Advertisement

ಮರಗಳ ಆಮದಿಗೆ 8 ಶತಕೋಟಿ ವೆಚ್ಚ!

12:24 PM May 24, 2017 | Team Udayavani |

ಬೆಂಗಳೂರು: ದೇಶದಲ್ಲಿ ಶೇ.20ರಷ್ಟು ಮರಗಳನ್ನು ಕೈಗಾರಿಕಾ ಬಳಕೆಗಾಗಿ ಪ್ರತಿ ವರ್ಷ ಆಮದು ಮಾಡಿಕೊಳ್ಳಲು ಸುಮಾರು 8 ಶತಕೋಟಿ ರೂ. ಖರ್ಚಾಗುತ್ತಿದೆ ಎಂದು ಜಾಗತಿಕ ಕೃಷಿ ಅರಣ್ಯ ಯೋಜನೆ ದಕ್ಷಿಣ ಪ್ರಾಂತ್ಯದ ನಿರ್ದೇಶಕ ಡಾ.ಜಾವೇದ್‌ ರಿಜ್ವಿ ಕಳವಳ ವ್ಯಕ್ತಪಡಿಸಿದರು. ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆಯಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ರಾಷ್ಟ್ರೀಯಮಟ್ಟದ ಕೃಷಿ ಅರಣ್ಯ ಕಾರ್ಯಾಗಾರದಲ್ಲಿ ಮಾತನಾಡಿದರು.

Advertisement

ದೇಶದಲ್ಲಿ ಅರಣ್ಯ ಸಂಪತ್ತಿಗೆ ಕೊರತೆ ಇಲ್ಲ. ಆದರೆ, ಇಲ್ಲಿನ ಬೆಲೆಬಾಳುವ ಅತ್ಯುತ್ತಮ ಗುಣಮಟ್ಟದ ಮರಗಳನ್ನು ಕಳ್ಳಮಾರ್ಗದಲ್ಲಿ ವಿದೇಶಗಳಿಗೆ ಮರಗಳ್ಳರು ಮಾರಾಟ ಮಾಡುತ್ತಿದ್ದಾರೆ. ಬಳಿಕ ಕೈಗಾರಿಕಾ ಉದ್ದೇಶಕ್ಕಾಗಿ ಅಲ್ಲಿಂದ ಹೆಚ್ಚು ಹಣ ಪಾವತಿಸಿ ಮರಗಳನ್ನು ಖರೀದಿ ಮಾಡುವಂತಹ ಪರಿಸ್ಥಿತಿ ಇದೆ. ಈ ಬಗ್ಗೆ ಸರ್ಕಾರಗಳು ಜಾಗೃತಿ ವಹಿಸಬೇಕು. ನಮ್ಮ ದೇಶದ ಅರಣ್ಯ ಸಂಪತ್ತನ್ನು ಉಳಿಸಬೇಕಿದೆ ಎಂದು ಹೇಳಿದರು. 

ಆಫ್ರಿಕಾ, ರಷ್ಯಾ ಸೇರಿದಂತೆ ವಿಶ್ವದ ವಿವಿಧ ದೇಶಗಳ ನೀತಿಗಿಂತ ಭಾರತದ ಅರಣ್ಯನೀತಿ ಅತ್ಯುತ್ತಮವಾಗಿದೆ. ಅರಣ್ಯ ವಿಮಾ ಯೋಜನೆ, ಕೃಷಿ ಅರಣ್ಯ ನೀತಿ ಎಲ್ಲ ಯೋಜನೆಗಳು ಉತ್ತಮವಾಗಿದ್ದು, ಇತರ ದೇಶಗಳಿಗೆ ಮಾದರಿಯಾದ ನೀತಿ ನಮ್ಮದು. ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಾವು ಬಳಸಿಕೊಳ್ಳುವ ಮೂಲಕ ಅಭಿವೃದ್ಧಿ ಸಾಧಿಸಬೇಕಿದೆ ಎಂದರು.

ರಾಷ್ಟ್ರದಲ್ಲಿ ಅರಣ್ಯ ಕ್ಷೇತ್ರವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಕೃಷಿ ಭೂಮಿಯಲ್ಲಿ ಮರಗಳನ್ನು ಬೆಳೆಸಬೇಕು. ಜತೆಗೆ ಬರಡು ಭೂಮಿಗಳಲ್ಲೂ ಕೂಡ ಹಸಿರು ಕ್ರಾಂತಿಯಾಗಬೇಕಿದೆ. ಕೇಂದ್ರ ಸರ್ಕಾರ ಈ ಯೋಜನೆಗೆ ಹೆಚ್ಚು ಮಹತ್ವ ನೀಡಿದ್ದು, ಜಾಗೃತಿ ಮೂಡಿಸುವ ಕಾರ್ಯ ಮತ್ತಷ್ಟು ಚುರುಕುಗೊಳಿಸುವ ಅಗತ್ಯವಿದೆ. 2020-2030 ರ ಅವಧಿಯಲ್ಲಿ ಸುಮಾರು 500 ಮಿಲಿಯನ್‌ ಹೆಕ್ಟೇರ್‌ ಪ್ರದೇಶದಲ್ಲಿ ಮರಗಳನ್ನು ಬೆಳೆಸುವ ಸವಾಲು ನಮ್ಮ ಮೇಲಿದೆ.

