ಹೈದರಾಬಾದ್: ಬಿಗ್ಬಾಸ್ (Bigg Boss) ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ದಿನಗಳು ಕಳೆಯುತ್ತಿದ್ದಂತೆ ಬಿಗ್ ಬಾಸ್ ತೆಲುಗು-8 (Bigg Boss Telugu 8) ಕುತೂಹಲ ಘಟ್ಟದತ್ತ ಸಾಗುತ್ತಿದೆ.
ನಾಗಾರ್ಜುನ ಅಕ್ಕಿನೇನಿ (Nagarjuna Akkineni) ನಡೆಸಿಕೊಡುವ ಬಿಗ್ ಬಾಸ್ ತೆಲುಗು ಶುರುವಾಗಿ ತಿಂಗಳುಗಳೇ ಕಳೆದಿದೆ. ಈಗಾಗಲೇ ಅನೇಕ ಸ್ಪರ್ಧಿಗಳು ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದು, ಕಾರ್ಯಕ್ರಮದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಹೊಸ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
ತೆಲುಗು ಬಿಗ್ಬಾಸ್ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಖ್ಯಾತ ಯೂಟ್ಯೂಬರ್ ಗಂಗವ್ವ (Youtuber Gangavva) ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ವಯಸ್ಸು 60 ದಾಟಿದರೂ ಗಂಗವ್ವ ಇಂದಿಗೂ ತನ್ನ ವಿಭಿನ್ನ ಕಂಟೆಂಟ್ನಿಂದ ಯೂಟ್ಯೂಬ್ನಲ್ಲಿ ಜನಪ್ರಿಯತೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಹಿರಿಯ ಸ್ಪರ್ಧಿಯಾಗಿರುವ ಗಂಗವ್ವ ಬಂದ ದಿನದಿಂದಲೇ ಮನರಂಜನೆ ಮೂಲಕ ಎಲ್ಲರ ಮನವನ್ನು ಗೆಲುತ್ತಿದ್ದಾರೆ. ವೀಕ್ಷಕರ ಮೆಚ್ಚಿನ ಸ್ಪರ್ಧಿಯಾಗಿ ಗಂಗವ್ವ ಗಮನ ಸೆಳೆದಿದ್ದಾರೆ. ಇದೀಗ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ‘ಮೈ ವಿಲೇಜ್ ಶೋ’ ಮೂಲಕ ಯೂಟ್ಯೂಬ್ ಸ್ಟಾರ್ ಆದ 60 ವರ್ಷದ ಗಂಗವ್ವ..!
ಸೋಮವಾರ ರಾತ್ರಿ (ಅ.21ರಂದು) ಬಿಗ್ಬಾಸ್ ಮನೆಯಲ್ಲಿ ಗಂಗವ್ವ ಅವರಿಗೆ ಹೃದಯಘಾತವಾಗಿದೆ ಎಂದು ವರದಿಯಾಗಿದೆ. ತಕ್ಷಣ ಸಹ ಸ್ಪರ್ಧಿಗಳು ಇದನ್ನು ಬಿಗ್ ಬಾಸ್ಗೆ ತಿಳಿಸಿದ್ದು, ಕೂಡಲೇ ಅವರನ್ನು ತಕ್ಷಣ ವೈದ್ಯಕೀಯ ನೆರವು ಒದಗಿಸಲಾಗಿದೆ ಎಂದು ವರದಿಯಾಗಿದೆ.
ಅಂದಹಾಗೆ ಬಿಗ್ ಬಾಸ್ ಮನೆಗೆ ಗಂಗವ್ವ ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆ ಬಿಗ್ ಬಾಸ್ ಸೀಸನ್ -4 ನಲ್ಲೂ ಗಂಗವ್ವ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಆ ವೇಳೆ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡು ಅರ್ಧದಲ್ಲೇ ಅವರು ಕಾರ್ಯಕ್ರಮದಿಂದ ಹೊರಬಂದಿದ್ದರು.
ಬಿಗ್ ಬಾಸ್ ಸೀಸನ್ -8ನಲ್ಲಿ ಗಂಗವ್ವ ಅವಿನಾಶ್, ರೋಹಿಣಿ, ಮೆಹಬೂಬ್, ಗೌತಮ್ ಅವರೊಂದಿಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದಾರೆ.
‘ಮೈ ವಿಲೇಜ್ ಶೋʼ ಮೂಲಕ ಯೂಟ್ಯೂಬ್ನಲ್ಲಿ ಖ್ಯಾತಿಯಾಗಿರುವ ಗಂಗವ್ವ ತನ್ನ ಹಾಸ್ಯಭರಿತ ವಿಡಿಯೋಗಳಿಂದ ತೆಲಂಗಾಣದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದಾರೆ. ಯೂಟ್ಯೂಬ್ ಮಾತ್ರವಲ್ಲದೆ ತೆಲುಗು ಸಿನಿಮಾದಲ್ಲೂ ಅವರು ನಟಿಸಿದ್ದಾರೆ. ರಾಮ್ ಪೊತಿನೆನಿ ಅವರ ʼಐಸ್ಮಾರ್ಟ್ ಶಂಕರ್ʼ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.