ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು 2015ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದ ಒಟ್ಟು ಅಭ್ಯರ್ಥಿಗಳ ಪೈಕಿ ಶನಿವಾರ ನಡೆದ ಮುಖ್ಯ ಪರೀಕ್ಷೆಗೆ ಗೈರು ಹಾಜರಾಗುವ ಮೂಲಕ ಸುಮಾರು 800 ಅಭ್ಯರ್ಥಿಗಳು ತಮಗೇ ತಾವೇ ಅನರ್ಹತೆಯ “ಷರಾ’ ಬರೆದುಕೊಂಡಿದ್ದಾರೆ.
ಹೌದು! 2015ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಎ ಮತ್ತು ಬಿ ಗ್ರೂಪ್‌ನ 428 ಹುದ್ದೆಗಳ ನೇಮಕಾತಿಗೆ ಶನಿವಾರದಿಂದ ಮುಖ್ಯ ಪರೀಕ್ಷೆ ಆರಂಭವಾಗಿದೆ. ಮೊದಲ ದಿನ ನಡೆದ ಕಡ್ಡಾಯ ಕನ್ನಡ ಹಾಗೂ ಕಡ್ಡಾಯ ಇಂಗ್ಲಿಷ್ ವಿಷಯದ ಪರೀಕ್ಷೆ ನಡೆದಿದ್ದು, ಇದರಲ್ಲಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದ ಒಟ್ಟು 8 ಸಾವಿರ ಅಭ್ಯರ್ಥಿಗಳ ಪೈಕಿ 866 ಮಂದಿ ಗೈರು ಹಾಜರಾಗಿದ್ದರು.
ಫಲಿತಾಂಶ ಅಪ್ರಕಟ: ಕಡ್ಡಾಯ ಕನ್ನಡ, ಇಂಗ್ಲಿಷ್ ಪತ್ರಿಕೆಯನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಉತ್ತೀರ್ಣರಾಗಲೇಬೇಕು. ಶನಿವಾರದ ಪರೀಕ್ಷೆಗೆ ಗೈರು ಹಾಜರಾದವರು ಮುಂದಿನ ಪರೀಕ್ಷೆ ಬರೆಯಬಹುದು ಆದರೆ, ಉಳಿದ ವಿಷಯಗಳಲ್ಲಿ ಎಷ್ಟೇ ಅಂಕಗಳನ್ನು ಪಡೆದುಕೊಂಡಿರೂ, ಅರ್ಹತಾ ಕಡ್ಡಾಯ ಪರೀಕ್ಷೆಗೆ ಗೈರು ಹಾಜರಾದರೆ, ಅಥವಾ ಅನುತ್ತೀರ್ಣರಾದರೆ ಅಂತಹ ಅಭ್ಯರ್ಥಿಗಳ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದಿಲ್ಲ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ತಲಾ 150 ಅಂಕಗಳ ಪರೀಕ್ಷೆಯಲ್ಲಿ ಶೇ.52.5ರಷ್ಟು ಅಂಕಗಳು ಪಡದರೆ ಮಾತ್ರ, ಅಂತಹ ಅಭ್ಯರ್ಥಿಗಳ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಆದರೆ, ಅರ್ಹತಾ ಕಡ್ಡಾಯ ಪರೀಕ್ಷೆಯ ಅಂಕಗಳು ಮುಂದಿನ ಸಂದರ್ಶನ ಅಥವಾ ನೇಮಕಾತಿ ಪ್ರಕ್ರಿಯೆಗೆ ಪರಿಗಣಿಸಲ್ಪಡುವುದಿಲ್ಲ.
ಗೈರಾದವರ ಸಂಖ್ಯೆ: ಬೆಂಗಳೂರು ಹಾಗೂ ಹುಬ್ಬಳ್ಳಿಯ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಿತು. ಬೆಂಗಳೂರು ಕೇಂದ್ರದಲ್ಲಿ ನಡೆದ ಪರೀಕ್ಷೆಗೆ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದಿದ್ದ 5,328ಗಳ ಪೈಕಿ 4,736 ಅಭ್ಯರ್ಥಿಗಳು ಹಾಜರಾಗಿದ್ದು, 565 ಅಭ್ಯರ್ಥಿಗಳು ಗೈರು
ಹಾಜರಾಗಿದ್ದರು. ಅದೇ ರೀತಿ ಹುಬ್ಬಳ್ಳಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಪರೀಕ್ಷೆಗೆ ಅರ್ಹತೆ ಪಡೆದಿದ್ದ 2,685 ಅಭ್ಯರ್ಥಿಗಳ ಪೈಕಿ 2,384 ಅಭ್ಯರ್ಥಿಗಳು ಹಾಜರಾಗಿ, 301 ಅಭ್ಯರ್ಥಿಗಳು ಗೈರಾಗಿದ್ದರು. ಈ ರೀತಿ ಎರಡೂ ಪರೀಕ್ಷಾ ಕೇಂದ್ರಗಳಲ್ಲಿ 8 ಸಾವಿರ ಆಭ್ಯರ್ಥಿಗಳಲ್ಲಿ 866 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು.