ಸಾರ್ವಜನಿಕರಿಗೆ ಸಸಿಗಳನ್ನು ನೆಡುವ ಬಗ್ಗೆ ತಿಳುವಳಿಕೆ ಕಡಿಮೆ ಹಾಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಸಹಾಯದಿಂದ ಮಾಡಲು ಸಲಹೆ ನೀಡಿದರು.  ಕೇಂದ್ರ ಅನುಸಂಧಾನ ಪರಿಷತ್ತಿನ ಸಹಾಯಕ ಮಹಾ ನಿರ್ದೇಶಕ ಡಾ.ಎಸ್‌.ಭಾಸ್ಕರ್‌ ಮಾತನಾಡಿ, ಬರಡು ಭೂಮಿಯಲ್ಲಿ ಸಸಿಗಳನ್ನು ನೆಡುವ ಕೆಲಸಗಳಾಗಿದ್ದು, ಅದರ ಪ್ರಮಾಣ  ಹೆಚ್ಚಬೇಕಿದೆ.

Advertisement

2050ನೇ ಇಸವಿ ಒಳಗೆ ಆಹಾರ, ಪೆಟ್ರೋಲಿಯಂ, ಮರಗಳು ಹೀಗೆ ಎಲ್ಲ ಉತ್ಪನ್ನಗಳ ಪ್ರಮಾಣ ಶೇ.30 ರಿಂದ 50ರಷ್ಟು ಹೆಚ್ಚಿಸಬೇಕಾದ ಸವಾಲಿದೆ. ಜತೆಗೆ  ಆಹಾರ ಉತ್ಪನ್ನಗಳ ಮಟ್ಟಿಗೆ ಸ್ವಾವಲಂಭಿಯಾಗಬೇಕಿದೆ. ಭತ್ತ ಹಾಗೂ ಗೋಧಿಯ ಗುಣಮಟ್ಟ ಹೆಚ್ಚಿಸಿ, ಇಳುವರಿ ಪ್ರಮಾಣ ಜಾಸ್ತಿ ಮಾಡಿದರೆ ಮುಂದಿನ ದಿನಗಳಲ್ಲಿ ಉಂಟಾಗುವ ಆಹಾರ ಅಭದ್ರತೆ ತಪ್ಪಿಸಬಹುದು ಎಂದು ಹೇಳಿದರು.

 ಝಾನ್ಸಿಯ ಕೇಂದ್ರಿಯ ಕೃಷಿ ಅರಣ್ಯ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಓ.ಪಿ.ಚತುರ್ವೇದಿ ಮಾತನಾಡಿ, ಕೃಷಿಯಲ್ಲಿ ಹೊಸ ಪ್ರಯೋಗ, ತಂತ್ರಜಾnನ ಬಳಕೆ ಸೇರಿದಂತೆ ಹಲವು ರೀತಿಯ ಕೆಲಸಗಳು ರಾಜ್ಯದಲ್ಲಾಗುತ್ತಿದ್ದು, ರೈತರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು. 

“ಹಸಿರು ಹವಾಮಾನ ನಿಧಿ’ ಈ ಬಾರಿ ನಮ್ಮ ದೇಶಕ್ಕೆ ಸಿಕ್ಕಿದ್ದು, ಹರಿಯಾಣ ರಾಜ್ಯದ ಅರಣ್ಯ ಅಭಿವೃದ್ಧಿಗಾಗಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಓಡಿಸ್ಸಾ ಹಾಗೂ ಇತರೇ ರಾಜ್ಯಗಳಿಗೆ ದೊರೆಯಲಿದೆ. 
-ಡಾ.ಜಾವೇದ್‌ ರಿಜ್ವಿ, ನಿರ್ದೇಶಕರು, ಜಾಗತಿಕ ಕೃಷಿ ಅರಣ್ಯ ಯೋಜನೆ ದಕ್ಷಿಣ ಪ್ರಾಂತ್ಯ

Advertisement

Udayavani is now on Telegram. Click here to join our channel and stay updated with the latest news.

Next