Advertisement
ರಾಧೆ- ಕೃಷ್ಣರ ಪ್ರೀತಿ ಯಾರಿಗೆ ಗೊತ್ತಿಲ್ಲ. ಜಯದೇವನ ರಾಧೆ, ಮುಂದೆ ಕವಿಗಳನ್ನು, ಪ್ರೇಮಿಗಳನ್ನು ಆವರಿಸಿದ ಪರಿ ಅಚ್ಚರಿ… ರಾಧೆಯ ನಿಷ್ಠೆ ಕೃಷ್ಣನಿಗೂ ಸವಾಲು, ಧನ್ಯತೆ… ಅಷ್ಟು ಪ್ರೀತಿಗೆ ಒಳಗಾಗುವುದು, ಪ್ರೀತಿಸಲ್ಪಡುವುದು ಧನ್ಯತೆಯಲ್ಲದೆ ಮತ್ತೇನು? ಅದನ್ನು ಎಚ್ಚೆಸ್ವಿಯವರ ಭಾವಗೀತೆಗಳಲ್ಲಿ ಓದುವುದೇ ಒಂದು ಸೊಗಸು. ಎಚ್ಚೆಸ್ವಿಯವರ ಕಾವ್ಯವನ್ನು ಅಭ್ಯಸಿಸದವರೂ, ಅವರ ಹೆಸರನ್ನು ಕೇಳದಿರುವ ಜನರೂ, ಅವರ ಭಾವಗೀತೆಗಳ ಮೂಲಕ ರಾಧೆಯನ್ನು ಕಂಡಿರುತ್ತಾರೆ. ಅವರ ಭಾವಗೀತೆಗಳ ಕಾರಣದಿಂದಲೇ ಕೃಷ್ಣನನ್ನು ಸಾಕ್ಷಾತ್ಕರಿಸಿಕೊಂಡಿರುತ್ತಾರೆ. ತನ್ನನ್ನು ಪ್ರೀತಿಸಿದವರಿಗೆ ಕೃಷ್ಣ ಏನೇನು ಕೊಟ್ಟ ಎಂದು “ಪ್ರೀತಿ ಕೊಟ್ಟ ರಾಧೆಗೆ…’ ಎಂಬ ಗೀತೆಯಲ್ಲಿ ಎಚ್ಚೆಸ್ವಿ ಹೇಳುತ್ತಾರೆ ಕೇಳಿ: ತನ್ನನಿತ್ತ ಕೊಳಲಿಗೆ ರಾಗ ತೆತ್ತವನು ಅವನು, ಹಾಲು ಕೊಟ್ಟ ವಿದುರನಿಗೆ ಬಾಳು ಕೊಟ್ಟವನು… ದೇಹವಿಟ್ಟ ಮಣ್ಣಿಗೆ ಜೀವ ಕೊಟ್ಟವನು… ಪ್ರೀತಿ ಕೊಟ್ಟವಳಿಗೆ ಮಾತು ಕೊಟ್ಟವನು… ಅನ್ನ ಕೊಟ್ಟ ಭಕ್ತನಿಗೆ ಹೊನ್ನು ಕೊಟ್ಟವನು… ಇಷ್ಟೆಲ್ಲಾ ಕೊಡುವ ಸಾಮರ್ಥ್ಯವಿದ್ದೂ, ಅಮ್ಮನ ಮುಂದೆ ನಾನು ಬೆಣ್ಣೆ ಕದ್ದಿಲ್ಲವೆಂದು ದೇವರಾಣೆ ಹಾಕುವವನು… ಬೆಣ್ಣೆ ಕದ್ದು ತಿಂದ ಬಾಯಿ ಒರೆಸಿದ ಕೈಗಳನ್ನು ಬೆನ್ನ ಹಿಂದೆ ಮರೆಸಿ ಅಮಾಯಕನಂತೆ ನಿಲ್ಲುವವನು…
Related Articles
Advertisement
ರಾಧಾ- ಮಾಧವರ ಪ್ರೇಮ, ಆ ಕ್ಷಣದ ತಳಮಳ, ವಿರಹ, ಅಲ್ಲಿಯೇ ಇರುವ ಕಂಡೂ ಕಾಣದಂಥ ನಿರ್ಲಕ್ಷ್ಯ- ಇವು ಕಟ್ಟಿಕೊಡುವ ಭಾವತೀವ್ರತೆಯನ್ನು ಆಪ್ತವಾಗಿ ಹೇಳುವ ಎಚ್ಚೆಸ್ವಿ, ಪರಸ್ಪರ ವಿರುದ್ಧವಿದ್ದರೂ ಜೊತೆ ಜೊತೆಗಿರಬಲ್ಲ ಅಭೇದ್ಯ ಸಂಬಂಧದ ಕುರಿತು ಮತ್ತೂಂದು ಭಾವಗೀತೆಯಲ್ಲಿ ಹೇಳುತ್ತಾರೆ: “ನಂಬಬಹುದೇ ಗೆಳತಿ…’ ಎಂಬ ಆ ಗೀತೆಯಲ್ಲಿ, ಕೆಲವು ಜೊತೆಗಳನ್ನು ಹೇಳುತ್ತಾ ಹೋಗುತ್ತಾರೆ… ಅವು ಒಂದಕ್ಕೊಂದು ವಿರುದ್ಧವಾದರೂ, ಒಂದಕ್ಕೊಂದು ಜೊತೆ ಎಂದು ಪರಿಗಣಿಸಲಾಗದಿದ್ದರೂ ಆಗಲಿರಲಾರವು.. ನಗೆಯೊಳಗೆ ಹಗೆ, ನೀರಿನೊಳಗೆ ಧಗೆ ಹೇಳುತ್ತಾ, ನಿನ್ನ ಒಳಗೇ ನಾನಿರುವುದ ನಂಬಬಹುದೇ ಎಂದು ಪ್ರಶ್ನಿಸುತ್ತಲೇ ಅದೆಲ್ಲವೂ ಇದ್ದರೂ ನಾವಿಬ್ಬರೂ ಒಂದೇ ಎನ್ನುವುದನ್ನು ಸೊಗಸಾಗಿ ಹೇಳುತ್ತಾರೆ.
