ಮುದ್ದೇಬಿಹಾಳ: ತಾಲೂಕಿನ ಚಿರ್ಚನಕಲ್ ಗ್ರಾಮ ವ್ಯಾಪ್ತಿಯ ರಿ.ಸ.ನಂ. 33ರ ಬಂಡಿದಾರಿ ಪಕ್ಕದ ರಸ್ತೆ ಬದಿ ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕತ್ತರಿಸಿ ಶ್ರೀಗಂಧದ ತಿರುಗಳಿಗಾಗಿ ಕೆತ್ತನೆ ಮಾಡಲು ಯತ್ನಿಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮುದ್ದೇಬಿಹಾಳ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿಗಳ ಮತ್ತು ಅರಣ್ಯ ರಕ್ಷಕರ ತಂಡ ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು ಆತನಿಂದ 8.60 ಕೆಜಿ ಶ್ರೀಗಂಧದ ಕೆರೆ, ಸ್ಥಳದಲ್ಲಿದ್ದ 3 ಬೈಕ್ ಸೀಜ್ ಮಾಡಿದ ಘಟನೆ ಶನಿವಾರ ಸಂಜೆ ನಡೆದಿದೆ.
ಈ ಕುರಿತು ಕಚೇರಿಯಲ್ಲಿ ಸುದ್ದಿರಾರರೊಂದಿಗೆ ಮಾತನಾಡಿದ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರಾಜೀವ್ ಬಿರಾದಾರ, ನಮಗೆ ಖಚಿತ ಮಾಹಿತಿ ಸಿಕ್ಕಿದ್ದರಿಂದ ನಮ್ಮ ತಂಡ ದಾಳಿ ನಡೆಸಿತು.
ಆರೋಪಿ ಬೀದರ ಜಿಲ್ಲೆ ಭಾಲ್ಕಿ ತಾಲೂಕು ಭಾತಂಬ್ರಾ ಗ್ರಾಮದ ಆನಂದ ತಂದೆ ಕಾಶೀನಾಥ (42) ಎಂಬಾತನನ್ನು ಸ್ಥಳದಲ್ಲೇ ಅರೆಸ್ಟ್ ಮಾಡಿದರು. ಇವನೊಂದಿಗೆ ಇದ್ದ 4 ಜನ ಭಾತಂಬ್ರಾದ ಸತೀಶ ರಾಜಕುಮಾರ ಮಾನೆ, ಬಸವಕಲ್ಯಾಣ ತಾಲೂಕಿನ ದೀಪಕ ಕಮಲಾಕರ ಜಾಧರ, ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ತುಳಜಾಪುರ ತಾಲೂಕು ಸಾಂಗವಿಯ ಬಾಪು ಮಗರ ಪರಾರಿಯಾದರು ಎಂದರು.
3 ಬೈಕ್ ಸೀಜ್ ಮಾಡಿದ್ದೇವೆ. 2 ಕೊಡಲಿ, 2 ಚಾಣ, 22.15 ಕೆಜಿ ಚಕ್ಕೆ, 8.60 ಕೆಜಿ ಶ್ರೀಗಂಧದ ತಿರುಳನ್ನು ವಶಪಡಿಸಿಕೊಳ್ಳಲಾಯಿತು. ಇದು ಥರ್ಡ್ ಗ್ರೇಡ್ ಆಗಿರುವುದರಿಂದ ತಕ್ಷಣಕ್ಕೆ ಮೌಲ್ಯ ನಿಗದಿಪಡಿಸುವುದು ಸಾಧ್ಯವಾಗಿಲ್ಲ. ಬೀದರ ಮೂಲದವರಾದ ಇವರ ತಂಡ ಮಹಾರಾಷ್ಟ್ರದಲ್ಲಿ ಸಕ್ರಿಯವಾಗಿದ್ದು ಇಲ್ಲಿ ಸ್ಥಳೀಯರ ನೆರವಿನೊಂದಿಗೆ ಈ ಕೃತ್ಯ ಮಾಡುತ್ತಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ತನ್ನೊಂದಿಗೆ ಇದ್ದ ಇನ್ನೂ ನಾಲ್ವರ ಹೆಸರನ್ನು ಬಹಿರಂಗಪಡಿಸಿದ್ದಾನೆ. ಅವರನ್ನೂ ಬಂಧಿಸಲು ಜಾಲ ಬೀಸಲಾಗಿದೆ. ಆರೋಪಿಗಳ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 80, 86, 87, 71 (ಎ) ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಾಗ್ಯವಂತ ಮಸೂದಿ ಮಾರ್ಗದರ್ಶನದಲ್ಲಿ ಮತ್ತು ತಮ್ಮ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಎಂ.ಎಚ್.ತೇಲಿ, ಆರ್.ಎಸ್.ಮೆಟಗುಡ್ಡ, ಬಿ.ಎಸ್.ಕೊಣ್ಣೂರ, ಅರಣ್ಯ ರಕ್ಷಕರಾದ ವಿ.ಡಿ.ಬೋರಟಗಿ, ಐ.ಆರ್.ಹಿರೇಮಠ, ವೈ. ಎಚ್.ಹಿರೇಕುರುಬರ, ವಿಜಯಕುಮಾರ ಕಿತ್ತೂರ ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.