ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿತರಲ್ಲಿ ಒಮ್ಮಿಂದೊಮ್ಮೆಲೆ ಭಾರಿ ಏರಿಕೆ ಕಂಡು ಬಂದಿದೆ. ರವಿವಾರ ಸಂಜೆಯ ನಂತರ ಇದುವರೆಗೆ ಒಟ್ಟು 84 ಸೋಂಕು ಪ್ರಕರಣಗಳು ಕಂಡು ಬಂದಿದೆ. ಅನ್ಯ ರಾಜ್ಯಗಳಿಂದ ಬರುತ್ತಿರುವ ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಂಡುಬರುತ್ತಿದೆ.
ಬೆಂಗಳೂರು ನಗರದಲ್ಲಿ ಅತೀ ಹೆಚ್ಚು 18 ಪ್ರಕರಣಗಳು ಕಂಡುಬಂದಿದೆ. ( ಇದರಲ್ಲಿ 15 ಪ್ರಕರಣಗಳು ರವಿವಾರವೇ ವರದಿಯಾಗಿದೆ) ಉಳಿದಂತೆ ಮಂಡ್ಯದಲ್ಲಿ 17 ಪ್ರಕರಣಗಳು, ಕಲಬುರಗಿ ಮತ್ತು ರಾಯಚೂರಿನಲ್ಲಿ ತಲಾ ಆರು ಪ್ರಕರಣಗಳು, ಉತ್ತರ ಕನ್ನಡದಲ್ಲಿ ಎಂಟು ಪ್ರಕರಣಗಳು, ಗದಗ, ವಿಜಯಪುರ ಮತ್ತು ಯಾದಗಿರಿಯಲ್ಲಿ ತಲಾ ಐದು ಪ್ರಕರಣಗಳು ಕಂಡು ಬಂದಿದೆ.
ಉಳಿದಂತೆ ಹಾಸನದಲ್ಲಿ ನಾಲ್ಕು ಹೊಸ ಪ್ರಕರಣ, ಕೊಪ್ಪಳದಲ್ಲಿ ಮೂರು ಪ್ರಕರಣಗಳು, ಬೆಳಗಾವಿಯಲ್ಲಿ ಎರಡು ಮತ್ತು ಮೈಸೂರು, ಕೊಡಗು, ದಾವಣಗೆರೆ, ಬೀದರ್ ಮತ್ತು ಬಳ್ಳಾರಿಯಲ್ಲಿ ತಲಾ ಒಂದು ಪ್ರಕರಣ ದೃಢವಾಗಿದೆ.
ಇದುವರೆಗೆ ಸೋಂಕು ಪ್ರಕರಣ ಪತ್ತೆಯಾಗಿರದ ರಾಯಚೂರು ಮತ್ತು ಕೊಪ್ಪಳಕ್ಕೂ ಕೋವಿಡ್-19 ಸೋಂಕು ಕಾಲಿಟ್ಟಿದೆ. ಚಿಕ್ಕಮಗಳೂರು, ಚಾಮರಾಜನಗರ, ರಾಮನಗರ ಹೊರತುಪಡಿಸಿ ರಾಜ್ಯದ 27 ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳಿವೆ.
ಇಂದಿನ ಹೊಸ 84 ಸೋಂಕು ಪ್ರಕರಣಗಳಿಂದ ರಾಜ್ಯದ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 1231ಕ್ಕೆ ಏರಿಕೆಯಾಗಿದೆ. ಇದರಲ್ಲಿ 521 ಮಂದಿ ಗುಣಮುಖರಾಗಿದ್ದಾರೆ. 37 ಜನರು ಕೋವಿಡ್ ಕಾರಣದಿಂದ ಸಾವನ್ನಪ್ಪಿದ್ದು, ಓರ್ವ ಸೋಂಕಿತ ಕೋವಿಡ್ ಅಲ್ಲದ ಕಾರಣದಿಂದ ಮರಣ ಹೊಂದಿದ್ದಾನೆ.