Advertisement

ಆ ಪ್ರಳಯಾಂತಕ ಅಪಾಯದಿಂದ ಪಾರಾದ 7 ಜೀವಿಗಳು

03:50 AM Apr 13, 2017 | Team Udayavani |

ನಾವೀಗ ವಾಸಿಸುತ್ತಿರುವ ಇದೇ ನೆಲದ ಮೇಲೆ ಮಿಲಿಯ ವರ್ಷಗಳ ಹಿಂದೆ ಓಡಾಡಿಕೊಂಡಿದ್ದ ಡೈನೋಸಾರ್‌ಗಳು, ಯಾವ ಕಾರಣಕ್ಕೆ ಭೂಮಿ ಮೇಲಿಂದ ನಶಿಸಿದವು ಎನ್ನುವುದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಡೈನೋಸಾರ್‌ಗಳು ಭೂಮಿ ಮೇಲೆ ಜೀವಿಸಿದ್ದ ಕಾಲವನ್ನು “ಮೆಸೊಝೋಯಿಕ್‌ ಕಾಲ’ ಎನ್ನುವರು. ಈ ಅವಧಿ ಸುಮಾರು 230 ಮಿಲಿಯ ವರ್ಷಗಳಷ್ಟೂ ಸುದೀರ್ಘ‌ವಾಗಿತ್ತು. ಅಂದರೆ 230 ಮಿಲಿಯ ವರ್ಷಗಳಷ್ಟು ಕಾಲ ಡೈನೋಸಾರ್‌ಗಳು ಭೂಮಿಯ ಮೇಲೆ ತಮ್ಮ ಪಾರಮ್ಯ ಮೆರೆದಿದ್ದವು. ಅವುಗಳ ಅಳಿವಿಗೆ ಅಂತರಿಕ್ಷದಿಂದ ಹಾರಿಬಂದ ಕ್ಷುದ್ರಗ್ರಹ ಕಾರಣವಾಯಿತು ಎಂಬ ಒಂದು ವಾದವಿದೆ. ಅವುಗಳ ಸಂಖ್ಯೆ ಅತ್ಯಧಿಕವಾಗಿ, ಆಹಾರದ ಕೊರತೆ ತಲೆದೋರಿ ಅಳಿಯಿತು ಎಂದು ಕೆಲವರು ಹೇಳಿದರೆ, ಮತ್ತೂ ಕೆಲವರು ಸರಣಿ ಜ್ವಾಲಾಮುಖೀ ಸ್ಫೋಟದಿಂದುಂಟಾದ ಹವಾಮಾನ ಬದಲಾವಣೆಯಿಂದ ಎಂದೂ ವಾದಿಸುವರು. ಈ ಬಗ್ಗೆ ಗೊಂದಲ ಹಾಗೆಯೇ ಉಳಿದಿದೆ. ಮೆಸೊಝೋಯಿಕ್‌ ಕಾಲದಲ್ಲಿಯೇ ಭೂಮಿ ಮೇಲೆ ಅನೇಕ ಪ್ರಾಣಿಗಳೂ ಬದುಕಿದ್ದವು. ಡೈನೋಸಾರ್‌ಗಳನ್ನು ಆಪೋಶನ ತೆಗೆದುಕೊಂಡ ಆ ಆಗೋಚರ ಶಕ್ತಿ ಅಥವಾ ಘಟನೆಯಿಂದ ಅನೇಕ ಪ್ರಾಣಿಗಳು ಬದುಕಿ ಉಳಿದವು. ಅವುಗಳಲ್ಲಿ 7 ಪ್ರಮುಖವಾದುವನ್ನು ಇಲ್ಲಿ ನೀಡಿದ್ದೇವೆ.

