ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳ ಆಸ್ತಿ, ಪಾಸ್ತಿ ಸಂರಕ್ಷಣೆಗೆ ನಡೆಸುತ್ತಿರುವ ದೇಗುಲಗಳ ಸರ್ವೆ ಕಾರ್ಯ ಜಿಲ್ಲೆಯಲ್ಲಿ ಕುಂಟುತ್ತಾ ಸಾಗಿದ್ದು, ಇನ್ನೂ 702 ದೇವಾಲಯಗಳ ಸರ್ವೆ ಕಾರ್ಯ ಬಾಕಿ ಇದೆ.
ಮುಜರಾಯಿ ಇಲಾಖೆಗೆ ಸೇರಿದ ಸಾವಿರಾರು ದೇವಾಲಯಗಳು ಪ್ರತಿ ಗ್ರಾಮದಲ್ಲಿ ಇದ್ದರೂ ಅವುಗಳನ್ನು ಇಲಾಖೆ ಎ, ಬಿ ಹಾಗೂ ಸಿ ಎಂದು ವರ್ಗವಾಗಿ ವಿಂಗಡಿಸಿದೆ. ಜಿಲ್ಲೆಯಲ್ಲಿ ಎ ವರ್ಗಕ್ಕೆ ಸೇರುವ ದೇವಾಲಯಗಳು ಕೇವಲ 3 ಇದ್ದು, ಬಿ ವರ್ಗಕ್ಕೆ 4, ಸಿ ವರ್ಗಕ್ಕೆ ಸೇರುವ ಒಟ್ಟು 1102 ದೇವಾಲಯಗಳು ಇವೆ.
ಇವುಗಳಲ್ಲಿ ಎ ವರ್ಗಕ್ಕೆ ಸೇರಿದ ದೇವಾಲಯಗಳಿಗೆ ವಾರ್ಷಿಕ ಲಕ್ಷಾಂತರ ರೂ. ಆದಾಯ ಇದ್ದು, ಬಿ ವರ್ಗಕ್ಕೆ ಸೇರಿದ ದೇವಾಲಯಗಳಲ್ಲಿ ಆದಾಯ ಕಡಿಮೆ ಇದ್ದು, ಸಿ ವರ್ಗದ ದೇವಾಲಯಗಳಿಗೆ ಸರ್ಕಾರವೇ ಹಣ ಕೊಡುತ್ತದೆ. ಆದರೆ ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳನ್ನು ಸಂರಕ್ಷಿಸಿ ದೇಗುಲಕ್ಕೆ ಸೇರಿದ ಜಮೀನು ಮತ್ತಿತರ ಬೆಲೆ ಬಾಳುವ ಜಾಗ, ಆವರಣ, ಕಲ್ಯಾಣಿ, ಕಲ್ಯಾಣ ಮಂಟಪ ಹೀಗೆ ಏನಾದರೂ ಇದ್ದಲ್ಲಿ ಸಮರ್ಪಕವಾಗಿ ಸರ್ವೆ ಕಾರ್ಯ ನಡೆಸಿ ದೇವಾಲಯಕ್ಕೆ ಸೇರಿದ ಜಮೀನುಗಳನ್ನು ಪಹಣಿಗೆ ಸೇರಿಸಿ ದಾಖಲಿಸುವ ನಿಟ್ಟಿನಲ್ಲಿ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸರ್ವೆ ಕಾರ್ಯ ನಡೆಯದೇ ಇರುವುದು ಎದ್ದು ಕಾಣುತ್ತಿದೆ.
ವಿಧುರಾಶ್ವತ್ಥ ಮಾತ್ರ ಶ್ರೀಮಂತ ದೇವಾಲಯ: ಇಡೀ ಜಿಲ್ಲೆಯ ಪೈಕಿ ಮುಜರಾಯಿ ದೇವಾಲಯಗಳಲ್ಲಿ ಅತ್ಯಂತ ಶ್ರೀಮಂತ ದೇಗುಲ ಇದ್ದರೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿಧುರಾಶ್ವತ್ಥದ ದೇಗುಲ ಮಾತ್ರ. ಅಲ್ಲಿ ವಾರ್ಷಿಕವಾಗಿ ಲಕ್ಷಾಂತರ ರೂ. ಹಣ ಹುಂಡಿ ಮೂಲಕ ಭಕ್ತರಿಂದ ಸಂಗ್ರಹವಾಗುತ್ತದೆ. ಕಳೆದ ವರ್ಷ 17 ಲಕ್ಷ ರೂ. ಸಂಗ್ರಹವಾಗಿತ್ತು. ಈ ಬಾರಿ ಹುಂಡಿ ಎಣಿಕೆ ಮಾಡಿಲ್ಲ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಉಳಿದಂತೆ ನಂದಿ, ರಂಗಸ್ಥಳ, ಕೈವಾರ ಅಮರನಾರೇಯಣ ಸ್ವಾಮಿ ದೇವಾಲಯಗಳಿದ್ದು ಹುಂಡಿ ಮೂಲಕ ಭಕ್ತರ ಕಾಣಿಕೆ ಸಂಗ್ರಹ ಅಷ್ಟಕಷ್ಟೇ.
ಜಿಲ್ಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳ ಆಸ್ತಿ, ಪಾಸ್ತಿಗಳನ್ನು ಸಂರಕ್ಷಿಸಲು ಸರ್ವೆ ಕಾರ್ಯ ನಡೆಯುತ್ತಿದ್ದು, ಇಲ್ಲಿವರೆಗೂ ಒಟ್ಟು 411 ದೇವಾಲಯಗಳನ್ನು ಸರ್ವೆ ಮಾಡಿಸಿ ಆಸ್ತಿ ಗುರುತಿಸಿ ಪಹಣಿಗೆ ಸೇರಿಸಲಾಗಿದೆ. ಉಳಿಕೆ 702 ದೇವಾಲಯಗಳ ಸರ್ವೆ ಕಾರ್ಯ ಪ್ರಗತಿಯಲ್ಲಿದೆ.
●ಸೌಭಾಗ್ಯಮ್ಮ, ಮುಜರಾಯಿ, ತಹಶೀಲ್ದಾರ್, ಚಿಕ್ಕಬಳ್ಳಾಪುರ
-ಕಾಗತಿ ನಾಗರಾಜಪ್ಪ