Advertisement

ಮಳೆಗೆ ಬಳಲಿದ ಅಸ್ಸಾಂ; ನಿಲ್ಲದ ಪ್ರವಾಹ ಪ್ರಕೋಪ; ರಕ್ಷಣಾ ಕಾರ್ಯ

10:55 PM May 21, 2022 | Team Udayavani |

ನವದೆಹಲಿ: ದೇಶದ ಈಶಾನ್ಯ ರಾಜ್ಯ ಅಸ್ಸಾಂ, ದಕ್ಷಿಣದ ಕೇರಳದಲ್ಲಿ ಮಳೆಯ ಪ್ರಕೋಪ ತಗ್ಗಿಯೇ ಇಲ್ಲ. ಅಸ್ಸಾಂನ ಜಮುನಾಮುಖ್‌ ಜಿಲ್ಲೆಯ ಎರಡು ಗ್ರಾಮಗಳ ಜನರು ರೈಲ್ವೇ ಹಳಿಯಲ್ಲಿಯೇ ನಿಂತು 500 ಕುಟುಂಬಗಳು ಜೀವನ ಸಾಗಿಸಬೇಕಾಗದ ಅನಿವಾರ್ಯತೆ ಉಂಟಾಗಿದೆ.

Advertisement

ಇದೇ ವೇಳೆ, ಅಸ್ಸಾಂನ ದಿಮಾ ಹಸೋ ಎಂಬ ಜಿಲ್ಲೆಯಲ್ಲಿ ರಸ್ತೆ ಸಂಪರ್ಕ ಕಡಿದು ಹೋಗಿದೆ. ಹಾಫ್ಲಾಂಗ್‌ ಎಂಬ ಜಿಲ್ಲೆಯ ಪ್ರಮುಖ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಡಿದುಹೋಗಿದೆ. ಆ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಭೂಕುಸಿತ ಉಂಟಾಗಿದೆ. ಹೀಗಾಗಿ, ಅಲ್ಲಿಗೆ ಸರಾಗವಾಗಿ ವಾಹನ ಸಂಚಾರಕ್ಕೆ ಮತ್ತೆ ರಸ್ತೆಗಳನ್ನು ಪೂರ್ಣ ಪ್ರಮಾಣ ನಿರ್ಮಾಣ ಮಾಡಲು ಬರೋಬ್ಬರಿ ಆರು ತಿಂಗಳು ಬೇಕಾದೀತು ಎಂಬ ಅಂದಾಜನ್ನು ಜಿಲ್ಲಾಡಳಿತ ವ್ಯಕ್ತಪಡಿಸಿದೆ. ಅಲ್ಲಿ ಈಗ ಕುಡಿವ ನೀರಿಗೂ ತತ್ವಾರ ಉಂಟಾಗಿದೆ.

ಕೊರತೆ:
ಅಸ್ಸಾಂನ ದಿಮಾ ಹಸೋ ಒಂದರಲ್ಲಿಯೇ ಪ್ರವಾಹದಿಂದ ಉಂಟಾಗಿರುವ ನಷ್ಟದ ಪ್ರಮಾಣವೇ ಒಂದು ಸಾವಿರ ಕೋಟಿ ರೂ. ಎಂದು ಸದ್ಯಕ್ಕೆ ಅಂದಾಜು ಮಾಡಲಾಗಿದೆ. ಭೂಕುಸಿತ ಉಂಟಾಗಿ, ರಸ್ತೆ ಸಂಪರ್ಕ ಕಡಿದು ಹೋಗಿರುವುದರಿಂದ ತೈಲೋತ್ಪನ್ನಗಳ ಕೊರತೆ ಉಂಟಾಗಿದೆ. ಪ್ರತಿ ಲೀಟರ್‌ ಪೆಟ್ರೋಲ್‌ಗೆ 150 ರೂ. ವರೆಗೆ ಪಾವತಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಸಚಿವರ ನಿಯೋಜನೆ:
ಅಸ್ಸಾಂ ಸಿಎಂ ಹಿಮಾಂತ ಶರ್ಮಾ ಬಿಸ್ವಾ ಜಿಲ್ಲೆಯ ಪುನರ್‌ ನಿರ್ಮಾಣಕ್ಕೆ ಆದೇಶ ನೀಡಿದ್ದು, ಇಬ್ಬರು ಸಚಿವರನ್ನು ನಿಯೋಜಿಸಿದ್ದಾರೆ.