Advertisement

1. ಪ್ಲಾಟಿಪಸ್‌
ನೀರಿನಲೆಲ್ಲಿ ವಾಸಿಸುವ ಈ ಜೀವಿಗಳು ಡೈನೋಸಾರ್‌ಗಳ ಜೊತೆಗೆ ಬದುಕಿದ್ದವು ಎನ್ನುವ ಸಂಗತಿ ಇತ್ತೀಚಿಗೆಷ್ಟೆ ತಿಳಿಬಂದಿದ್ದು. ಟೆಕ್ಸಾಸ್‌ನ ಉರಗಜೀವಿತಜ್ಞ ಟಿಮ್‌ ರೋವ್‌ ಭೂಮಿಯಡಿ ಸಿಕ್ಕ ಪ್ಲಾಟಿಪಸ್‌ ಪಳೆಯುಳಿಕೆಯೊಂದನ್ನು ಅಧ್ಯಯನಕ್ಕೊಳಪಡಿಸಿದಾಗ ಈ ವಿಚಾರ ತಿಳಿದು ಬಂದಿತ್ತು.

2. ಜಿರಳೆ
ಈ ಹುಪ್ಪಟೆಗಳು, ಡೈನೋಸಾರ್‌ಗಳು ಭೂಮಿ ಮೇಲೆ ಹುಟ್ಟುವುದ್ಕಕಿಂತಲೂ ಅದೆಷ್ಟೋ ಮಿಲಿಯ ವರ್ಷಗಳ ಹಿಂದೆಯೇ ಭೂಮಿ ಮೇಲೆ ಪಿತ ಪಿತನೆ ಹರಿದಾಡಿದ್ದವು. ಆಗ ಬದುಕಿದ್ದ ಜಿರಳೆಗಳ ಗಾತ್ರ ಈಗಿನದ್ದಕ್ಕಿಂತ ಎರಡು ಮೂರು ಪಟ್ಟು ಹೆಚ್ಚಿತ್ತು.

3. ಕುದುರೆಲಾಳದಾಕಾರದ ಏಡಿ(ಹಾರ್ಸ್‌ಶೂ ಕ್ರಾಬ್‌)
ಇವನ್ನು ಹಿಂದೆ ಜೀವಂತ ಪಳೆಯುಳಿಕೆಗಳೆಂದು ಕರೆಯುತ್ತಿದ್ದರು. ವಿವಿಧ ಕಾಲಘಟ್ಟದಲ್ಲಿ ಭೂಮಿ ಕಂಡ ನಾಲ್ಕು ಅತಿ ಭೀಕರ ನೈಸರ್ಗಿಕ ಅವಘಡಗಳಿಂದ ಪಾರಾಗಿ ಬಂದ ಜೀವಿ ಎಂಬ ಹೆಗ್ಗಳಿಕೆ ಇದರದ್ದು.

4. ಹಸಿರು ಸಮುದ್ರದ ಆಮೆಗಳು
ಆಮೆಗಳ ಹೊಂದಿಕೊಳ್ಳುವಿಕೆಯ ಗುಣದಿಂದ ಎಂಥ ಹವಾಮಾನ ವೈಪರೀತ್ಯದಿಂದ ಬಚಾವಾಗಬಲ್ಲುದು ಎಂಬುದು ಈಗಾಗಲೇ ಸಾಬೀತಾಗಿರುವ ಸಂಗತಿ. ವಾತಾವರಣದಲ್ಲಿ ಬಿಸಿ ಹೆಚ್ಚಾದರೆ ಮರಳಿನಡಿ ತಮ್ಮನ್ನು ಹುದುಗಿಸಿಕೊಳ್ಳುವ ಆಮೆ, ಶೀತ ಹೆಚ್ಚಾದರೆ ನೀರಿನಡಿ ಅತಿ ದೀರ್ಘ‌ ಕಾಲದವರೆಗೆ ನಿದ್ದೆ ಹೋಗುವವು.

