ಪುತ್ತೂರು: ತಾಲೂಕಿನ ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ನಿರಂತರ ಉತ್ತಮ ಮಳೆಯಾಗಿದೆ. ಬುಧವಾರ ರಾತ್ರಿಯಿಡೀ ಮಳೆ ಸುರಿದಿದೆ. ಸಿಡಿಲು ರಹಿತ, ಗಾಳಿ ಸಹಿತ ಸುರಿದ ಮಳೆಯಿಂದ ಹಳ್ಳ, ಹೊಳೆಗಳಲ್ಲಿ ನೀರಿನ ಹರಿವು ಜೋರಾಗಿದೆ. ಬುಧವಾರ ಬೆಳಗ್ಗಿನಿಂದ ಗುರುವಾರ ಬೆಳಗ್ಗಿನ 24 ಗಂಟೆಗಳ ಅವಧಿಯಲ್ಲಿ ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ 142.4 ಮಿ.ಮೀ. ಸರಾಸರಿ ಮಳೆ ಸುರಿದಿದೆ. ಪುತ್ತೂರು ನಗರದಲ್ಲಿ 180 ಮಿ.ಮೀ. ಮಳೆಯಾಗಿದೆ. ಉಪ್ಪಿನಂಗಡಿಯಲ್ಲಿ 157.4 ಮಿ.ಮೀ., ಶಿರಾಡಿಯಲ್ಲಿ 125.6 ಮಿ.ಮೀ., ಕೊಯಿಲದಲ್ಲಿ 191.4 ಮಿ.ಮೀ., ಐತೂರುನಲ್ಲಿ 69 ಮಿ.ಮೀ., ಕಡಬದಲ್ಲಿ131.4 ಮಿ.ಮೀ. ಸಹಿತ ತಾಲೂಕಿನಾದ್ಯಂತ ಒಟ್ಟು 854.8 ಮಿ.ಮೀ. ಮಳೆ ಸುರಿದಿದೆ. ಪುತ್ತೂರು ನಗರದಲ್ಲಿ ಅಧಿಕ ಹಾಗೂ ಐತ್ತೂರು ಭಾಗದಲ್ಲಿ ಕಡಿಮೆ ಮಳೆ ಸುರಿದಿದೆ.
ವಿದ್ಯುತ್ ವ್ಯತ್ಯಯ
ನಿರಂತರ ಗಾಳಿ ಮಳೆಯ ಕಾರಣ ಗ್ರಾಮಾಂತರ ಭಾಗಗಳಲ್ಲಿ ಆಗಾಗ್ಗೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಹಗಲು ಸಮಯ ದಲ್ಲೂ ಇದು ಮುಂದುವರೆದಿದೆ. ತಂತಿಗಳಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಒಂದಷ್ಟು ಹಾನಿ, ಸಂಪರ್ಕ ವ್ಯತ್ಯಯ ಉಂಟಾಗಿದೆ ಎಂದು ಮೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ವಿದ್ಯುತ್ ಕಂಬ ಧರೆಗೆ
ಪುತ್ತೂರು: ಮಳೆ – ಗಾಳಿಯಿಂದ ಪುತ್ತೂರು ವಿಭಾಗ ವ್ಯಾಪ್ತಿಯಲ್ಲಿ 17 ವಿದ್ಯುತ್ ಕಂಬಗಳು ಧರೆಗುರುಳಿವೆ. ಫಿಲೋನಗರದಲ್ಲಿ 1 ವಿದ್ಯುತ್ ಪರಿವರ್ತಕಕ್ಕೆ ಹಾನಿಯಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.