Advertisement

ವಾಣಿಜ್ಯ ಮಂಡಳಿಗೆ 75 ನೇ ಸಂಭ್ರಮ

09:57 AM Mar 10, 2020 | Lakshmi GovindaRaj |

ಕರ್ನಾಟಕ ವಾಣಿಜ್ಯ ಮಂಡಳಿ ಇದೀಗ 75 ವಸಂತಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ 75 ನೇ ವರ್ಷದ ಉತ್ಸವದ ಲಾಂಛನ ಬಿಡುಗಡೆಯನ್ನೂ ಮಾಡುವ ಮೂಲಕ ಮತ್ತಷ್ಟು ಉತ್ಸಾಹಗೊಂಡಿದೆ. 1944 ರಲ್ಲಿ ಶುರುವಾದ ಮಂಡಳಿ ಯಶಸ್ವಿಯಾಗಿ 75 ವರ್ಷಗಳನ್ನು ಪೂರೈಸುವ ಮೂಲಕ ಕನ್ನಡ ಚಿತ್ರರಂಗದ ಶಕ್ತಿಯಾಗಿ ನಿಂತಿದೆ. ಭಾನುವಾರ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು 75ನೇ ವರ್ಷದ ಉತ್ಸವದ ಲಾಂಛನ ಬಿಡುಗಡೆ ಕನ್ನಡ ಚಿತ್ರರಂಗಕ್ಕೆ ಶುಭಕೋರಿದ್ದಾರೆ.

Advertisement

ಈ ವೇಳೆ ಮಾತಿಗಿಳಿದ ಬಸವರಾಜ ಬೊಮ್ಮಾಯಿ ಅವರು, “ಕನ್ನಡ ಚಿತ್ರರಂಗಕ್ಕೆ ದೊಡ್ಡ ಇತಿಹಾಸವಿದೆ. ವಾಣಿಜ್ಯ ಮಂಡಳಿ ಯಶಸ್ವಿಯಾಗಿ 75 ವರ್ಷ ಪೂರೈಸಿರುವುದು ಖುಷಿಯ ಸಂಗತಿ. ಮನರಂಜನೆ ಇಲ್ಲದ್ದನ್ನು ಊಹಿಸಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗ ಹಲವು ಬಗೆಯ ಸಿನಿಮಾಗಳನ್ನು ಕೊಡುವ ಮೂಲಕ ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವಲ್ಲಿ ಕಾರಣವಾಗಿದೆ. ಕಳೆದ 75 ವರ್ಷಗಳಿಂದಲೂ ಚಲನಚಿತ್ರ ಮಂಡಳಿ ತಾಯಿಯಂತೆ ಶಕ್ತಿ ತುಂಬಿ, ಕನ್ನಡದ ಸಿನಿಮಾಗಳನ್ನು ಪೋಷಿಸುತ್ತಿದೆ. ಹಿರಿಯ ನಿರ್ಮಾಪಕ, ನಿರ್ದೇಶಕರು, ತಾಂತ್ರಿಕ ವರ್ಗದವರು ಹುಟ್ಟುಹಾಕಿದ ಈ ಸಂಸ್ಥೆ ಇನ್ನೂ ದೊಡ್ಡದ್ದಾಗಿ ಬೇಳೆಯಬೇಕು.

ಚಿತ್ರರಂಗ ರೀಲ್‌ನಿಂದ ಡಿಜಿಟಲ್‌ವರೆಗೂ ಬೆಳೆದು ಬಂದಿದೆ. ದಿನ ಕಳೆದಂತೆ ತಾಂತ್ರಿಕತೆಯಲ್ಲೂ ಬಲವಾಗಿ ಬೇರೂರುತ್ತಿದೆ. ನಮ್ಮ ಸರ್ಕಾರ ಚಿತ್ರರಂಗಕ್ಕೆ ಸಾಕಷ್ಟು ಸಹಕಾರ ನೀಡಿದೆ. ಮುಖ್ಯಮಂತ್ರಿಗಳು ಚಿತ್ರನಗರಿಗಾಗಿ 500 ಕೋಟಿ ರುಪಾಯಿ ಅನುದಾನ ನೀಡಿದ್ದಾರೆ. ಮಾತು ಕೊಟ್ಟಂತೆ ನಡೆದಿದ್ದಾರೆ. ಚಿತ್ರರಂಗದಲ್ಲಿ ಇರುವ ಕೆಲ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ಪೈರಸಿ ಹೋಗಲಾಡಿಸಲು ಸರ್ಕಾರ ಸೂಕ್ತ ಕ್ರಮಕ್ಕೆ ಬದ್ಧವಾಗಿದೆ. ಚಿತ್ರರಂಗ ಕೂಡ ಸಹಕಾರ ಕೊಡಬೇಕು. ಇನ್ನು, ಚಿತ್ರರಂಗದ ಮೇಲಿರುವ ಜಿಎಸ್‌ಟಿ ಕಡಿಮೆಗೊಳಿಸಲು ಕೇಂದ್ರ ಸರ್ಕಾರದ ಸಚಿವರನ್ನು ಭೇಟಿ ಮಾಡುವ ಉದ್ದೇಶವಿದೆ.

