ನವದೆಹಲಿ: 28 ವರ್ಷದ ಕಾಮುಕನೊಬ್ಬ 8ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರ ನಡೆಸಿದ ಪೈಶಾಚಿಕ ಕೃತ್ಯ ದೆಹಲಿಯಲ್ಲಿ ನಡೆದಿದ್ದು, ಮಗು ಐಸಿಯುನಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದು, ಮೂರು ಗಂಟೆಗಳ ಕಾಲ ಸರ್ಜರಿ ನಡೆಸಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ರಕ್ತಸ್ರಾವದ ಮಡುವಿನಲ್ಲಿ ಬಿದ್ದಿದ್ದ ಮಗುವನ್ನು ಭಾನುವಾರ ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಪಶ್ಚಿಮ ದೆಹಲಿಯ ಸುಭಾಶ್ ನಗರದಲ್ಲಿ ನಡೆದಿದೆ.
ಮಗುವಿನ ಪೋಷಕರಿಬ್ಬರು ಕೆಲಸಕ್ಕೆ ಹೋಗಿದ್ದ ವೇಳೆ ಸಂಬಂಧಿಯೇ ಮನೆಯಲ್ಲಿ ಮಗುವಿನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ನಾನು ಕೆಲಸದ ನಿಮಿತ್ತ ಮನೆಯಿಂದ ಹೊರಟಿದ್ದೆ. ನನ್ನ ಹೆಂಡತಿಯೂ ಕೆಲದ ಹಿನ್ನೆಲೆಯಲ್ಲಿ ಕೆಲ ಹೊತ್ತಿನಲ್ಲಿ ಮನೆಯಿಂದ ಹೊರಟಿದ್ದಳು ಎಂದು ಮಗುವಿನ ತಂದೆ ತಿಳಿಸಿದ್ದು, ಮಗುವನ್ನು ಸಂಬಂಧಿ ನೋಡಿಕೊಳ್ಳುತ್ತಿದ್ದರು.
ಮನೆಕೆಲಸ ನಿರ್ವಹಿಸುತ್ತಿರುವ ತಾಯಿ ಮನೆಗೆ ವಾಪಸ್ ಬಂದಾಗ ರಕ್ತದ ಮಡುವಿನಲ್ಲಿ ಮಗು ಅಳುತ್ತ ಕುಳಿತಿದ್ದು ಕಂಡು ಬಂದಿರುವುದಾಗಿ ವರದಿ ವಿವರಿಸಿದೆ. ಆಸ್ಪತ್ರೆಗೆ ದಾಖಲಿಸಿದಾಗ ಮಗುವಿನ ಮೇಲೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿತ್ತು.
ಮಗುವಿನ ಸಹೋದರ ಸಂಬಂಧಿಯೇ ಈ ಕೃತ್ಯ ಎಸಗಿರಬೇಕೆಂದು ಮಗುವಿನ ತಂದೆ ಪೊಲೀಸರಿಗೆ ತಿಳಿಸಿದ್ದು, ಕಾಮುಕ ವ್ಯಕ್ತಿಯನ್ನು ಬಳಿಕ ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತನಿಖೆಯ ವೇಳೆ ಅತ್ಯಾಚಾರ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.