ನವದೆಹಲಿ: 2019 ಮತ್ತು 2021ರ ನಡುವೆ ಕಾನೂನು ಬಾಹಿರ ಚಟುವಟಿಕೆ ನಡೆಸಿದ ಮತ್ತು ವೀಸಾ ಷರತ್ತು ಉಲ್ಲಂಘಿಸಿ ವಾಸ್ತವ್ಯ ಹೂಡಿದ್ದ 117 ಚೀನಾ ಪ್ರಜೆಗಳನ್ನು ಗಡಿಪಾರು ಮಾಡಲಾಗಿದ್ದು, ಸುಮಾರು 81 ಚೀನಾ ನಾಗರಿಕರನ್ನು ಭಾರತ ಬಿಟ್ಟು ಹೋಗುವಂತೆ ನೋಟಿಸ್ ನೀಡಲಾಗಿದೆ ಎಂದು ಮಂಗಳವಾರ(ಆಗಸ್ಟ್ 02) ಲೋಕಭೆಗೆ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ:ನನ್ನ ಹತ್ತಿರ ನಿಮ್ಮ ಆಟ ನಡೆಯುವುದಿಲ್ಲ: ಸಚಿವ ಅಶ್ವತ್ಥನಾರಾಯಣ ವಿರುದ್ಧ ಎಚ್‌ಡಿಕೆ ಆಕ್ರೋಶ
ವೀಸಾ ಷರತ್ತು ಉಲ್ಲಂಘಿಸಿದ ಮತ್ತು ಕಾನೂನು ಬಾಹಿರ ಚಟುವಟಿಕೆಯಲ್ಲಿ ಶಾಮೀಲಾಗಿದ್ದ 726 ಚೀನಿ ಪ್ರಜೆಗಳನ್ನು “ಪ್ರತಿಕೂಲ ಪಟ್ಟಿಯಲ್ಲಿ” ಸೇರಿಸಲಾಗಿದೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಮಾಹಿತಿ ನೀಡಿದ್ದಾರೆ.
ಈಗಾಗಲೇ 2019ರಿಂದ 2021ರವರೆಗೆ 117 ಚೀನಾ ನಾಗರಿಕರನ್ನು ಗಡಿಪಾರು ಮಾಡಲಾಗಿದ್ದು, 81 ಪ್ರಜೆಗಳಿಗೆ ಭಾರತ ಬಿಟ್ಟು ಹೋಗುವಂತೆ ನೋಟಿಸ್ ನೀಡಲಾಗಿದೆ. ಹಾಗೂ 726 ಪ್ರಜೆಗಳನ್ನು ಪ್ರತಿಕೂಲ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವುದಾಗಿ ವರದಿ ತಿಳಿಸಿದೆ.
ಚೀನಾ ಸೇರಿದಂತೆ ವಿದೇಶಗಳಿಂದ ಭಾರತಕ್ಕೆ ಆಗಮಿಸುವ ಎಲ್ಲಾ ಪ್ರಯಾಣಿಕರ ಪ್ರಯಾಣದ ದಾಖಲೆಗಳನ್ನು ಸರ್ಕಾರ ಸಮರ್ಪಕವಾಗಿ ದಾಖಲಿಸಿಕೊಳ್ಳುತ್ತಿದೆ. ಇದಕ್ಕೆ ಸಂಬಂಧಪಟ್ಟ ಅಂಕಿಅಂಶ ಕೂಡಾ ಲಭ್ಯವಿರುವುದಾಗಿ ಹೇಳಿದರು.
ದುರುದ್ದೇಶ ಪೂರಿತವಾಗಿ ಅಥವಾ ಸಮರ್ಥನೀಯವಲ್ಲದ ಕಾರಣಗಳಿಂದ ದೇಶದಲ್ಲಿ ವಾಸ್ತವ್ಯ ಹೂಡಿದ್ದು ಪತ್ತೆಯಾದರೆ ವಿದೇಶಿಯರ ಕಾಯ್ದೆ 1946ರ ಪ್ರಕಾರ, ನೋಟಿಸ್ ನೀಡಲಾಗುತ್ತದೆ ಮತ್ತು ದಂಡವನ್ನು ವಿಧಿಸಲಾಗುತ್ತದೆ ಎಂದು ಸಚಿವ ರೈ ತಿಳಿಸಿದ್ದಾರೆ.