Advertisement

ಸಂಚಾರಿ ಪೊಲೀಸರಿಂದ 78 ಗಂಟೆಗಳ ಕಣ್ಗಾವಲು

07:50 AM Jul 27, 2017 | Team Udayavani |

ಹಳೆಯಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪಡುಪಣಂಬೂರು ಬಳಿಯ ಗುಡ್ಡ ಕುಸಿತದಿಂದ ಹೆದ್ದಾರಿಯಲ್ಲಿ ಸಂಚಾರ ಬದಲಾವಣೆಯಾಗಿದ್ದು, ನಿರಂತರ 72 ಗಂಟೆಗಳ ಅವಧಿಯಲ್ಲಿ ಸಂಚಾರಿ ಪೊಲೀಸರು ಸಂಚಾರವನ್ನು ನಿರ್ವಹಣೆ ಮಾಡಲು ನಿರ್ಧರಿಸಿದ್ದಾರೆ. ಅಪಾಯದಲ್ಲಿದ್ದ ಎರಡೂ ನೀರಿನ ಟ್ಯಾಂಕ್‌ಗಳನ್ನು ಹಾಗೂ ಶಾಲಾ ಕೊಠಡಿಯನ್ನು ನೆಲಸಮ ಮಾಡಲಾಗಿದೆ. ಕುಸಿದಿರುವ ಗುಡ್ಡವನ್ನು ತೆರವು ಮಾಡಲಾಗುತ್ತಿದೆ.

Advertisement

ನಿರಂತರ ಕಾರ್ಯಾಚರಣೆ
ಮಂಗಳವಾರ ಕಂಡು ಬಂದ ಗುಡ್ಡ ಕುಸಿತದಿಂದ ಅಪಾಯದ ಅಂಚಿನಲ್ಲಿದ್ದ ಓವರ್‌ಹೆಡ್‌ ಟ್ಯಾಂಕನ್ನು ನೆಲಸಮ ಮಾಡಿ, ಅದು ಹೊರಳಿ ಮರಳಿ ರಸ್ತೆಗೆ ಬೀಳಬಾರದು ಎಂದು ಬೃಹತ್‌ ಗುಂಡಿಯನ್ನು ತೋಡಿ ಅದರಲ್ಲಿರಿಸಲಾಗಿದೆ. ಉಳಿದಂತೆ ನೀರಿನ ಸಂಪನ್ನು ನೆಲಸಮ ಮಾಡಲಾಗಿದೆ. ಮಂಗಳವಾರ ರಾತ್ರಿಯಿಡೀ ಕಾರ್ಯಾ ಚರಣೆ ನಡೆಸಲಾಗಿದೆ. ಶಾಲಾ ಕೊಠಡಿ ಯನ್ನು ಬುಧವಾರ ನೆಲಸಮ ಮಾಡ ಲಾಗಿದೆ. ಕುಸಿತಗೊಂಡ ಗುಡ್ಡವನ್ನು ಮೂರು ಪದರಗಳಲ್ಲಿ ವಿಂಗಡಿಸಿ ಮುಂದಿನ ಹಂತದ ಯೋಜನೆಗೆ ಸಿದ್ಧಪಡಿಸಲಾಗಿದೆ.

ಸಂಚಾರ ಒತ್ತಡದಿಂದ ಓರ್ವನ ಸಾವು ಸಂಭವಿಸಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಸಂಚಾರಿ ಪೊಲೀಸರು ಪಂಚಾಯತ್‌ಗೆ ಪತ್ರವನ್ನು ಸಹ ನೀಡಿದ್ದು, ಆದಷ್ಟು ಶೀಘ್ರದಲ್ಲಿ ಕಾಮಗಾರಿ ಮುಗಿಸ ಬೇಕು, ಟ್ಯಾಂಕ್‌ ಮರಳಿ ರಸ್ತೆಗೆ ಬೀಳದಂತೆ ತಡೆಯಬೇಕು. ವಾಹನಗಳ ದಟ್ಟಣೆ ಹಾಗೂ ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಈ ಬಗ್ಗೆ ವಿಶೇಷ ನಿಗಾ ವಹಿಸಲು ಸಹಕಾರ ನೀಡಬೇಕು ಎಂದು ಪತ್ರವನ್ನು ಬರೆಯಲಾಗಿದೆ.

