ನವದೆಹಲಿ:ದಕ್ಷಿಣ ಆಫ್ರಿಕಾದಲ್ಲಿ ನವೆಂಬರ್ ನಲ್ಲಿ ಮೊದಲ ಬಾರಿ ಪತ್ತೆಯಾದ ಕೋವಿಡ್ 19ನ ನೂತನ ರೂಪಾಂತರ ತಳಿ ಒಮಿಕ್ರಾನ್ ಇದೀಗ ಭಾರತದ 21 ರಾಜ್ಯಗಳಲ್ಲಿ ಹರಡಿದೆ. ಮತ್ತೊಂದೆಡೆ ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ 781ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ತೆರೆದ ಲಸಿಕಾ ಬಾಟಲಿಗಳನ್ನು ಬಳಸದಂತೆ ಸರ್ಕಾರಿ ಮಾರ್ಗಸೂಚಿ ಬಿಡುಗಡೆ
ದೆಹಲಿಯಲ್ಲಿ ಅತೀ ಹೆಚ್ಚು ಪ್ರಕರಣ ವರದಿಯಾಗಿದ್ದು, ಈವರೆಗೆ 238 ಪ್ರಕರಣ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ 167 ಒಮಿಕ್ರಾನ್ ಪ್ರಕರಣ ಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ. ಕಳೆದ 24 ಗಂಟೆಗಳಲ್ಲಿ 9,195 ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿದ್ದು, ಇದು ಮಂಗಳವಾರ ಪತ್ತೆಯಾದ ಪ್ರಕರಣಗಳಿಗಿಂತ ಶೇ.44ರಷ್ಟು ಹೆಚ್ಚಳವಾಗಿದೆ.
ಕೋವಿಡ್ ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ನಡುವೆಯೇ ಕೇಂದ್ರ ಸರ್ಕಾರ ದೇಶಾದ್ಯಂತ ಲಸಿಕೆ ಅಭಿಯಾನವನ್ನು ಇನ್ನಷ್ಟು ತ್ವರಿತಗೊಳಿಸಿದೆ. ಈವರೆಗೆ ಭಾರತದಲ್ಲಿ 143 ಕೋಟಿ ಡೋಸ್ ನೀಡಲಾಗಿದೆ.
ಕೋವಿಡ್ 19 ಚೇತರಿಕೆ ಪ್ರಮಾಣ ಶೇ.98.40ರಷ್ಟಿದೆ. 24 ಗಂಟೆಗಳ ಅವಧಿಯಲ್ಲಿ 7,347 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 3,42,51,292 ಮಂದಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ(ಡಿಸೆಂಬರ್ 29) ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.