ಹೊಸದಿಲ್ಲಿ: ಭಾರತದ ವಯಸ್ಕ ಜನಸಂಖ್ಯೆಯ ಶೇಕಡಾ 75 ರಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶದ ನಾಗರಿಕರನ್ನು ಅಭಿನಂದಿಸಿದ್ದಾರೆ.
“ಎಲ್ಲಾ ವಯಸ್ಕರಲ್ಲಿ ಶೇಕಡಾ 75 ರಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿದ್ದಾರೆ. ಈ ಮಹತ್ವದ ಸಾಧನೆಗಾಗಿ ನಾಗರಿಕರಿಗೆ ಅಭಿನಂದನೆಗಳು. ನಮ್ಮ ಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸುತ್ತಿರುವ ಎಲ್ಲರ ಬಗ್ಗೆ ಹೆಮ್ಮೆಯಿದೆ” ಎಂದು ಪ್ರಧಾನಿ ಮೋದಿ ಭಾನುವಾರ ಟ್ವೀಟ್ ಮಾಡಿದ್ದಾರೆ.
ದೇಶದ ವಯಸ್ಕ ಜನಸಂಖ್ಯೆಯ ಶೇಕಡಾ 75 ಕ್ಕಿಂತ ಹೆಚ್ಚು ಜನರು ಈಗ ಕೋವಿಡ್ ವಿರುದ್ಧ ಸಂಪೂರ್ಣವಾಗಿ ಲಸಿಕೆ ಹಾಕಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಭಾನುವಾರ ತಿಳಿಸಿದ ನಂತರ ಪ್ರಧಾನ ಮಂತ್ರಿಯ ಅಭಿನಂದನಾ ಟ್ವೀಟ್ ಬಂದಿದೆ.
ಇದನ್ನೂ ಓದಿ:24 ಗಂಟೆಯಲ್ಲಿ 2.34 ಲಕ್ಷ ಕೋವಿಡ್ ಪ್ರಕರಣಗಳು ಪತ್ತೆ; 893 ಸೋಂಕಿತರು ಸಾವು
“ಸಬ್ಕಾ ಸಾಥ್, ಸಬ್ಕಾ ಪ್ರಯಾಸ್’ ಎಂಬ ಮಂತ್ರದೊಂದಿಗೆ, ಭಾರತವು ತನ್ನ ವಯಸ್ಕ ಜನಸಂಖ್ಯೆಯ ಶೇಕಡಾ 75 ರಷ್ಟು ಜನರಿಗೆ ಎರಡೂ ಡೋಸ್ ಲಸಿಕೆ ಹಾಕಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ನಾವು ಬಲಶಾಲಿಯಾಗುತ್ತಿದ್ದೇವೆ. ನಾವು ಎಲ್ಲಾ ನಿಯಮಗಳನ್ನು ಅನುಸರಿಸಬೇಕು ಮತ್ತು ನಿರ್ವಹಿಸಬೇಕು. ಆದಷ್ಟು ಬೇಗ ಲಸಿಕೆ ಹಾಕಿಕೊಳ್ಳಿ,” ಎಂದು ಮಾಂಡವಿಯ ಟ್ವೀಟ್ ಮಾಡಿದ್ದಾರೆ.
ಭಾರತ ಸರ್ಕಾರವು ಇದುವರೆಗೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ 164.36 ಕೋಟಿಗೂ ಹೆಚ್ಚು (1,64,36,66,725) ಲಸಿಕೆ ಡೋಸ್‌ಗಳನ್ನು ಒದಗಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
12.43 ಕೋಟಿಗಿಂತ ಹೆಚ್ಚು (12,43,49,361) ಬಾಕಿ ಮತ್ತು ಬಳಕೆಯಾಗದ ಕೊವಿಡ್ ಲಸಿಕೆ ಡೋಸ್ ಗಳು ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿತದ ಪ್ರದೇಶಗಳಲ್ಲಿ ಲಭ್ಯವಿವೆ.