Advertisement

ವಿದ್ಯುತ್‌ ಸ್ವಾವಲಂಬಿಯಾದ 8 ಗ್ರಾಪಂಗಳು; ಆರ್ಥಿಕ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ

05:05 PM Jan 02, 2024 | Team Udayavani |

ಉದಯವಾಣಿ ಸಮಾಚಾರ
ಲಕ್ಷ್ಮೇಶ್ವರ: ವಿದ್ಯುತ್‌ ಕಣ್ಣಾಮುಚ್ಚಾಲೆ, ಲೋಡ್‌ ಶೆಡ್ಡಿಂಗ್‌, ಮಳೆ-ಗಾಳಿ, ವಿದ್ಯುತ್‌ ಬಿಲ್‌ ಪಾವತಿಸದಿರುವುದು, ತಾಂತ್ರಿಕ ತೊಂದರೆ ಸೇರಿ ಹಲವು ಕಾರಣಗಳಿಂದ ವಿದ್ಯುತ್‌ ಸಂಪರ್ಕ ಕಡಿತವಾಗಿ ಸಾರ್ವಜನಿಕ ಮತ್ತು ಆಡಳಿತ ಸೇವೆ ಸ್ಥಗಿತಗೊಳ್ಳುವುದನ್ನು ತಪ್ಪಿಸಲು ಗ್ರಾಮ ಪಂಚಾಯಿತಿಗಳು ಸೋಲಾರ್‌ ವ್ಯವಸ್ಥೆ (ಸೋಲಾರ್‌ ರೂಫ್‌ ಟಾಪ್‌ ಪಾವರ್‌ ಪ್ಲ್ಯಾಂಟ್‌) ಅಳವಡಿಸಿಕೊಂಡು ವಿದ್ಯುತ್‌ ಸ್ವಾವಲಂಬನೆ ಜತೆಗೆ ಆರ್ಥಿಕ ಸ್ವಾವಲಂಬನೆಯತ್ತ ಗ್ರಾಪಂಗಳು ದಿಟ್ಟ ಹೆಜ್ಜೆ ಇಟ್ಟಿವೆ.

Advertisement

8 ಗ್ರಾಪಂಗಳು ವಿದ್ಯುತ್‌ ಸ್ವಾವಲಂಬಿ: ಲಕ್ಷ್ಮೇಶ್ವರ ತಾಲೂಕಿನ 14 ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ 8 ಗ್ರಾಮ ಪಂಚಾಯಿತಿಗಳು ಸೋಲಾರ್‌ ವ್ಯವಸ್ಥೆ ಅಳವಡಿಸಿಕೊಂಡು ವಿದ್ಯುತ್‌ ಸಂಪರ್ಕವಿಲ್ಲದೇ ಸಾರ್ವಜನಿಕ ಸೇವೆ ಕಲ್ಪಿಸುತ್ತಿವೆ. ರಾಮಗೇರಿ, ಬಾಲೆಹೊಸೂರ, ಶಿಗ್ಲಿ, ಯಳವತ್ತಿ, ದೊಡ್ಡೂರ, ಸೂರಣಗಿ, ಗೋವನಾಳ, ಪು.ಬಡ್ನಿ ಗ್ರಾಪಂ ಪಂಚಾಯಿತಿಗಳು ಸೋಲಾರ್‌ ವ್ಯವಸ್ಥೆಯಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ. ಇನ್ನು ಚಿಕ್ಕದಾದ, ಸ್ವಂತದಲ್ಲದ ಮತ್ತು ಆರ್‌ಸಿಸಿ ಕಟ್ಟಡ ಇಲ್ಲದ ಮಾಡಳ್ಳಿ, ಗೊಜನೂರ, ಹುಲ್ಲೂರ, ಗೋವನಾಳ, ಬಟ್ಟೂರ, ಅಡರಕಟ್ಟಿ ಗ್ರಾಪಂಗಳು ಸೋಲಾರ್‌ ವ್ಯವಸ್ಥೆಯಿಂದ ಹೊರಗುಳಿದಿವೆ. ಈಗಾಗಲೇ ಇದರಲ್ಲಿ 4 ಗ್ರಾಪಂಗಳ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿ ಹಂತದಲ್ಲಿದ್ದು ಅವೂ ಸಹ ಈ ವ್ಯವಸ್ಥೆಗೊಳಪಡಲಿವೆ ಎನ್ನುತ್ತಾರೆ ತಾಪಂ ಅಧಿಕಾರಿಗಳು.

