Advertisement

76 ಕ್ಷೇತ್ರಗಳೇ ನಿರ್ಣಾಯಕ: ತಲೆಬಿಸಿ ಹೆಚ್ಚಿಸಿದೆ ಗುಪ್ತಚರ ದಳದ ವರದಿ

12:15 AM Jan 28, 2023 | Team Udayavani |

ಮೂರೂ ಪಕ್ಷಗಳಿಗೆ ಚುನಾವಣೆಯಲ್ಲಿ ತಮ್ಮ ಗೆಲುವು ಖಚಿತ ಎಂಬ ಸ್ಥಿತಿ ಸದ್ಯ ಇಲ್ಲ. ಗುಪ್ತಚರ ವರದಿಯೂ ಇದನ್ನೇ ಹೇಳುತ್ತಿದೆ. ಹೀಗಾಗಿ ಫ‌ಲಿತಾಂಶ ಪ್ರಕಟವಾಗುವವರೆಗೆ ಮೂರೂ ಪಕ್ಷಗಳಿಗೆ ಪ್ರತೀ ಕಣವೂ ಚಿಂತೆಯೇ!

Advertisement

ಬೆಂಗಳೂರು: ಚುನಾವಣೆಯ ಸಂಬಂಧ ಗುಪ್ತದಳದ ಪ್ರಾಥಮಿಕ ವರದಿ ಮೂರೂ ಪಕ್ಷಗಳ ನಿದ್ದೆಗೆಡಿಸಿದೆ. ರಾಜ್ಯದ 224 ಕ್ಷೇತ್ರಗಳ ಪೈಕಿ ಸದ್ಯ ಬಿಜೆಪಿ 60, ಕಾಂಗ್ರೆಸ್‌ 58 ಹಾಗೂ ಜೆಡಿಎಸ್‌ 30 ಸ್ಥಾನ ಗೆಲ್ಲುವುದು ಖಚಿತ; ಉಳಿದ 76 ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಗೆಲುವು ಸಾಧಿಸಿದವರದೇ ಸರಕಾರ ಎಂದು ಗುಪ್ತದಳದ ಪ್ರಾಥಮಿಕ ವರದಿ ತಿಳಿಸಿದೆ ಎಂದು ಮೂಲಗಳು ಹೇಳಿವೆ.

ಬಿಜೆಪಿಯತ್ತ ಕರಾವಳಿ- ಮಲೆನಾಡು, ಉತ್ತರ ಕರ್ನಾಟಕ; ಕಾಂಗ್ರೆಸ್‌ನತ್ತ ಹಳೇ ಮೈಸೂರು, ಕಲ್ಯಾಣ ಕರ್ನಾಟಕ; ಜೆಡಿಎಸ್‌ನತ್ತ ಹಳೇ ಮೈಸೂರು ಮತ್ತು ಮಧ್ಯ ಕರ್ನಾಟಕ, ಮುಂಬಯಿ ಕರ್ನಾಟಕದಲ್ಲಿ ಒಲವು ಇರುವ ಬಗ್ಗೆ ವರದಿ ಉಲ್ಲೇಖೀಸಿದೆ.

ಬಿಜೆಪಿಯ ಜನಸಂಕಲ್ಪ ಯಾತ್ರೆ, ಕಾಂಗ್ರೆಸ್‌ನ ಪ್ರಜಾಧ್ವನಿ, ಜೆಡಿಎಸ್‌ನ ಪಂಚರತ್ನ ಯಾತ್ರೆಗಳ ಅನಂತರ ಕೆಲವು ಕ್ಷೇತ್ರಗಳಲ್ಲಿ ರಾಜಕೀಯವಾಗಿ ಬದಲಾವಣೆ ಹಾಗೂ ಸ್ಥಳೀಯ ಹಂತದ ಪರಿಸ್ಥಿತಿ ಬದಲಾಗಿದೆ ಎನ್ನಲಾಗಿದೆ. ಇದೆಲ್ಲವೂ ನವೆಂಬರ್‌ನಿಂದ ಜ. 25ರ ವರೆಗಿನ ಗುಪ್ತಚರ ಮಾಹಿತಿ ಎಂದು ತಿಳಿದು ಬಂದಿದೆ.

ಈಗ ನೀಡಿರುವುದು ಪ್ರಾಥಮಿಕ ಹಂತದ ವರದಿಯಾಗಿದ್ದು, ಅಭ್ಯರ್ಥಿ ಗಳ ಪಟ್ಟಿ ಬಿಡುಗಡೆಯಾದ ಅನಂತರ 50ರಿಂದ 60 ಕ್ಷೇತ್ರಗಳ ಚಿತ್ರಣ ಬದಲಾಗುವ ಸಾಧ್ಯತೆಯಿದೆ. ಚುನಾವಣೆ ಸಮಯದ ಪಕ್ಷಾಂತರ ಯಾವುದೇ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಲಾಭ ತರುವುದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

Advertisement

ಅಭ್ಯರ್ಥಿಗಳ ಕೊರತೆ
ಮೂರೂ ಪಕ್ಷಗಳು ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುತ್ತೇವೆ ಎಂದು ಹೇಳುತ್ತಿವೆ. ಆದರೆ ಬಿಜೆಪಿ 30ರಿಂದ 40, ಕಾಂಗ್ರೆಸ್‌ 25ರಿಂದ 35 ಹಾಗೂ ಜೆಡಿಎಸ್‌ 45ರಿಂದ 50 ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿದೆ ಎಂಬುದು ವರದಿಯಲ್ಲಿದೆ ಎನ್ನಲಾಗಿದೆ.

ಮ್ಯಾಜಿಕ್‌ ನಂಬರ್‌ ತಲುಪಲು ಪ್ರಯಾಸ
ಯಾತ್ರೆ, ಸಮಾವೇಶಗಳಲ್ಲಿ ನಮ್ಮದೇ ಅಧಿಕಾರ ಎಂದು ಮೂರೂ ಪಕ್ಷಗಳ ನಾಯಕರು ಹೇಳುತ್ತಿದ್ದಾರಾದರೂ ಯಾರಿಗೂ ಸ್ಪಷ್ಟ ಬಹುಮತದ ಭರವಸೆ ಇಲ್ಲ. ಈಗಿನ ಪ್ರಕಾರ ಮ್ಯಾಜಿಕ್‌ ನಂಬರ್‌ ತಲುಪಲು 3 ಪಕ್ಷಗಳೂ ಬೆವರು ಹರಿಸಬೇಕಾಗುತ್ತದೆ. ಬಿಜೆಪಿ- ಜೆಡಿಎಸ್‌ನಲ್ಲಿ ಟಿಕೆಟ್‌ ಹಂಚಿಕೆ ಸಮಸ್ಯೆಯಾಗುವ ಸಾಧ್ಯತೆ ಕಡಿಮೆ. ಆದರೆ ಕಾಂಗ್ರೆಸ್‌ಗೆ ಅದೇ ದೊಡ್ಡ ತಲೆನೋವಾಗಬಹುದು ಎಂಬ ವಾಖ್ಯಾನಗಳಿವೆ.

- ಎಸ್‌. ಲಕ್ಷ್ಮೀನಾರಾಯಣ

 

Advertisement

Udayavani is now on Telegram. Click here to join our channel and stay updated with the latest news.

Next