ಹೊಸದಿಲ್ಲಿ: ಆತ್ಮನಿರ್ಭರ ಭಾರತದ ಗುರಿ ಸಾಧಿಸುವ ನಿಟ್ಟಿನಲ್ಲಿ 70,584 ಕೋಟಿ ರೂ. ಮೊತ್ತದ ದೇಶೀಯವಾಗಿ ತಯಾರಿಸಿದ ರಕ್ಷಣ ಉತ್ಪನ್ನಗಳ ಖರೀದಿಗೆ ರಕ್ಷಣ ಖರೀದಿ ಮಂಡಳಿ(ಡಿಎಸಿ) ಅನುಮೋದನೆ ನೀಡಿದೆ. ದೇಶೀಯ ರಕ್ಷಣ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ರಕ್ಷಣ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಡಿಸಿಎ, ಬೃಹತ್ ಖರೀದಿ ಯೋಜನೆ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದೆ.
ಚೀನ ಮತ್ತು ಪಾಕಿಸ್ಥಾನದ ಗಡಿ ಕ್ಯಾತೆ ಮುಂದುವರಿ ದಿರುವ ಹಿನ್ನೆಲೆಯಲ್ಲಿ ಈ ಕ್ರಮ ಹೆಚ್ಚಿನ ಮಹತ್ವ ಪಡೆದಿದೆ. ಭಾರತದಲ್ಲಿ ಸ್ಥಳೀಯವಾಗಿ ವಿನ್ಯಾಸಗೊಳಿಸಿದ, ಅಭಿವೃದ್ಧಿ ಪಡಿಸಿದ ಉತ್ಪನ್ನಗಳ ಖರೀದಿ ಅಡಿ 70,584 ಕೋಟಿ ರೂ. ಮೊತ್ತದ ಯೋಜನೆಗೆ ಡಿಎಸಿ ಸಮ್ಮತಿ ಸೂಚಿಸಿದೆ.
ಈ ಮೂಲಕ 2022-23ರ ಹಣಕಾಸು ವರ್ಷದಲ್ಲಿ ಒಟ್ಟಾರೆ 2,71,538 ಕೋಟಿ ರೂ.ಗಳ ಖರೀದಿಗೆ ಅನುಮೋದನೆ ದೊರೆತಂತಾಗಿದೆ. ಈ ಪೈಕಿ ಶೇ.98.9ರಷ್ಟು ಭಾರತೀಯ ಕೈಗಾರಿಕೆಗಳಿಂದ ಖರೀದಿಸಲಾಗುತ್ತದೆ.