ಸಂಬಂಧಗಳೆಂದರೆ ಹಾಗೇ… ರಾಧೆಯ ರೀತಿ ಎಂದಿಗೂ ಬಾರದವನನ್ನು ಪ್ರೀತಿಸುತ್ತಲೇ ಅವನತ್ತ ತಿರುಗಿಯೂ ನೋಡದೇ ಇದ್ದು ಬಿಡಬಹುದು. ತೂಗುಮಂಚದಲ್ಲಿ ಕೂತ ಸಂತೃಪ್ತ ದಾಂಪತ್ಯ ಪೊರೆಯಬಹುದು. ಸಂಬಂಧಗಳ ಅಳವರಿಯದೆ ನಿಭಾವಣೆಯಲ್ಲಿ ಸೋತು ಒಟ್ಟಿಗಿದ್ದರೂ ಒಟ್ಟಿಗಿರದಂತೆ ಬದುಕು ಸಾಗಿಸಿಬಿಡಬಹುದು ಅಥವಾ ಪರಸ್ಪರ ವೈರುಧ್ಯಗಳಿದ್ದರೂ ಬೇರ್ಪಡಿಸಲಾಗದಂತೆ ಬೆಸೆದುಕೊಂಡು ನಗೆ ಚೆಲ್ಲಬಹುದು… ಎಚ್ಚೆಸ್ವಿ ಭಾವಗೀತೆಗಳು ಮನಮುಟ್ಟುವುದು ಇಂತಹ ಕಾರಣಗಳಿಗಾಗಿ.
ಎಚ್ಚೆಸ್ವಿ ಟಾಪ್ 8 ಭಾವಗೀತೆಗಳುನಾಕು ದಿನದ ಬಾಳಿಗೆ
ಇರಲಿ ಹಾಲು ಹೋಳಿಗೆ
ಕೆಡಿಸಬಹುದೇ ಬಾಳ ಹದವ
ಹುಳಿಯ ಹಿಂಡಿ ಹಾಲಿಗೆ
**********
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎಲ್ಲ ಸೇರಿ ನನ್ನ ಬಾಯ್ಗೆ ಬೆಣ್ಣೆ ಮೆತ್ತಿದರಮ್ಮ
**********
ತೂಗುಮಂಚದಲ್ಲಿ ಕೂತು
ಮೇಘಶ್ಯಾಮ ರಾಧೆಗಾತು
ಆಡುತಿಹನು ಏನೋ ಮಾತು- ರಾಧೇ ನಾಚುತಿದ್ದಳು
*******
ಹುಚ್ಚು ಖೋಡಿ ಮನಸು
ಅದು ಹದಿನಾರರ ವಯಸು
ಮಾತುಮಾತಿಗೇಕೋ ನಗೆ
ಮರುಘಳಿಗೆಯೇ ಮೌನ
ಕನ್ನಡಿ ಮುಂದಷ್ಟು ಹೊತ್ತು
ಬರೆಯದಿರುವ ಕವನ
********
ಲೋಕದ ಕಣ್ಣಿಗೆ ರಾಧೆಯು ಕೂಡ
ಎಲ್ಲರಂತೆ ಒಂದು ಹೆಣ್ಣು
ನನಗೋ ಆಕೆ ಕೃಷ್ಣನ ತೋರುವ
ಪ್ರೀತಿಯು ನೀಡಿದ ಕಣ್ಣು
********
ನನ್ನ ಓಲೆ ಓಲೆಯಲ್ಲ
ಮಿಡಿವ ಒಂದು ಹೃದಯ
ಒಡೆಯಬೇಡ ಒಲವಿಲ್ಲದೆ
ನೋಯುತ್ತಿರುವ ಎದೆಯ
************
ಬಯಸಿದೆ ನಿನ್ನನು ಭಾವದ ಮೇಳಕೆ
ಮಿಡಿದಿದೆ ಎದೆಯಿದು ಯಾವುದೊ ತಾಳಕೆ
*********
ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವಾ… ಮಾಲಿನಿ ಗುರುಪ್ರಸನ್ನ