Advertisement

ಸಂಭ್ರಮ ಭಗ್ನ ಸಂಚು ವಿಫ‌ಲ: ದೇಶ 76ನೇ ಸ್ವಾತಂತ್ರ್ಯ ದಿನಕ್ಕೆ ಸಜ್ಜು

12:24 AM Aug 15, 2022 | Team Udayavani |

ಹೊಸದಿಲ್ಲಿ/ಬೆಂಗಳೂರು: ದೇಶವು ಸೋಮವಾರ 76ನೇ ಸ್ವಾತಂತ್ರ್ಯ ದಿನ ಮತ್ತು ಅಮೃತ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿದೆ. ಈ ಮಧ್ಯೆ ದೇಶದ ಅಲ್ಲಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ರೂಪಿಸಿದ್ದ ಸಂಚನ್ನು ಪೊಲೀಸರು ವಿಫ‌ಲಗೊಳಿಸಿದ್ದಾರೆ. ವಿಶೇಷವಾಗಿ ಪಂಜಾಬ್‌ನಲ್ಲಿ ಅಲ್ಲಿನ ಪೊಲೀಸರು ಮತ್ತು ದಿಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪ್ರಾಯೋಜಿತ ಉಗ್ರ ಜಾಲವನ್ನು ಬೇಧಿಸಿದ್ದಾರೆ.

Advertisement

ಸ್ವಾತಂತ್ರ್ಯ ದಿನದಂದು ಘಾತಕ ಕೃತ್ಯಗಳನ್ನು ನಡೆಸಲು ಉದ್ದೇಶಿಸಿದ್ದ ನಾಲ್ವರು ಕಿಡಿಗೇಡಿಗಳನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಕೆನಡಾದ ಆರ್ಶ್‌ ದಲ್ಲಾ ಮತ್ತು ಆಸ್ಟ್ರೇಲಿಯಾ ಮೂಲದ ಗುರ್ಜಾಂತ್‌ ಸಿಂಗ್‌ ಸೇರಿದ್ದಾರೆ. ಬಂಧಿತರಿಂದ 2.5 ಕೆ.ಜಿ. ಸುಧಾರಿತ ಸ್ಫೋಟಕ, 1.6 ಕೆ.ಜಿ. ಆರ್‌ಡಿಎಕ್ಸ್‌, ಮೂರು ಗ್ರೆನೇಡ್‌, 40 ಸಜೀವ ಗುಂಡುಗಳು, 2 9 ಎಂಎಂ ಪಿಸ್ತೂಲ್‌ಗ‌ಳನ್ನು ವಶಪಡಿಸಿಕೊಳ್ಳಲಾಗಿದೆ.

ಯುವಕನ ಬಂಧನ
ಇನ್ನೊಂದೆಡೆ ಉತ್ತರ ಪ್ರದೇಶ ಎಟಿಎಸ್‌ ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರ ಸಂಘಟನೆ ಲಷ್ಕರ್‌ ಎ ತಯ್ಯಬಾ ಜತೆಗೆ ನಿಕಟ ಸಂಪರ್ಕ ಇರಿಸಿಕೊಂಡಿದ್ದ 19 ವರ್ಷದ ಯುವಕನನ್ನು ಬಂಧಿಸಲಾಗಿದೆ. ಆತನನ್ನು ಹಬೀಬುಲ್ಲಾ ಇಸ್ಲಾಂ ಅಲಿಯಾಸ್‌ ಸೈಫ‌ುಲ್ಲಾ ಎಂದು ಗುರುತಿಸಲಾಗಿದೆ. ಈತ ಮೂಲತಃ ಬಿಹಾರದ ಮೋತಿಹಾರಿ ಜಿಲ್ಲೆಯವನಾಗಿದ್ದು, ಉತ್ತರ ಪ್ರದೇಶದ ಫ‌ತೇಪುರ ಜಿಲ್ಲೆಯಲ್ಲಿ ನೆಲೆಸಿದ್ದ. ಆತ ವರ್ಚುವಲ್‌ ಐ.ಡಿ.ಗಳನ್ನು ತಯಾರಿಸುವುದರಲ್ಲಿ ಸಿದ್ಧಹಸ್ತ. ಬಿಜೆಪಿಯ ಉಚ್ಚಾಟಿತ ವಕ್ತಾರೆ ನೂಪುರ್‌ ಶರ್ಮಾರನ್ನು ಕೊಲ್ಲಲು ನಿಯೋಜಿತನಾಗಿದ್ದ ಮೊಹಮ್ಮದ್‌ ನದೀಮ್‌ ಸಹಿತ ಹಲವರಿಗೆ ಇಂಥ ನಕಲಿ ಐ.ಡಿ.ಗಳನ್ನು ತಯಾರಿಸಿಕೊಟ್ಟಿದ್ದ. ಮೊಬೈಲ್‌ ಮತ್ತು ಸಿಮ್‌ ಕಾರ್ಡ್‌ಗಳನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ. ಮಣಿಪುರದಲ್ಲಿ ನಿಷೇಧಿತ ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ)ಯ ಏಳು ಮಂದಿ ಸದಸ್ಯರನ್ನು ಆ ರಾಜ್ಯದ ವಿವಿಧ ಭಾಗಗಳಿಂದ ಬಂಧಿಸಲಾಗಿದೆ. ಅವರಿಂದ ಶಸ್ತ್ರಾಸ್ತ್ರ, ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾಣೆಕ್‌ ಶಾ ಮೈದಾನದಲ್ಲಿ ಸಿಎಂ ಧ್ವಜಾರೋಹಣ
ಬೆಂಗಳೂರಿನಲ್ಲಿ ಸ್ವಾತಂತ್ರ್ಯೋತ್ಸವದ ಪ್ರಧಾನ ಕಾರ್ಯಕ್ರಮ ಮಾಣೆಕ್‌ ಶಾ ಪರೇಡ್‌ ಮೈದಾನದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡನೇ ಬಾರಿಗೆ ಧ್ವಜಾರೋಹಣ ನಡೆಸಿ ಸಂದೇಶ ನೀಡಲಿದ್ದಾರೆ. ಸ್ವಾತಂತ್ರ್ಯೋತ್ಸವ ಪ್ರಯುಕ್ತ ರಾಜ್ಯದಲ್ಲಿ 81 ಮಂದಿ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ.

