ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ 2016ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ ಜೆಡಿಎಸ್‌ನ ಏಳು ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ನಿರ್ಗಮಿತ ಸ್ಪೀಕರ್ ಕೆ.ಬಿ. ಕೋಳಿವಾಡ ವಜಾಗೊಳಿಸಿದ್ದಾರೆ.
“14ನೇ ವಿಧಾನಸಭೆ ವಿಸರ್ಜನೆಗೊಂಡಿರು ವುದರಿಂದ ಆ ವಿಧಾನಸಭೆಯ ಸದಸ್ಯರಾಗಿದ್ದ ವರ ಅನರ್ಹತೆ ವಿಷಯ ಈಗ ಅಪ್ರಸ್ತುತ ಮತ್ತು ಅನೂರ್ಜಿತ. ಆದ್ದರಿಂದ ಪ್ರಕರಣದ ಅರ್ಜಿಯನ್ನು ವಜಾಗೊಳಿಸಲಾಗಿದೆ’ ಎಂದು ಶುಕ್ರವಾರ ಬೆಳಗ್ಗೆ 10.30ಗಂಟೆಗೆ ತಮ್ಮ ನಿವಾಸದಲ್ಲಿ ಕೆ.ಬಿ.ಕೋಳಿವಾಡ ಆದೇಶ ನೀಡಿದ್ದಾರೆಂದು ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಸುದ್ದಿಗಾರರಿಗೆ ತಿಳಿಸಿದರು.
ಅನರ್ಹತೆ ಭೀತಿ ಎದುರಿಸುತ್ತಿದ್ದ ಏಳು ಜೆಡಿಎಸ್ ಶಾಸಕರ ಪೈಕಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಮೀರ್ ಅಹ್ಮದ್ ಖಾನ್,ಅಖಂಡ ಶ್ರೀನಿವಾಸಮೂರ್ತಿ ಹಾಗೂ ಭೀಮಾ ನಾಯಕ್ ಮಾತ್ರ ಈ ಬಾರಿಯೂ ಗೆದ್ದಿದ್ದು,ಸ್ಪೀಕರ್ ತೀರ್ಪಿನ ಹಿನ್ನೆಲೆಯಲ್ಲಿ ಅನರ್ಹತೆ ತೂಗುಗತ್ತಿಯಿಂದ ಪಾರಾಗಿದ್ದಾರೆ. ಉಳಿದವರು ಸೋತಿದ್ದು, ಅನರ್ಹತೆ ವಿಷಯ ಅನ್ವಯವಾಗುವುದಿಲ್ಲ ಎಂದರು.
ಬೋಪಯ್ಯ ಅವರು ಶನಿವಾರ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ, ಮೇ 19ರಿಂದ ಕಾರ್ಯಭಾರ ನಿಭಾಯಿಸುವಂತೆ ರಾಜ್ಯಪಾ ಲರು ಆದೇಶದಲ್ಲಿ ತಿಳಿಸಿದ್ದಾರೆ. ಮೇ 18ರ ಮಧ್ಯರಾತ್ರಿ 12ರವರೆಗೆ ಕೋಳಿವಾಡ ಅವರೇ ಸ್ಪೀಕರ್ ಆಗಿರುತ್ತಾರೆ.
– ಎಸ್. ಮೂರ್ತಿ, ವಿಧಾನಸಭೆ ಕಾರ್ಯದರ್ಶಿ