ಹಗಲು, ರಾತ್ರಿ ಕಣ್ಗಾವಲು
ಮಂಗಳವಾರ ನಡೆದ ಅಪಘಾತದ ಘಟನೆಯು ಮರುಕಳಿಸಬಾರದು ಎಂಬ ಉದ್ದೇಶದಿಂದ ಸಂಚಾರಿ ಪೊಲೀಸರು ರಾತ್ರಿ ಸಮಯದಲ್ಲಿ ಆಸ್ತ ಲೈಟನ್ನು ಉರಿಸಿಕೊಂಡು ಮುಂಜಾನೆಯವರೆಗೂ ಸಂಚಾರ ನಿಯಂ ತ್ರಣ ನಡೆಸಿದ್ದು ಮುಂದಿನ ಎರಡು ದಿನ ಈ ಪ್ರಕ್ರಿಯೆ ಮುಂದುವರಿಸಲಾಗಿದೆ. ಸಂಚಾರದ ಒತ್ತಡಕ್ಕಾಗಿಯೇ ಇನ್ಸ್‌ಪೆಕ್ಟರ್‌ ಮಂಜುನಾಥ್‌ ಅವರು  ಸ್ವತಃ ಸ್ಥಳದಲ್ಲಿದ್ದು, ಉಪನಿರೀಕ್ಷಕ ಯೋಗೀಶ್‌, ಎಎಸ್‌ಐಗಳಾದ ಮಂಜುನಾಥ್‌ ಮತ್ತು ರಾಮಣ್ಣ ಶೆಟ್ಟಿ, ಸಿಬಂದಿ ಬಾಲಚಂದ್ರ, ರೋಹಿತ್‌, ಹಾಲೇಶ, ಶಿವರಾಮ್‌ ಸರದಿಯಂತೆ ನಿರಂತರ 72 ಗಂಟೆ ಗಸ್ತು ನಡೆಸುತ್ತಿದ್ದಾರೆ. ಈ ಪ್ರದೇಶದಲ್ಲಿ ದಾರಿದೀಪದ ಕೊರತೆ ಎದ್ದು ಕಾಣುತ್ತಿದೆ.

“ನೀರಿನ ಸಮಸ್ಯೆ ಹೆಚ್ಚಾಗಿದೆ’
ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್‌ ದಾಸ್‌ ಉದಯವಾಣಿ ಸುದಿನಕ್ಕೆ ಪ್ರತಿಕ್ರಿಯಿಸಿ, “ದಿನಕ್ಕೆ ಒಂದು ಲಕ್ಷ  ಲೀ. ಕುಡಿಯುವ ನೀರನ್ನು ಮನೆ ಮನೆಗೆ ಸರಬರಾಜು ಮಾಡುತ್ತಿದ್ದ ಎರಡೂ ಟ್ಯಾಂಕ್‌ಗಳನ್ನು ನೆಲಸಮ ಮಾಡಲಾಗಿದ್ದು, ಈಗ ಇಲ್ಲಿನ ನೀರಿನ ಸಮಸ್ಯೆ ಹೆಚ್ಚಾಗಿದೆ. ತಾತ್ಕಾಲಿಕವಾಗಿ ಪಂಪ್‌ಗ್ಳಿಂದ ನೇರವಾಗಿ ಪೈಪ್‌ಲೈನ್‌ನಲ್ಲಿಯೇ ನೀರು ಸರಬರಾಜು ಮಾಡುವ ಪ್ರಯತ್ನ ನಡೆಸಿದ್ದೇವೆ. ಇದು ತಾಂತ್ರಿಕವಾಗಿ ಸರಿಯಲ್ಲದಿದ್ದರೂ ಅನಿವಾರ್ಯ, ಇದರಿಂದ ಅಲ್ಲಲ್ಲಿ ಪೈಪುಗಳು ಒಡೆಯುವ ಸಂಭವ ಇದೆ. ಗ್ರಾಮಕ್ಕೆ ಶೀಘ್ರದಲ್ಲಿಯೇ ಭರವಸೆ ನೀಡಿದಂತೆ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣವಾಗಲು ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದಲ್ಲಿ ಸಮಸ್ಯೆ ಇನ್ನಷ್ಟು ಹೆಚ್ಚುತ್ತದೆ’ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next