ಹಳಿಯಲ್ಲಿಯೇ ಆಶ್ರಯ:
ಜಮುನಾಮುಖ್‌ ಜಿಲ್ಲೆಯ ಚಾಂಗುರಾಜ್‌ ಮತ್ತು ಪತಾರ್‌ ಎಂಬ ಗ್ರಾಮಗಳಲ್ಲಿನ 500 ಕುಟುಂಬಗಳು ರೈಲು ಹಳಿಯಲ್ಲಿ ಆಶ್ರಯ ಪಡೆದಿವೆ. ಗ್ರಾಮಗಳ ಕೆಳಗಿನ ಭಾಗ ಸಂಪೂರ್ಣ ಜಲಾವೃತಗೊಂಡಿರುವುದರಿಂದ ಅವರು ಹಳಿಯಲ್ಲೇ ಆಶ್ರಯ ಪಡೆದಿದ್ದಾರೆ. ಪ್ರವಾಹ ಪೀಡಿತರಿಗಾಗಿ ರಾಜ್ಯ ಸರ್ಕಾರ ನಿರ್ಮಿಸಿರುವ ಶೆಡ್‌ಗಳಿಗೆ ತೆರಳಲೂ ಅವರು ನಿರಾಕರಿಸಿದ್ದಾರೆ. ಐದು ದಿನಗಳಿಂದ ಜಿಲ್ಲಾಡಳಿತದಿಂದ ಯಾವುದೇ ರೀತಿಯ ನೆರವು ಗ್ರಾಮಕ್ಕೆ ಲಭಿಸಿಲ್ಲವೆಂದು ಅವರು ಆರೋಪಿಸಿದ್ದಾರೆ.

Advertisement

7 ಲಕ್ಷ ಮಂದಿ- ಅಸ್ಸಾಂನಲ್ಲಿ ತೊಂದರೆಗೆ ಒಳಗಾದವರು
3.36 ಲಕ್ಷ- ನಾಗಾಂನ್‌ ಜಿಲ್ಲೆ
1.66 ಲಕ್ಷ- ಕಾಚಾರ್‌ ಜಿಲ್ಲೆ
1.11 ಲಕ್ಷ – ಹಾಜೋಜಿ
52,709- ದರ್ರಾಂಗ್‌ ಜಿಲ್ಲೆ

ಕೇರಳಕ್ಕೆ ಸಿಕ್ಕಿದೆ ಹೆಚ್ಚಿನ ಮಳೆ
ಕೇರಳದಲ್ಲಿ ಶನಿವಾರವೂ ಧಾರಾಕಾರ ಮಳೆ ಮುಂದುವರಿದಿದೆ. ಉತ್ತರ ಕೇರಳದಲ್ಲಿ ಪ್ರತಿ ಗಂಟೆಗೆ 50-60 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಭಾರತೀಯ ಹವಾಮಾನ ಇಲಾಖೆಯ ವೆಬ್‌ಸೈಟ್‌ ಪ್ರಕಾರ ಶೇ.237 ಹೆಚ್ಚುವರಿ ಮಳೆ ಕೇರಳದಲ್ಲಿ ಸುರಿದಿದೆ. ಗಮನಾರ್ಹ ಅಂಶವೆಂದರೆ, ರಾಜ್ಯದಲ್ಲಿ ಈಗಾಗಲೇ ಅಗತ್ಯಕ್ಕಿಂತ ಹೆಚ್ಚು ಮಳೆಯಾಗಿದೆ. ಾನುವಾರ ಕೂಡ ದೇವರೊಲಿದ ರಾಜ್ಯದ ಹತ್ತು ಜಿಲ್ಲೆಗಳಿಗೆ ಅನ್ವಯವಾಗುವಂತೆ ಯಲ್ಲೋ ಅಲರ್ಟ್‌ ಹೊರಡಿಸಲಾಗಿದೆ.

ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ತ್ರಿಶ್ಶೂರ್‌, ಮಲಪ್ಪುರಂ, ಕಲ್ಲಿಕೋಟೆ, ವಯನಾಡ್‌ ಜಿಲ್ಲೆಗಳಿಗೆ ಅದು ಅನ್ವಯವಾಗಲಿದೆ. ಇಡುಕ್ಕಿ ಜಿಲ್ಲೆಯಲ್ಲಿ ಕಲ್ಲರ್‌ಕುಲ್ಲಿ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ, ಹೆಚ್ಚುವರಿ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಪಂಪಾ ನದಿಯಲ್ಲಿನ ಅಣೆಕಟ್ಟಿನಿಂದಲೂ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next