ಜೈಪುರ: ವಿಧಾನಸಭಾ ಚುನಾವಣೆಗೆ ರಾಜಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದ್ದು, ಏಳು ಮಂದಿ ಹಾಲಿ ಸಂಸದರ ಹೆಸರು 41 ಅಭ್ಯರ್ಥಿಗಳ ಪಟ್ಟಿಯಲ್ಲಿ ಒಳಗೊಂಡಿದೆ.
200 ಸದಸ್ಯ ಬಲದ ವಿಧಾನಸಭೆಗೆ ನ.23ರಂದು ಮತದಾನ ನಡೆಯಲಿದ್ದು ಬಿಜೆಪಿ ಮರಳಿ ಅಧಿಕಾರ ಪಡೆಯಲು ಹೊಸ ರಣತಂತ್ರಗಳನ್ನು ಹಣೆಯುತ್ತಿದೆ.
ಸಂಸದರಾಗಿರುವ ರಾಜ್ಯವರ್ಧನ್ ಸಿಂಗ್ ರಾಥೋಡ್ ಝೋತ್ವಾರಾದಿಂದ, ದಿಯಾ ಕುಮಾರಿ ವಿದ್ಯಾಧರ್ ನಗರದಿಂದ, ಬಾಬಾ ಬಾಲಕನಾಥ್ ತಿಜಾರಾದಿಂದ, ಹಂಸರಾಜ್ ಮೀನಾ ಸಪೋತ್ರದಿಂದ ಮತ್ತು ಕಿರೋಡಿ ಲಾಲ್ ಮೀನಾ ಸವಾಯಿ ಮಾಧೋಪುರದಿಂದ, ಭಾಗೀರಥ ಚೌಧರಿ ಕಿಶನಘರ್ ನಿಂದ ದೇವ್ ಜಿ ಪಟೇಲ್ ಸಂಚೋರೆಯಿಂದ ಸ್ಪರ್ಧಿಸಲಿದ್ದಾರೆ.
ಮಧ್ಯಪ್ರದೇಶದಲ್ಲಿ 57 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಸೋಮವಾರ ಬಿಡುಗಡೆ ಮಾಡಿದೆ. ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಬುಧ್ನಿಯಿಂದ, ರಾಜ್ಯದ ಗೃಹ ಸಚಿವ ನರೋತ್ತಮ್ ಮಿಶ್ರಾ ಡಾಟಿಯಾದಿಂದ, ಗೋಪಾಲ್ ಭಾರ್ಗವ ರೆಹ್ಲಿಯಿಂದ, ವಿಶ್ವಾಸ್ ಸಾರಂಗ್ ನರೇಲಾದಿಂದ ಮತ್ತು ತುಳಸಿರಾಮ್ ಸಿಲಾವತ್ ಸಾನ್ವೆರ್‌ನಿಂದ ಸ್ಪರ್ಧಿಸಲಿದ್ದಾರೆ.
ಛತ್ತೀಸ್‌ಗಢದ 64 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ, ಹಾಲಿ ಸಂಸದ ಅರುಣ್ ಸಾವೊ ಲೋರ್ಮಿಯಿಂದ ಸ್ಪರ್ಧಿಸಲಿದ್ದಾರೆ.ಇನ್ನೋರ್ವ ಸಂಸದೆ ಗೋಮತಿ ಸಾಯಿ ಅವರು ಪತಾಲ್ ಗಾವ್ ಎಸ್ ಟಿ ಮೀಸಲು ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.