ಛತ್ತೀಸ್‌ಗಢ: ಭದ್ರತಾ ಪಡೆಗಳೊಂದಿಗೆ ಇಂದು ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳಾ ಸದಸ್ಯರು ಸೇರಿದಂತೆ ಕನಿಷ್ಠ ಏಳು ಮಾವೋವಾದಿಗಳು ಹತರಾಗಿರುವ ಘಟನೆ ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಮಂಗಳವಾರ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಎಕೆ ೪೭ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇಂದು ಬೆಳಿಗ್ಗೆ 6 ಗಂಟೆಗೆ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಹಾಗೂ ಭದ್ರತಾ ಪಡೆಗಳು ಜಂಟಿಯಾಗಿ ನಾರಾಯಣಪುರ ಮತ್ತು ಕಂಕೇರ್ ಗಡಿ ಪ್ರದೇಶದ ಅಬುಜ್‌ಮರ್‌ನಲ್ಲಿ ನಡೆಸಿದ ಕಾರ್ಯಾಚರಣೆಯ ವೇಳೆ ಎನ್‌ಕೌಂಟರ್ ನಡೆದಿದೆ ಎನ್ನಲಾಗಿದೆ. ಈ ವೇಳೆ ಮಾವೋವಾದಿಗಳ ತಂಡದಲ್ಲಿದ್ದ ಇಬ್ಬರು ಮಹಿಳಾ ಸದಸ್ಯರು ಸೇರಿದಂತೆ ಏಳು ಮಂದಿ ಹತರಾಗಿದ್ದಾರೆ.
ಮೃತದೇಹಗಳನ್ನು ವಶಕ್ಕೆ ಪಡೆದುಕೊಂಡಿರುವ ಭದ್ರತಾ ಪಡೆ ವ್ಯಕ್ತಿಗಳ ಗುರುತು ಪತ್ತೆಹಚ್ಚುವ ಕಾರ್ಯ ನಡೆಸುತ್ತಿದ್ದಾರೆ.
ಮಾವೋವಾದಿ ಶಿಬಿರದಿಂದ ಒಂದು ಎಕೆ 47 ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಮತ್ತು ದೈನಂದಿನ ಬಳಕೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ, ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಹಿರಿಯ ಬಂಡಾಯ ನಾಯಕ ಶಂಕರ್ ರಾವ್ ಸೇರಿದಂತೆ 29 ಮಾವೋವಾದಿಗಳನ್ನು ಹತ್ಯೆ ಮಾಡಿತ್ತು.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್