿಸಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಲು ಪೂರಕವಾಗಿ 80 ಮತದಾನ ಕೇಂದ್ರಗಳಿಗೆ ಅರೆಸೇನಾ ಪಡೆ ಯೋಧರನ್ನು ನೇಮಿಸಲಾಗಿದೆ.

ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣ, ಮೈಕ್ರೋ ಅಬ್ಸರ್ವರ್‌ಗಳ ನೇಮಕ, ವೆಬ್‌ ಕಾಸ್ಟಿಂಗ್‌ ವ್ಯವಸ್ಥೆ ಮಾಡಿದ್ದು, 144 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ನಡೆಯಲಿದ್ದು, 247 ಮಂದಿ ಮೈಕ್ರೋ ಅಬ್ಸರ್ವರ್ ನೇಮಕ ಮಾಡಲಾಗಿದೆ. 45 ಮತಗಟ್ಟೆಗಳಲ್ಲಿ ವಿಡಿಯೋಗ್ರಫಿ ನಡೆಯಲಿದೆ ಎಂದು ಹೇಳಿದರು.

15 ವಿಶೇಷ ಮತಗಟ್ಟೆಗಳು: ಜಿಲ್ಲೆಯಲ್ಲಿ ಮಹಿಳೆಯರನ್ನು ಪ್ರತಿನಿಧಿಸುವ 2 ಸಖೀ ಮತಗಟ್ಟೆ , ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಪಾರಂಪರಿಕ ಮತಗಟ್ಟೆ ಮತ್ತು ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ದಿವ್ಯಾಂಗ ಮತಟ್ಟೆ ಸೇರಿ 16 ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗಿದೆ.

15,339 ದಿವ್ಯಾಂಗ ಮತದಾರರು: ಜಿಲ್ಲೆಯಲ್ಲಿ ಒಟ್ಟು 15,339 ದಿವ್ಯಾಂಗ ಮತದಾರರನ್ನು ಗುರುತಿಸಿದ್ದು, ಆ ಪೈಕಿ 1182 ಕಿವುಡ ಮತ್ತು ಮೂಕ ಮತದಾರರು, 20 74 ತೀವ್ರ ದಿವ್ಯಾಂಗರ ಮತದಾರರು ಮತದಾನ ಮಾಡಲು ಆಟೋ ವ್ಯವಸ್ಥೆ ಮಾಡಿದ್ದು, ಪ್ರತಿಯೊಬ್ಬ ಮತದಾರನಿಗೂ 50 ರೂ. ವೆಚ್ಚವನ್ನು ಭರಿಸಲಾಗುವುದು.

ಅವರ ಸಹಾಯಕ್ಕಾಗಿ 18 ವರ್ಷದ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರಾಗಿ ನೇಮಿಸಿಕೊಳ್ಳಲಾಗಿದ್ದು, ದಿವ್ಯಾಂಗರ ಮತದಾನಕ್ಕೆ ಸ್ವಯಂ ಸೇವಕರು ನೆರವಾಗಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಜಿಪಂ ಸಿಇಒ ಕೆ.ಎನ್‌.ವಿಜಯಪ್ರಕಾಶ್‌ ಅವರು ತಿಳಿಸಿದರು.

ಮತದಾನ ಕೇಂದ್ರಗಳಲ್ಲಿ ಸೌಲಭ್ಯ: ಮತದಾನ ಕೇಂದ್ರಗಳಲ್ಲಿ ಮತದಾರರ ಸಹಾಯ ಕೇಂದ್ರ, ಕುಡಿಯುವ ನೀರು ಸೌಲಭ್ಯ, ಶೌಚಾಲಯ ಸೌಲಭ್ಯ. ಮತದಾರರಿಗೆ ನೆರವಾಗಲು ಮಾರ್ಗಸೂಚಿ ಅಳವಡಿಕೆ, ಆಯ್ದ ಕಡೆಗಳಲ್ಲಿ ಸಂಪೂರ್ಣ ಮಹಿಳಾ ಅಧಿಕಾರಿ, ಸಿಬ್ಬಂದಿಗಳನ್ನೊಳಗೊಂಡ ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ ಎಂದು ತಿಳಿಸಿದರು.

ಮತದಾನಕ್ಕೆ ಗುರ್ತಿನ ಚೀಟಿ: ಮತದಾರರ ಗುರುತಿನ ಚೀಟಿ ಹೊರತುಪಡಿಸಿ ಮತದಾನ ಮಾಡಲು ಭಾರತ ಚುನಾವಣಾ ಆಯೋಗವು ನೀಡಿರುವ ಭಾವಚಿತ್ರವುಳ್ಳ ಮತದಾರರ ಗುರುತಿನ ಚೀಟಿಯನ್ನು ಮತದಾನಾಧಿಕಾರಿಗಳಿಗೆ ತೋರಿಸುವುದು ಕಡ್ಡಾಯವಾಗಿದೆ.

ಮತದಾರರ ಗುರ್ತಿನ ಚೀಟಿಯು ಗುರುತಿನ ಚೀಟಿಯು ಲಭ್ಯವಿಲ್ಲದಿದ್ದಲ್ಲಿ ಪರ್ಯಾಯವಾಗಿ ಭಾರತ ಚುನಾವಣಾ ಆಯೋಗವು ನಿಗದಿಪಡಿಸಿರುವ ದಾಖಲೆಗಳಾದ ಪಾಸ್‌ಪೋರ್ಟ್‌, ಡ್ರೆವಿಂಗ್‌ ಲೈಸನ್ಸ್‌, ರಾಜ್ಯ, ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು.

