ಬೆಂಗಳೂರು: ಮನೆ ನವೀಕರಣ ಗುತ್ತಿಗೆದಾರನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು 5 ಲಕ್ಷ ರೂ. ಲಪಟಾಯಿಸಿದ್ದ 8 ಮಂದಿ ಆರೋಪಿಗಳು ಶ್ರೀರಾಮಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಶ್ರೀರಾಮಪುರದ ಅರುಣ್, ಪ್ರತಾಪ್, ಅಕ್ರಂ, ಅಖೀಲೇಶ್, ಅನ್ಸರ್, ನವೀನ್, ರೆಹಮಾನ್, ಸೈಯದ್ ಬಕಾಸ್ ಬಂಧಿತರು. ಶ್ರೀರಾಂಪುರದ ಮೊಹಮ್ಮದ್ ಮೂಸಾ ಅಪಹರಣಕ್ಕೊಳಗಾದವರು.
ಆ.17ರಂದು ಶ್ರೀರಾಂಪುರದ ಮೊಹಮ್ಮದ್ ಮೂಸಾ ಎಂಬಾತನ ಮನೆ ಬಳಿ ಆಗಮಿಸಿದ್ದ ನವೀನ್, “ನಾನು ನಿಮ್ಮ ಪಕ್ಕದ ಮನೆಯವನಾದ ಸುರೇಶ್‌ನ ಪರಿಚಿತ. ನಮ್ಮ ಮನೆಯ ನವೀಕರಣದ ಆಗಬೇಕು’ ಎಂದು ಹೇಳಿದ್ದ. ಬಳಿಕ ತನ್ನ ಸ್ವಿಫ್ಟ್ ಕಾರಿನಲ್ಲಿ ಮೂಸಾನನ್ನು ಕರೆದೊಯ್ದಿದ್ದ. ಕಾರಿನಲ್ಲಿ ಅದಾಗಲೇ ಮೂರು ಜನ ಇದ್ದು, ಹೋಗುವ ದಾರಿ ಮಧ್ಯೆ ಸುಂಕದಕಟ್ಟೆಯ ಹತ್ತಿರ ಮತ್ತಿಬ್ಬರು ಹತ್ತಿಕೊಂಡಿದ್ದಾರೆ. ಸ್ವಲ್ಪ ದೂರು ಹೋಗುತ್ತಿದ್ದಂತೆ ಮೂಸನ ಮೊಬೈಲ್ ಕಸಿದುಕೊಂಡ ಆರೋಪಿಗಳು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.
ನಂತರ ಚಿಕ್ಕ ಬಾಣಾವರ ಕಡೆಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಥಳಿಸಿದ್ದಾರೆ. ಬಳಿಕ ಅಲ್ಲಿಂದ ಬಿಡದಿಗೆ ಕರೆದುಕೊಂಡು ಹೋದಾಗ ದ್ವಿಚಕ್ರ ವಾಹನದಲ್ಲಿ ಇನ್ನಿಬ್ಬರು ಗ್ಯಾಂಗ್ ಸದಸ್ಯರು ಇವರೊಂದಿಗೆ ಸೇರಿಕೊಂಡಿ ದ್ದರು. ಬಳಿಕ ಮೂಸಾನ ಜೇಬಿನಲ್ಲಿದ್ದ 1,500 ರೂ. ತೆಗೆದುಕೊಂಡು ಅದೇ ಹಣದಲ್ಲೇ ಮದ್ಯ ತರಿಸಿಕೊಂಡು ಕುಡಿದು ಮತ್ತೆ ಹಲ್ಲೆ ನಡೆಸಿದ್ದಾರೆ.
ನಂತರ ಆತನ ಮೊಬೈಲ್ ನಿಂದ 5 ಸಾವಿರ ರೂ. ತಮ್ಮ ಮೊಬೈಲ್‌ಗೆ ಆನ್‌ಲೈನ್ ಮೂಲಕ ಹಾಕಿಸಿಕೊಂಡು ಅದರಲ್ಲಿ ಮತ್ತೆ 2,800 ರೂ. ಮದ್ಯ ತರಿಸಿಕೊಂಡು ಕುಡಿದಿದ್ದರು. ಮೂಸಾಗೆ 50 ಲಕ್ಷ ರೂ.ಗೆ ಬೇಡಿಕೆಯಿಟ್ಟು ಕೊಲೆ ಮಾಡುವುದಾಗಿ ಬೆದರಿಸಿದ್ದರು.
ಆಗ ಮೂಸ ನನ್ನ ಬಳಿ ಅಷ್ಟೊಂದು ಹಣ ಇಲ್ಲ ಎಂದಾಗ 2 ಲಕ್ಷ ರೂ. ಕೊಡುವಂತೆ ಸೂಚಿಸಿದ್ದ. ಕುಟುಂಬಸ್ಥರು ಹಣ ತಲುಪಿಸಿದ ಬಳಿಕ ಅಂಚೆಪಾಳ್ಯ ಬಳಿ ಮೂಸನನ್ನ ಬಿಟ್ಟು ಪರಾರಿ ಆಗಿದ್ದಾರೆ. ಶ್ರೀರಾಮಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಸಾಲ ವಾಪಸ್ ಕೇಳಿದ್ದಕ್ಕೆ ಅಪಹರಣ :
ಮೊಹಮ್ಮದ್ ಮೂಸ ಹಾಗೂ ಆರೋಪಿ ರೆಹಮಾನ್ 10 ವರ್ಷದಿಂದ ಪರಿಚಿತರಾಗಿದ್ದರು. ಮೂಸಾ ಹಿಂದೆ ರೆಹಮಾನ್ ಮನೆ ನವೀಕರಣ ಮಾಡಿದ್ದ. ರಿನೋವೇಶನ್‌ಗೆ ಸುಮಾರು 27 ಲಕ್ಷ ರೂ. ಖರ್ಚಾಗಿತ್ತು. ರಿನೋವೇಷನ್ ಮಾಡಿದ ಹಣ ಕೊಡದ ಹಿನ್ನೆಲೆಯಲ್ಲಿ ಅದೇ ಮನೆಯನ್ನು 95 ಲಕ್ಷಕ್ಕೆ ಮೂಸ ತೆಗೆದುಕೊಂಡಿದ್ದ. ಹಣಕಾಸಿನ ಸಮಸ್ಯೆಯಿಂದ ಮತ್ತೆ ಮೂಸಾನ ಬಳಿ ರೆಹಮಾನ್ ಒಂದೂವರೆ ಲಕ್ಷ ರೂ. ಸಾಲ ಮಾಡಿದ್ದ. ಆ ಹಣ ಕೊಡುವಂತೆ ಮೂಸಾ ಒತ್ತಾಯಿಸುತ್ತಿದ್ದ. ಇದರಿಂದ ರೆಹೆಮಾನ್ ಆಕ್ರೋಶಗೊಂಡು ಇತರ ಆರೋಪಿಗಳಿಂದ ಮೂಸಾನನ್ನು ಅಪಹರಿಸಿದ್ದ.