Advertisement

5. ಶಾರ್ಕ್‌
ನಿಮಗೆ ಗೊತ್ತಿದೆಯೋ ಇಲ್ಲವೋ, ತಮ್ಮ ಕೋರೆ ಹಲ್ಲುಗಳಿಂದ ಜನರನ್ನು ಭಯಭೀತಗೊಳಿಸುವ ಶಾರ್ಕ್‌ಗಳು ಸುಮಾರು 450 ಮಿಲಿಯ ವರ್ಷಗಳಿಂದ ಭೂಮಿ ಮೇಲೆ ಠಿಕಾಣಿ ಹೂಡಿವೆ. ಸ್ಪೈನೋಸಾರಸ್‌ ಎಂಬ ಪ್ರಭೇಧದ ಉರಗಜೀವಿಗಳಿಗೆ ಶಾರ್ಕ್‌ಗಳೇ ಪ್ರಮುಖ ಆಹಾರವಾಗಿದ್ದರಿಂದ ಅವುಗಳ ಸಂಖ್ಯೆ ಕಡಿಮೆಯಾಗುತ್ತಿತ್ತು. ಅದೇ, ಡೈನೋಸಾರ್‌ಗಳು ಅಳಿದ ನಂತರ ಮತ್ತೆ ಶಾರ್ಕ್‌ಗಳ ಸಂಖ್ಯೆ ವೃದ್ಧಿಯಾದವು. ಆ ಯುಗದ ಶಾರ್ಕ್‌ ಬಾಯಲ್ಲಿ 300 ಹಲ್ಲುಗಳಿದ್ದುವಂತೆ!

6. ಮೊಸಳೆ
 ಆ ಯುಗದಲ್ಲಿ ಜೀವಿಸಿದ್ದ ಮೊಸಳೆ ಈಗಿನ ಮೊಸಳೆ ಗಾತ್ರದ್ದಲ್ಲ. ಡೈನೋಸಾರ್‌ ಗಾತ್ರದ ಮೊಸಳೆಗಳೇ ಜೀವಿಸಿದ್ದವು. ಇವನ್ನು ಸೂಪರ್‌ ಕ್ರಾಕ್‌ ಎಂದು ಕರೆಯುತ್ತಾರೆ. ಈ ರಾಕ್ಷಸ ಗಾತ್ರದ ಮೊಸಳೆಗಳು ನೀರು ಕುಡಿಯಲು ಬರುತ್ತಿದ್ದ ಡೈನೋಸಾರ್‌ಗಳನ್ನೇ ಹರಿದು ತುಂಡು ಮಾಡುತ್ತಿದ್ದುವೆಂದರೆ ಕಲ್ಪಿಸಿಕೊಳ್ಳಿ ಅದದ ಅಗಾಧ ಗಾತ್ರ ಮತ್ತು ಶಕ್ತಿಯನ್ನು!

7. ಜೇನ್ನೊಣ
 ಭೂಮಿ ಮೇಲೆ ಜೇನು ನೊಣಗಳು ಇಲ್ಲವಾದ ದಿನ ಮನುಷ್ಯರೂ ಇಲ್ಲವಾಗುತ್ತಾರೆ ಎಂಬ ಮಾತೊಂದಿದೆ. ಈ ಕಷ್ಟ ಸಹಿಷ್ಣು ಜೀವಿಗಳು ಹಿಂದಿನಿಂದಲೂ ಪ್ರಕೃತಿಯ ಹೊಡೆತವನ್ನು, ಅನೇಕ ಎಡರುತೊಡರುಗಳನ್ನು ದಾಟಿಕೊಂಡು ಇಲ್ಲಿಯವರೆಗೂ ಬಂದಿವೆ. ಇನ್ನೇನು ನಶಿಸಿ ಹೋಗಿಯೇ ಬಿಡುತ್ತದೆಯೆನ್ನುವ ವಿಷಮ ತುದಿ ತಲುಪಿ ಇನ್ನೂ ಉಳಿದುಕೊಂಡುಬಂದಿರುವುದು ಕಡಿಮೆ ಸಾಧನೆಯೇನಲ್ಲ!

ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next