ವಾಷಿಂಗ್ಟನ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ವರು ಗಗನಯಾತ್ರಿಗಳನ್ನು ಸ್ಪೇಸ್‌ಎಕ್ಸ್‌ನ ಕ್ರೂ-8 ನೌಕೆ ಸುರಕ್ಷಿತವಾಗಿ ಶುಕ್ರವಾರ ಭೂಮಿಗೆ ಕರೆತಂದಿದೆ. ನೌಕೆ ಸಮುದ್ರದಲ್ಲಿ ಬೀಳುತ್ತಿದ್ದಂತೆ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ನಾಸಾ ಹೇಳಿದೆ.
ನಾಸಾದ ಗಗನಯಾತ್ರಿಗಳಾದ ಮ್ಯಾಥ್ಯೂ ಡೊಮಿನಿಕ್, ಮೈಕೆಲ್ ಬ್ಯಾರಟ್, ಜೆನೆತ್ ಏಪ್ಸ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗ್ರೆಬಿನ್‌ಕಿನ್ ಇದ್ದಂತಹ ನೌಕೆ ಶುಕ್ರವಾರ ಮೆಕ್ಸಿಕೋ ಬಳಿ ಸಮುದ್ರಕ್ಕೆ ಇಳಿದಿದೆ. ಬಾಹ್ಯಾಕಾಶ ಕೇಂದ್ರದಲ್ಲಿದ್ದ ಸಮಯದಲ್ಲಿ ಇವರು ಸಾಕಷ್ಟು ಸಂಶೋಧನೆಗಳನ್ನು ಕೈಗೊಂಡಿದ್ದರು. ಈ ವರ್ಷ ಮಾರ್ಚ್‌ನಲ್ಲಿ ಈ ನೌಕೆಯನ್ನು ಉಡಾವಣೆ ಮಾಡಲಾಗಿತ್ತು.
ಹೆಚ್ಚು ಮಾಹಿತಿ ನೀಡದ ನಾಸಾ:
ಬಾಹ್ಯಾಕಾಶದಿಂದ ಮರಳುವ ಗಗನಯಾತ್ರಿಗಳಿಗೆ ಹೂಸ್ಟನ್‌ನಲ್ಲಿರುವ ಬೇಸ್‌ನಲ್ಲಿಯೇ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಆದರೆ ಈ ಬಾರಿ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿದ್ದು, ಆತಂಕಕ್ಕೆ ಕಾರಣವಾಗಿತ್ತು. ಆದರೆ ಗಗನಯಾತ್ರಿಗಳ ಖಾಸಗಿತನವನ್ನು ರಕ್ಷಿಸುವ ಸಲುವಾಗಿ ಹೆಚ್ಚಿನ ಮಾಹಿತಿ ನೀಡಲಾಗದು ಎಂದು ನಾಸಾ ಹೇಳಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಮರಳುವ ಮತ್ತೂಂದು ನೌಕೆಯಲ್ಲಿ ಭಾರತ ಮೂಲದ ಸುನಿತಾ ವಿಲಿಯಮ್ಸ್ ಭೂಮಿಗೆ ಮರಳಲಿದ್ದಾರೆ.