ನವದೆಹಲಿ: ಸಾವಿರಾರು ಸರ್ಕಾರಿ ನೌಕರರಿಗೆ ಇದು ವಿಶೇಷ ದೀಪಾವಳಿ ಆಗಲಿದೆಯೇ?
ಹೌದು, ವಿಶೇಷ ದೀಪಾವಳಿಯೇ ಆಗಲಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಯಾಕೆ ಅಂತೀರಾ? ವಿಷಯ ಇಷ್ಟೆ, 7ನೇ ವೇತನ ಆಯೋಗದ ಶಿಫಾರಸಿನಂತೆ ಪರಿಷ್ಕೃತ ವೇತನ ಜಾರಿ ಶೀಘ್ರದಲ್ಲಿ ಆಗಲಿದ್ದು, ಇದಕ್ಕೆ ರಾಜ್ಯ ಸರ್ಕಾರಗಳು ಮುಂದಾಗಿವೆ. ಪರಿಣಾಮ ವೇತನದಲ್ಲಿ ಗಣನೀಯ ಏರಿಕೆ ಸಾಧ್ಯವಾಗಲಿದೆ.
ಇತ್ತೀಚೆಗಷ್ಟೇ ರಾಜಸ್ಥಾನದ 12 ಲಕ್ಷಕ್ಕೂ ಹೆಚ್ಚು ನೌಕರರು ಹಾಗೂ ಪಿಂಚಣಿದಾರರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ವಸುಂಧರಾ ರಾಜೇ ನೇತೃತ್ವದ ರಾಜಸ್ಥಾನ ಸರ್ಕಾರ 7ನೇ ವೇತನ ಆಯೋಗದ ಶಿಫಾರಸಿನಂತೆ ಮನೆ ಬಾಡಿಗೆ ಭತ್ಯೆ ಸೇರಿ ಹೆಚ್ಚಿನ ಭತ್ಯೆ ನೀಡುತ್ತಿದೆ. ಆದರೆ ಆರ್ಥಿಕ ತಜ್ಞರ ಪ್ರಕಾರ ಈ ಬೆಳವಣಿಗೆಯಿಂದ ಗ್ರಾಹಕರ ಬೇಡಿಕೆ ಹೆಚ್ಚಲಿದೆಯಾದರೂ, ಸಾರ್ವ ಜನಿಕರ ಆರ್ಥಿಕ ಸ್ಥಿತಿ ಕುಸಿಯಲಿದೆ.
ಅದೇನೇ ಇದ್ದರೂ, ಭಾರತೀಯ ವಿವಿಗಳ ಮತ್ತು ಕಾಲೇಜುಗಳ ಅಂದಾಜು 7.58 ಲಕ್ಷ ಪ್ರಾಧ್ಯಾಪಕರಿಗೆ ಇದು ವಿಶೇಷ ದೀಪಾವಳಿಯಾಗಲಿದೆ ಎಂದು ಕೇಂದ್ರ ಎಚ್‌ಆರ್‌ಡಿ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಪರಿಷ್ಕೃತ ವೇತನದ ಸ್ಕೇಲ್‌ನಂತೆ ಕಾಲೇಜು ಮತ್ತು ವಿವಿ ಪ್ರಾಧ್ಯಾಪಕರು 10,400ರಿಂದ 49,800 ರೂ.ನಷ್ಟು ಹೆಚ್ಚುವರಿ ವೇತನ ಜೇಬಿಗಿಳಿಸಲಿದ್ದಾರೆ. ಸರಾಸರಿ 22-28%ರಷ್ಟು ವೇತನದಲ್ಲಿ ಜಾಸ್ತಿಯಾಗಲಿದೆ. ಬಹು ನಿರೀಕ್ಷೆಯ ಲ್ಲಿರುವ ಸಿಬ್ಬಂದಿ 2016, ಜ.1ರಿಂದ ಪರಿಷ್ಕೃತ ವೇತನ ಪಡೆದುಕೊಳ್ಳಲಿದ್ದಾರೆ.
ಈಗಾಗಗಲೇ ತಮಿಳುನಾಡು ಸರ್ಕಾರವೂ, 7ನೇ ವೇತನ ಆಯೋಗದ ನಿಯಮದಂತೆ ಕನಿಷ್ಠ ಮತ್ತು ಗರಿಷ್ಠ ವೇತನವನ್ನು ನಿಗದಿಗೊಳಿಸಿದೆ. ಅಲ್ಲದೇ 12 ಲಕ್ಷ ಶಿಕ್ಷಕರು ಇದರ ಲಾಭ ಪಡೆದುಕೊಳ್ಳಲಿದ್ದಾರೆ ಎಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಕೆ. ಪಳನಿಸ್ವಾಮಿ, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಬರೋ ಬ್ಬರಿ 14,719 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ ಎಂದಿದ್ದಾರೆ.