ಸಾರ್ವಜನಿಕ ಸೇವೆಗೆ ಅಡ್ಡಿ ದೂರ: ಕುಡಿಯುವ ನೀರು, ವಿದ್ಯುತ್‌, ಸ್ವಚ್ಛತಾ ಸೇವೆಗಳು, ಸಾರ್ವಜನಿಕರ ಅರ್ಜಿಗೆ ಪ್ರಮಾಣ ಪತ್ರ
ನೀಡುವುದು, ನರೇಗಾ ಸೇವೆ, ತೆರಿಗೆ ಪಾವತಿ ಸೇರಿ ಹತ್ತಾರು ಸೇವೆಗಳನ್ನು ಯಾವುದೇ ಅಡ್ಡಿ ಮತ್ತು ಕಾರಣ ಹೇಳದೇ ಒದಗಿಸಲು ಸೋಲಾರ್‌ ವ್ಯವಸ್ಥೆಯಿಂದ ಸಾಧ್ಯವಾಗಲಿದೆ. ಇನ್ನು ಗ್ರಾಪಂ ನೌಕರ ಮತ್ತು ಸಿಬ್ಬಂದಿ ವರ್ಗ ನಿರಂತರವಾಗಿ ಕರ್ತವ್ಯ ನಿರ್ವಹಿಸಲು, ಇಲಾಖೆಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಒಟ್ಟಿನಲ್ಲಿ ಆಡಳಿತ ಯಂತ್ರ ಚುರುಕಾಗಿ ಮತ್ತು ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ಅಲ್ಲದೇ ಈಗಾಗಲೇ ಸರ್ಕಾರದ ನಿರ್ಧಾರದಂತೆ ಗ್ರಾಪಂಗಳಲ್ಲಿಯೇ ಹತ್ತಾರು ಸೇವೆಗಳನ್ನು ನೀಡಬೇಕಿರುವುದರಿಂದ ಸೋಲಾರ್‌ ವ್ಯವಸ್ಥೆ ಸಾಕಷ್ಟು ಅನುಕೂಲವಾಗಲಿದೆ ಎಂದು ಪಿಡಿಒ ಎನ್‌.ಎಂ ಮಲ್ಲೂರ ಹೇಳುತ್ತಾರೆ.

ವಿದ್ಯುತ್‌ ಬಿಲ್‌ನಿಂದ ಮುಕ್ತಿ: ಪ್ರತಿ ತಿಂಗಳು ಸಾವಿರಾರು ರೂ. ಕರೆಂಟ್‌ ಬಿಲ್‌ ಕಟ್ಟುವ ಗ್ರಾಪಂಗಳು ಸೋಲಾರ್‌ ವ್ಯವಸ್ಥೆ
ಅಳವಡಿಸಿಕೊಂಡಿದ್ದರಿಂದ ಬಿಲ್‌ ಪಾವತಿಸುವ ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಿ ಪಡೆದಿವೆ. ಅಲ್ಲದೇ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಸರ್ಕಾರ ನಿಗದಿಪಡಿಸಿದ ಗುತ್ತಿಗೆದಾರರಿಗೆ 4 ಲಕ್ಷ 86 ಸಾವಿರ ರೂ. ಪಾವತಿಸಿದರೆ 3 ಕೆವಿ ಸಾಮರ್ಥ್ಯ ಸೋಲಾರ್‌ ಮೇಲ್ಛಾವಣಿ ವಿದ್ಯುತ್‌ ಘಟಕ ಸ್ಥಾಪಿಸಿ ಕೊಡುತ್ತಾರೆ ಮತ್ತು 5 ವರ್ಷಗಳ ಕಾಲ ನಿರ್ವಹಣೆ ಮಾಡುತ್ತಾರೆ. ಆದರೆ ಗ್ರಾಮ ಪಂಚಾಯಿತಿಗೆ ಪ್ರತಿ ತಿಂಗಳು 1 ಕೆವಿ ವಿದ್ಯುತ್‌ ಮಾತ್ರ ಬಳಕೆಯಾಗಿ ಉಳಿಯುವ 2 ಕೆವಿ ವಿದ್ಯುತ್‌ ಸ್ಥಳೀಯ ವಿದ್ಯುತ್‌ ಸರಬರಾಜು ಘಟಕಕ್ಕೆ ನೆಟ್‌ ಮೀಟರ್‌ ಮೂಲಕ ಮಾರಾಟ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ. ಇದರಿಂದ ಗ್ರಾಪಂಗಳ ಸಮರ್ಪಕ ಸೇವೆ, ವಿದ್ಯುತ್‌ ಬರ ಹಾಗೂ ಆರ್ಥಿಕ ನಷ್ಟ ತಪ್ಪಿಸುವ ಮಹತ್ವದ ಕಾರ್ಯ ಯೋಜನೆಯನ್ನು ಗ್ರಾಪಂಗಳು ಅಳವಡಿಸಿಕೊಂಡಿವೆ.

ಗ್ರಾಮ ಪಂಚಾಯಿತಿಗಳು ಸೋಲಾರ್‌ ವ್ಯವಸ್ಥೆ ಅಳವಡಿಸಿಕೊಂಡಿರುವುದರಿಂದ ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ನೀಡಲು
ಮತ್ತು ಆಡಳಿತ ಯಂತ್ರ ಚುರುಕಾಗಿಸಲು ಸಾಕಷ್ಟು ಅನಕೂಲ. ಹೆಚ್ಚುವರಿ ವಿದ್ಯುತ್‌ನ್ನು ವಿದ್ಯುತ್‌ ಸರಬರಾಜು ಘಟಕಗಳಿಗೆ ಮಾರುವುದರಿಂದ ಆರ್ಥಿಕ ಸ್ವಾವಲಂಬನೆ, ವಿದ್ಯುತ್‌ ಉಳಿತಾಯ ಜತೆಗೆ ಸರ್ಕಾರದ ಉದ್ದೇಶ ಸಾಕಾರಗೊಳ್ಳುತ್ತದೆ. ಬರುವ ದಿನಗಳಲ್ಲಿ ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಸೋಲಾರ್‌ ವ್ಯವಸ್ಥೆ ಅಳವಡಿಸಲಾಗುವುದು.

Advertisement

ಕೃಷ್ಣಪ್ಪ ಧರ್ಮರ, ತಾಪಂ ಇಒ, ಲಕ್ಷ್ಮೇಶ್ವರ.

*ಮುಕ್ತಾ ಆದಿ

Advertisement

Udayavani is now on Telegram. Click here to join our channel and stay updated with the latest news.

Next