ಮಾಲೂರು: ಶೋಷಿತ ಸಮುದಾಯ ಆಡಳಿತ ಚುಕ್ಕಾಣಿ ಹಿಡಿಯದ ಹೊರತು ಸಂವಿಧಾನದ ಆಶಯಗಳು ಈಡೇರಲು ಸಾಧ್ಯವಿಲ್ಲ ಎಂದು ಆರ್‌ಪಿಐ ಮತ್ತು ಸಮತಾ ಸೈನಿಕದಳದ ರಾಜ್ಯಾಧ್ಯಕ್ಷ ಡಾ. ವೆಂಕಟಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಸಮತಾ ಸೈನಿಕದಳ ಆಯೋಜಿಸಿದ್ದ ಮಾಲೂರು ತಾಲೂಕು ಮತ್ತು ಪಟ್ಟಣದ ವಿವಿಧ ಘಟಕಗಳ ಪದಾಧಿಕಾರಿಗಳ ನೇಮಕ ಪ್ರಕ್ರಿಯೆಯಲ್ಲಿ ಅವರು ಮಾತನಾಡಿದರು.
ಸಂವಿಧಾನ ಲೋಕಾರ್ಪಣೆಯಾಗಿ 7 ದಶಕ ಗಳು ಕಳೆದಿವೆಯಾದರೂ ಇಲ್ಲಿಯವರೆಗೂ ಅಧಿಕಾರ ಚುಕ್ಕಾಣಿ ಹಿಡಿದ ಸರ್ಕಾರಗಳು ದಲಿತ, ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಅಭಿವೃದ್ಧಿ ಪಡಿಸುವ ಕಾರ್ಯವನ್ನು ಕೈಗೊಂಡಿಲ್ಲ. ರಾಜ್ಯದಲ್ಲಿನ ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಗಳು ಹಾಗೂ ಅಲೆಮಾರಿ ಸಮುದಾಯಗಳು ಒಗ್ಗಟಿನಿಂದ ಹೋರಾಟ ರೂಪಿಸದ ಹೊರತು ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ 60 ವರ್ಷಗಳಿಂದಲೂ ದಲಿತ, ಹಿಂದುಳಿದ ವರ್ಗ ಹಾಗೂ ಅಲೆಮಾರಿ ಸಮುದಾಯಗಳ ಜೊತೆಗೆ ಮಹಿಳೆಯರು ಮತ್ತು ವಿದ್ಯಾರ್ಥಿಗಳನ್ನು ದುಡಿಸಿಕೊಂಡು ಅಧಿಕಾರದ ಅಮಲಿನಲ್ಲಿ ರಾಜಕಾರಣ ನಡೆಸುತ್ತಿದೆಯೇ ಹೊರತು ಶೋಷಿತ ಸಮುದಾಯಗಳ ಅಭಿವೃದ್ಧಿ ಯನ್ನು ಕೈಗೊಳ್ಳಲು ವಿಫಲವಾಗಿದೆ ಎಂದು ದೂರಿದರು.
ಆರ್‌ಪಿಐ ಪಕ್ಷ 60 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜಯಂತಿಯ ಅಂಗವಾಗಿ ಜ.30ರಂದು ಬೆಂಗಳೂರು ಕ್ಯಾಪಿಟಲ್ ಹೋಟೆಲ್‌ನಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿ ಕೊಳ್ಳಲಾಗಿದೆ. ತಾಲೂಕಿನ ಆರ್‌ಪಿಐ ಮತ್ತು ಎಸ್‌ಎಸ್‌ಡಿಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಎಸ್‌ಎಸ್‌ಡಿಯ ತಾಲೂಕು ಅಧ್ಯಕ್ಷ ಗೋವಿಂದ ಸ್ವಾಮಿ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನು ಮತ್ತು ಸಿದ್ಧಾಂತಗಳನ್ನು ಪ್ರತಿಪಾದಿ ಸುವ ಮೂಲಕ ಶೋಷಿತ ಸಮುದಾಯಗಳು ಅಧಿಕಾರತದ ಚುಕ್ಕಾಣಿ ಹಿಡಿಯುವ ಅನಿರ್ವಾಯವಿದೆ. ಸಂಘಟಿತ ಹೋರಾಟದ ಮೂಲಕ ಮಾತ್ರ ಇದು ಸಾಧ್ಯವಾಗಲಿದೆ. ದಲಿತ, ಹಿಂದುಳಿದ ಮತ್ತು ಕೆಳವರ್ಗದ ಸಮುದಾಯಗಳ ಆಶೋತ್ತರ ಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಆರ್‌ಪಿಐಯನ್ನು ಬೆಂಬಲಿಸುವುದು ಅನಿವಾರ್ಯ ಎಂದರು.
ಇದೇ ಸಂದರ್ಭದಲ್ಲಿ ತಾಲೂಕಿನ ವಿವಿಧ ಶಾಖೆ ಗಳ ಮತ್ತು ನಗರ ಘಟಕದ ವಿವಿಧ ಶಾಖೆಗಳ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಮುಖಂಡರಾದ ರಾಜಪ್ಪ, ಸಂತೋಷ್, ರಾಘವೇಂದ್ರ, ರಘು ನಾಥ್, ಲೋಕೇಶ್, ನಿದರಮಂಗಲ ವೆಂಕಟೇಶ್, ಭಾಸ್ಕರ್, ನಾಗೇಶ್, ಸೋಮು, ಸುನಿಲ್ ಕುಮಾರ್, ಪಾಪಯ್ಯ ಮತ್ತಿತರರು ಇದ್ದರು.