ಮಂಡಳಿಯ ಪ್ರಮುಖರು ನಮ್ಮೊಂದಿಗೆ ಬಂದರೆ, ಚರ್ಚೆ ಮಾಡಿ ಮನವಿ ಕೊಡಬಹುದು. ಇನ್ನು, ಮಲ್ಟಿಪ್ಲೆಕ್ಸ್‌ ನಡೆಸುವವರೆಲ್ಲರೂ ವಚನ ಭ್ರಷ್ಟರು. ಜಾಗ ಪಡೆಯುವಾಗ, ಕನ್ನಡ ಸಿನಿಮಾಗಳಿಗೆ ಆದ್ಯತೆ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ, ಈಗ ಕನ್ನಡ ಸಿನಿಮಾಗಳನ್ನು ಕಡೆಗಣಿಸುತ್ತಿದ್ದಾರೆ. ಅದಕ್ಕೂ ಕಡಿವಾಣ ಹಾಕುತ್ತೇವೆ. ಕನ್ನಡ ಸಿನಿಮಾ ಓಡಲಿ, ಓಡದಿರಲಿ, ಮೊದಲ ಆದ್ಯತೆ ಕೊಡಬೇಕು’ ಎಂಬುದು ಬಸವರಾಜ ಬೊಮ್ಮಾಯಿ ಅವರ ಮಾತು. ರವಿಚಂದ್ರನ್‌ ಕೂಡ ಈ ವೇಳೆ ಮಾತಿಗಿಳಿದರು. “ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚಿತ್ರರಂಗದಲ್ಲಿರುವ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಬೇಕು.

ಈಗಷ್ಟೇ ಮಂಡಳಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಲೋಗೋ ಲಾಂಚ್‌ ಮಾಡಲಾಗಿದೆ. ಆದಷ್ಟು ಬೇಗ ಚಿತ್ರನಗರಿಗೂ ಚಾಲನೆ ಸಿಗಬೇಕು’ ಎಂದರು. ಜಗ್ಗೇಶ್‌ ಕೂಡ, ಮಂಡಳಿ ನಡೆದು ಬಂದ ಹಾದಿ ಕುರಿತು ಮಾತನಾಡಿದರು. “ಹಿಂದೆಲ್ಲಾ ಎಲ್ಲರೂ ಮಂಡ ಳಿಯ ತೀರ್ಮಾನಕ್ಕೆ ಬದ್ಧರಾಗಿದ್ದರು. ಆದರೆ, ಈಗ ಒಬ್ಬರಿಗೊಬ್ಬರು ಮಾತೇ ಕೇಳಲ್ಲ. ಎಲ್ಲರೂ ಮಂಡಳಿ ಮಾತು ಕೇಳಿದರೆ, ಚಿತ್ರರಂಗ ಇನ್ನಷ್ಟು ಬೆಳೆಯಲು ಸಾಧ್ಯ’ ಎಂದರು.

Advertisement

ಸಾ.ರಾ.ಗೋವಿಂದು ಮಾತನಾಡಿ, “ಈ ಹಿಂದೆ ರವಿಚಂದ್ರನ್‌ ಅವರು, ಚಿತ್ರನಗರಿ ಆಗಬೇಕು ಎಂದು 1983 ರ ಸಮಯದಲ್ಲೇ ಒಂದು ನೀಲಿನಕ್ಷೆ ಕೊಟ್ಟಿದ್ದರು. ಅದು ಮಾತಾಗಿಯೇ ಉಳಿದಿತ್ತು. ಈಗ ಚಿತ್ರನಗರಿಗೆ 500 ಕೋಟಿ ಅನುದಾನವಿದೆ. ಆದಷ್ಟು ಬೇಗ ನಿರ್ಮಾಣವಾಗಬೇಕು’ ಎಂದರು. ಈ ಸಂದರ್ಭದಲ್ಲಿ ಶಾಸಕ ಕುಮಾರ್‌ ಬಂಗಾರಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌, ಮಾಜಿ ಅಧ್ಯಕ್ಷರಾದ ಜಯಮಾಲಾ, ಕೆ.ವಿ.ಚಂದ್ರಶೇಖರ್‌, ಥಾಮಸ್‌. ಚಿನ್ನೇಗೌಡ, ಉಮೇಶ್‌ ಬಣಕಾರ್‌, ಎಂ.ಎನ್‌. ಸುರೇಶ್‌, ನಾಗಣ್ಣ ಹಾಗು ಮಂಡಳಿ ಪದಾಧಿಕಾರಿಗಳು, ನಿರ್ಮಾಪಕರ ಸಂಘದ ಪದಾಧಿಕಾರಿಗಳು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next