ಬಹುನಿರೀಕ್ಷಿತ “777 ಚಾರ್ಲಿ’ ಸಿನಿಮಾದ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ಇದೇ ಜೂ. 10ಕ್ಕೆ “777 ಚಾರ್ಲಿ’ ಅದ್ಧೂರಿಯಾಗಿ ತೆರೆಗೆ ಬರುತ್ತಿದ್ದು, ಸದ್ಯ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವ ಅಂತಿಮ ಹಂತದಲ್ಲಿ ನಿರತವಾಗಿರುವ ಚಿತ್ರತಂಡ, ದೇಶದಾದ್ಯಂತ ಪ್ರಮುಖ ನಗರಗಳಿಗೆ ಭೇಟಿ ನೀಡಿ, ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಇದರ ನಡುವೆಯೇ ಜೂ. 2ರಿಂದ ನಡೆಯುತ್ತಿರುವ “777 ಚಾರ್ಲಿ’ಯ ಪ್ರೀಮಿಯರ್ ಶೋಗೆ ಎಲ್ಲೆಡೆಯಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ಇದೇ ವೇಳೆ “ಉದಯವಾಣಿ’ ಜೊತೆಗೆ ಮಾತಿಗೆ ಸಿಕ್ಕ “777 ಚಾರ್ಲಿ’ ನಿರ್ದೇಶಕ ಕಿರಣ್ ರಾಜ್, ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಮತ್ತು ಪ್ರಚಾರದ ಅನುಭವಗಳ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ.
“ಕಳೆದ ಒಂದು ತಿಂಗಳಿನಿಂದ ತುಂಬ ವೇಗವಾಗಿ ನಮ್ಮ ಸಿನಿಮಾದ ಪ್ರಮೋಶನ್ಸ್ ಕೆಲಸಗಳು ನಡೆಯುತ್ತಿದೆ. ಈಗಾಗಲೇ ರಿಲೀಸ್ ಆಗಿರುವ “777 ಚಾರ್ಲಿ’ ಟ್ರೇಲರ್ ದೊಡ್ಡ ಮಟ್ಟದಲ್ಲಿ ಆಡಿಯನ್ಸ್ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಸಹಜವಾಗಿಯೇ ಸಿನಿಮಾದ ಮೇಲೆ ಆಡಿಯನ್ಸ್‌ಗೆ ನಿರೀಕ್ಷೆ ಕೂಡ ಹೆಚ್ಚಾಗಿದೆ. ಕನ್ನಡ, ತೆಲುಗು, ಹಿಂದಿ, ತಮಿಳು, ಮಲೆಯಾಳಂ ಹೀಗೆ ಎಲ್ಲ ಭಾಷೆಗಳಲ್ಲೂ ಸಿನಿಮಾಕ್ಕೆ ನಮ್ಮ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ ಸಿಗುತ್ತಿದೆ’ ಎನ್ನುತ್ತಾರೆ.
ಇದನ್ನೂ ಓದಿ:ಬಾಲಿವುಡ್ ನಟ ಸಲ್ಮಾನ್ ಖಾನ್, ಸಲೀಂ ಖಾನ್‌ಗೆ ಬೆದರಿಕೆ ಪತ್ರ
“ಇನ್ನು ಜೂನ್ ಮೊದಲ ವಾರದಿಂದ ದೇಶದಾದ್ಯಂತ “777 ಚಾರ್ಲಿ’ ಸ್ಪೆಷಲ್ ಪ್ರೀಮಿಯರ್ ಶೋ ಶುರುವಾಗಿದೆ. ಈಗಾಗಲೇ ಸುಮಾರು ಐದಾರು ಮಹಾನಗರ ಗಳಲ್ಲಿ ಸ್ಪೆಷಲ್ ಪ್ರೀಮಿಯರ್ ಶೋ ನಡೆದಿದೆ. ಶೋ ನಡೆದ ಎಲ್ಲ ಕಡೆಗಳಲ್ಲಿ ತುಂಬ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಅದರಲ್ಲೂ ಉತ್ತರ ಭಾರತದಲ್ಲಿ ನಮ್ಮ ಸಿನಿಮಾದ ಪ್ರೀಮಿಯರ್ ಶೋ ನೋಡಿದ ಬಳಿಕ ಅಲ್ಲಿನ ವಿತರಕರು ಥಿಯೇಟರ್‌ಗಳ ಸಂಖ್ಯೆ, ಮತ್ತು ಸಿನಿಮಾದ ಶೋಗಳ ಸಂಖ್ಯೆಯನ್ನು ಹೆಚ್ಚು ಮಾಡುತ್ತಿದ್ದಾರೆ. ಚೆನ್ನೈ, ಮುಂಬೈ, ಹೈದರಾಬಾದ್, ಬೆಂಗಳೂರು ಹೀಗೆ ದೇಶದ ಎಲ್ಲ ಪ್ರಮುಖ ಮಹಾನಗರಗಳಲ್ಲೂ ಥಿಯೇಟರ್‌ಗಳ ಮುಂದೆ “777 ಚಾರ್ಲಿ’ಯ ದೊಡ್ಡ ದೊಡ್ಡ ಕಟೌಟ್ ಗಳು ಕಂಡುಬರುತ್ತಿದೆ. ಪ್ರೀಮಿಯರ್ ಶೋ ತುಂಬ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗುತ್ತಿದ್ದು, ಸಿನಿಮಾದ ಮೇಲಿನ ನಮ್ಮ ಕಾನ್ಫಿಡೆನ್ಸ್ ಇನ್ನಷ್ಟು ಹೆಚ್ಚಾಗಿದೆ’ ಎನ್ನುವುದು ಕಿರಣ್ ರಾಜ್ ಮಾತು.
“ಈಗಾಗಲೇ ಆನ್‌ಲೈನ್‌ನಲ್ಲೂ “777 ಚಾರ್ಲಿ’ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದ್ದು, ಆರಂಭದ ದಿನಗಳ ಬಹುತೇಕ ಶೋಗಳ ಟಿಕೆಟ್‌ಗಳು ಸೋಲ್ಡ್ ಆಗಿದೆ. ಆಡಿಯನ್ಸ್ ಕಡೆಯಿಂದಲೂ “777 ಚಾರ್ಲಿ’ ಭಾರೀ ಬೇಡಿಕೆ ಇರುವುದರಿಂದ ಥಿಯೇಟರ್‌ಗಳು ಮತ್ತು ಶೋಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಒಟ್ಟಾರೆ ಐದು ವರ್ಷಗಳ ನಮ್ಮ ಪ್ರಯತ್ನಕ್ಕೆ, ಪರಿಶ್ರಮಕ್ಕೆ ಈಗ ಪ್ರತಿಫಲ ಸಿಗುತ್ತಿದೆ. ರಿಲೀಸ್‌ಗೂ ಮೊದಲೇ ಇಷ್ಟೊಂದು ದೊಡ್ಡ ಮಟ್ಟಕ್ಕೆ ರೆಸ್ಪಾನ್ಸ್ ಸಿಗುತ್ತಿರುವುದು ನೋಡಿದರೆ, ನಿಜಕ್ಕೂ ಖುಷಿಯಾಗುತ್ತಿದೆ’ ಎನ್ನುತ್ತಾರೆ ಕಿರಣ್ ರಾಜ್.