ಸಾರ್ವಜನಿಕ ವಲಯದ ಬ್ಯಾಂಕ್‌, ಕಿಸಾನ್‌ ಮತ್ತು ಅಂಚೆ ಕಚೇರಿ ಆದಾಯ ತೆರಿಗೆ ಗುರುತಿನ ಚೀಟಿ (ಪಾನ್‌ ಕಾರ್ಡ್‌), ಆರ್‌.ಜಿ.ಐ. ಮತ್ತು ಎನ್‌ಪಿಆರ್‌ ಅವರು ನೀಡಿರುವ ಭಾವಚಿತ್ರವಿರುವ ಸ್ಮಾರ್ಟ್‌ ಕಾರ್ಡ್‌, ಎಂಎನ್‌ಆರ್‌ಇಜಿಎ ನೀಡಿರುವ ಉದ್ಯೋಗ ಗುರುತಿನ ಚೀಟಿ.

ಭಾವಚಿತ್ರವಿರುವ ಆರೋಗ್ಯ ವಿಮಾ ಯೋಜನೆ ಸ್ಮಾರ್ಟ್‌ ಕಾರ್ಡ್‌ಗಳು, ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರರುವ ಪಿಂಚಣಿ ಪಾವತಿ ಆದೇಶಗಳು ಅಥವಾ ಮಾಜಿ ಯೋಧರ ಪಿಂಚಣಿ ಪುಸ್ತಕ, ಪಿಂಚಣಿ ಸಂದಾಯ ಆದೇಶಗಳಂತಹ ಪಿಂಚಣಿ ದಾಖಲೆಗಳು, ವೃದ್ಧಾಪ್ಯ ವೇತನ ಆದೇಶಗಳು, ವಿಧವಾ ವೇತನ ಆದೇಶಗಳು, ಎಂಪಿ, ಎಂಎಲ್‌ಎ, ಎಂಎಲ್‌ಸಿ ಗಳಿಗೆ ನೀಡಿರುವ ಗುರುತಿನ ಚೀಟಿಗಳು, ಆಧಾರ್‌ ಕಾರ್ಡ್‌ ಸೇರಿದಂತೆ ಯಾವುದಾದರೂ ಒಂದನ್ನು ಗುರುತಿನ ಚೀಟಿಯಾಗಿ ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ ಎಂದರು.

ನಾಳೆ ರಜೆ ಘೋಷಣೆ: ಏ.18 ರಂದು ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಮತ ಕ್ಷೇತ್ರಗಳ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ, ವಿವಿಧ ಸಂಘ ಸಂಸ್ಥೆಗಳಿಗೆ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆಯನ್ನು ಸರ್ಕಾರವು ಘೋಷಿಸಿದೆ ಎಂದು ಹೇಳಿದರು.

ಪಾನ ನಿರೋಧ ದಿನ: ಮತದಾನ ಮತ್ತು ಮತ ಎಣಿಕೆ ಕಾರ್ಯಗಳು ಸುಗಮವಾಗಿ ನಡೆಯಲು ಏ.16 ಸಂಜೆ 6 ಗಂಟೆಯಿದ ಏ.19 ರ ರಂದು ಬೆಳಗ್ಗೆ 6 ಗಂಟೆವರೆಗೆ ಮತ್ತು ಮೇ. 22 ರಂದು ಮಧ್ಯರಾತ್ರಿ 12 ಗಂಟೆಯಿಂದ ಮೇ. 24 ರಂದು ಬೆಳಗ್ಗೆ 6 ಗಂಟೆವರೆಗೆ ಹಾಸನ ಜಿಲ್ಲೆಯಾದ್ಯಂತ ಪಾನ ನಿರೋಧ ದಿನಗಳೆಂದು ಘೋಷಿಸಲಾಗಿದೆ.

ಆ ದಿನಗಳಂದು ಮದ್ಯ ಶೇಖರಣೆ, ಮದ್ಯ ಮಾರಾಟ ಹಾಗೂ ಸರಬರಾಜು ಮಾಡುವಂತಹ ಎಲ್ಲಾ ಬಗೆಯ ಸ್ಟಾರ್‌ ಹೋಟೆಲ್‌ಗ‌ಳು, ಡಾಬಾಗಳು, ರೆಸ್ಟೋರೆಂಟ್‌ಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ಹಾಗೂ ಮದ್ಯ ಸಾಗಾಟ ಮತ್ತು ಸರಬರಾಜು ಮಾಡುವುದನ್ನು ಸಹ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.

1.75 ಕೋಟಿ ರೂ. ಮದ್ಯ ವಶ: ಮಾದರಿ ನೀತಿ ಸಂತೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದ್ದು, ಈವರೆಗೂ ಜಿಲ್ಲೆಯಲ್ಲಿ ಮಾದರಿ ನೀತಿ ಸಂತೆಯ ಒಟ್ಟು 16 ಉಲ್ಲಂಘನೆಯ ಪ್ರಕರಣಗಳನ್ನು ದಾಖಲಿಸಲಾಗಿದೆ. ಒಟ್ಟು 22,28 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. 4.76 ಲಕ್ಷ ರೂ. ಮೌಲ್ಯದ ಕುಕ್ಕರ್‌, ಸೀರೆಗಳು ಹಾಗೂ 1.75 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದು, ಜಿಲ್ಲೆಯಲ್ಲಿ 41 ದ್ವಿಚಕ್ರ, 1 ಆಟೋ, 2 ಕಾರು ಮತ್ತು 2 ಲಾರಿಗಳನ್ನು ವಶಪಡಿಸಿಕೊಳ್ಳಗಿದೆ ಎಂದು ವಿವರ ನೀಡಿದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next