ಹೊಸ ಯೋಜನೆ ಘೋಷಣೆ ನಿರೀಕ್ಷೆ
ಪ್ರಧಾನಿ ಮೋದಿಯವರು ಸೋಮವಾರ ಕೆಂಪುಕೋಟೆಯ ಬುರುಜಿನಿಂದ ಸತತ ಒಂಭತ್ತನೇ ಬಾರಿಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅವರು ವಿಶೇಷ ಆರೋಗ್ಯ ಯೋಜನೆ “ಹೀಲ್‌ ಇನ್‌ ಇಂಡಿಯಾ -ಹೀಲ್‌ ಬೈ ಇಂಡಿಯಾ’ ಯೋಜನೆಗಳನ್ನು ಈ ಸಂದರ್ಭದಲ್ಲಿ ಘೋಷಣೆ ಮಾಡುವ ಸಾಧ್ಯತೆಗಳು ಇವೆ. ಜತೆಗೆ ಗರ್ಭಕಂಠದ ಕ್ಯಾನ್ಸರ್‌ಗೆ ನೀಡುವ ಕ್ಯೂಎಚ್‌ಪಿವಿ ಲಸಿಕೆಯನ್ನು ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದಲ್ಲಿ ಸೇರ್ಪಡೆ ಮಾಡುವ, ರಾಷ್ಟ್ರೀಯ ಆರೋಗ್ಯ ಮಿಷನನ್ನು “ಪಿಎಂ ಸಮಗ್ರ ಸ್ವಾಸ್ಥ್ಯ ಮಿಷನ್‌’ ಆಗಿ ಪರಿವರ್ತನೆ ಮಾಡುವ ಬಗ್ಗೆ ಪ್ರಸ್ತಾವಿಸುವ ಸಾಧ್ಯತೆ ಇದೆ.ಗರ್ಭಕಂಠದ ಕ್ಯಾನ್ಸರ್‌ಗೆ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಕ್ವಾಡ್ರಿವೇಲೆಂಟ್‌ ಹ್ಯೂಮನ್‌ ಪ್ಯಾಪಿಲೋಮಾವೈರಸ್‌ ವ್ಯಾಕ್ಸಿನ್‌ (ಕ್ಯುಎಚ್‌ಪಿವಿ-ಟಿಏಕV) ಸಿದ್ಧಪಡಿಸಿದೆ.

Advertisement

ಉದಯವಾಣಿ ಕಳಕಳಿ
ಭಾರತ ಅತ್ಯಂತ ಸಂಭ್ರಮೋಲ್ಲಾಸದಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಜಾತಿ ಪಂಗಡ ಧರ್ಮ ಎಂಬ ಹಂಗಿಲ್ಲದೆ ಭಾರತ ಒಂದಾಗಿದೆ. ಸೋಮವಾರ ಸಂಜೆ “ಹರ್‌ ಘರ್‌ ತಿರಂಗಾ’ ಕಾರ್ಯಕ್ರಮ ಮುಗಿಯಲಿದೆ. ಉತ್ಸವ ಮುಗಿದ ಮೇಲೆ ಸಂಜೆಯೇ ಎಲ್ಲರೂ ಭಾರತದ ತ್ರಿವರ್ಣ ಪತಾಕೆಯನ್ನು ಗೌರವ ಯುತವಾಗಿ ಕೆಳಗಿಳಿಸಿ, ಮಡಚಿ ಜೋಪಾನವಾಗಿ ಇರಿಸಿಕೊಳ್ಳುವ ಮೂಲಕ ನಮ್ಮ ಧ್ವಜಸಂಹಿತೆಯನ್ನು ಗೌರವಿಸಿ. ಯಾವುದೇ ಕಾರಣಕ್ಕೂ ಎಲ್ಲೆಂದರಲ್ಲಿ ಎಸೆದು ಅವಮರ್ಯಾದೆ ತೋರುವುದು ಸಲ್ಲದು.

Advertisement

Udayavani is now on Telegram. Click here to join our channel and stay updated with the latest news.

Next