ಪರೀಕ್ಷೆ: ಡಿ.17 ಪ್ರಬಂಧ, ಡಿ.19ಕ್ಕೆ ಸಾಮಾನ್ಯ ಅಧ್ಯಯನ ಪತ್ರಿಕೆ 1 ಮತ್ತು 2, ಡಿ.21 ರಂದು ಸಾಮಾನ್ಯ ಅಧ್ಯಯನ ಪತ್ರಿಕೆ 2 ಮತ್ತು 4 ಹಾಗೂ ಡಿ.23ರಂದು ಐಚ್ಛಿಕ ವಿಷಯದ ಪರೀಕ್ಷೆ ನಡೆಯಲಿದೆ ಎಂದು ಕೆಪಿಎಸ್‌ಸಿ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ. ಅಂಧ ಅಭ್ಯರ್ಥಿಗಳಿಗೆ ನಿರಾಸೆ: ಪರೀಕ್ಷೆಯ ಒಟ್ಟು ಅವಧಿಯಲ್ಲಿ ಈ ಮೊದಲು ಅಂಧ ಮತ್ತು ದೃಷ್ಟಿ ಮಾಂದ್ಯ ಅಭ್ಯರ್ಥಿಗಳಿಗೆ ಪ್ರತಿ ಗಂಟೆಗೆ 10 ನಿಮಿಷ ಹೆಚ್ಚುವರಿ ಕಾಲಾವಕಾಶ ನೀಡಲಾಗುತ್ತಿತ್ತು. ಆದರೆ, ಈ ಬಾರಿ 20 ನಿಮಿಷ ನೀಡುವುದಾಗಿ ಕೆಪಿಎಸ್‌ಸಿ ಹೇಳಿತ್ತು. ಕೊನೆ ಕ್ಷಣದಲ್ಲಿ 20ರ ಬದಲು 10 ನಿಮಿಷವಷ್ಟೇ ಹೆಚ್ಚುವರಿ ಕಾಲಾವಕಾಶ ಸಿಕ್ಕಿದ್ದಕ್ಕೆ ಅಭ್ಯರ್ಥಿಗಳಲ್ಲಿ ಬೇಸರ ಕಂಡು ಬಂತು.
428 ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆ ನಡೆದ ಬಳಿಕ 1:20ರ ಅನುಪಾತದಲ್ಲಿ ಒಟ್ಟು 237 ಅಂಧ ಹಾಗೂ ದೃಷ್ಟಿ ಮಾಂದ್ಯ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದರು. ಈ ಪೈಕಿ 29 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಿಲ್ಲ. ವೈದ್ಯಕೀಯ ಹಾಗೂ ತಾಂತ್ರಿಕ ಕಾರಣಗಳಿಂದಾಗಿ 23 ಅಭ್ಯರ್ಥಿಗಳ ಅರ್ಜಿ ತಿರಸ್ಕೃತವಾಯಿತು. ಉಳಿದ 185 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 75 ಅಭ್ಯರ್ಥಿಗಳಿಗೆ ಸ್ವತಃ ಕರ್ನಾಟಕ ಲೋಕಸೇವಾ ಆಯೋಗದಿಂದ ಪರೀಕ್ಷಾ ಸಹಾಯಕರನ್ನು ನೀಡಲಾಗಿದೆ. ಉಳಿದವರು ಅವರೇ ಸಹಾಯಕರನ್ನು ಆಯ್ಕೆ ಮಾಡಿಕೊಂಡಿದ್ದಾರೆ. 20 ನಿಮಿಷ
ಹೆಚ್ಚುವರಿ ಕಾಲಾವಕಾಶ ಸಿಗದೇ ಇರುವುದರಿಂದ ಅಭ್ಯರ್ಥಿಗಳಲ್ಲಿ ಬೇಸರಗೊಂಡಿಲ್ಲ ಎಂದು ಕೆಪಿಎಸ್‌ಸಿ ಅಧಿಕಾರಿಗಳು ವಿವರಣೆ ನೀಡುತ್ತಾರೆ.
ಶನಿವಾರ ನಡೆದ ಕಡ್ಡಾಯ ಕನ್ನಡ ಹಾಗೂ ಕಡ್ಡಾಯ ಇಂಗ್ಲಿಷ್ ಪರೀಕ್ಷೆಗೆ 866 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು. ಈ ಕಡ್ಡಾಯ
ಅರ್ಹತಾ ಪರೀಕ್ಷೆಗೆ ಗೈರು ಹಾಜರಾದ ಅಭ್ಯರ್ಥಿಗಳು ಮುಂದಿನ ಪರೀಕ್ಷೆಗಳಿಗೆ ಹಾಜರಾಗಬಹುದು. ಆದರೆ, ಅಂತಿಮ ಫಲಿತಾಂಶದ ವೇಳೆ ಆ ಆಭ್ಯರ್ಥಿಗಳ ಫಲಿತಾಂಶ ಪ್ರಕಟಿಸಲಾಗುವುದಿಲ್ಲ.
●ಎನ್.ಎಸ್. ಪ್ರಸನ್ನಕುಮಾರ್, ಕೆಪಿಎಸ್‌ಸಿ ಕಾರ್ಯದರ್ಶಿ