Advertisement
ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಪಂದ್ಯದ ರಾಜ್ಯ ತಂಡದ ಆಯ್ಕೆಗಾಗಿ ನೆಲಮಂಗಲ ಆದಿತ್ಯ ಗ್ಲೋಬಲ್ ಕ್ರೀಡಾಂಗಣದಲ್ಲಿ ನಡೆದ ಕೂಟದಲ್ಲಿ ಈ ದಾಖಲೆ ನಿರ್ಮಾಣವಾಗಿದೆ. ಯಂಗ್ ಪಯೋನಿಯರ್ ತಂಡದ ಲೆಗ್ ಸ್ಪಿನ್ನರ್ ಸರ್ಫ್ರಾಜ್. ಮರ್ಕೆರಾ ಯೂತ್ ತಂಡದ ವಿರುದ್ಧ ಸೋಮವಾರ ನಡೆದ ಪಂದ್ಯದ ವೇಳೆ 7 ಎಸೆತಗಳಲ್ಲಿ ಹ್ಯಾಟ್ರಿಕ್ ಒಳಗೊಂಡಂತೆ ಒಟ್ಟು 6 ವಿಕೆಟ್ ಪಡೆದು ಕ್ರಿಕೆಟ್ ಲೋಕ ಅಚ್ಚರಿಪಡುವಂತೆ ಮಾಡಿದರು.
ಸರ್ಫ್ರಾಜ್ ಒಟ್ಟಾರೆ 3 ಓವರ್‌ಗಳನ್ನು ಎಸೆದಿದ್ದಾರೆ. ಇದರಲ್ಲಿ 3 ಮೇಡನ್, ಶೂನ್ಯ ರನ್ ಬಿಟ್ಟುಕೊಟ್ಟು 6 ವಿಕೆಟ್ ಕಬಳಿಸಿದ್ದಾರೆ. 9ನೇ ಓವರ್ ಎಸೆಯಲು ಆರಂಭಿಸಿದ ಸರ್ಫ್ರಾಜ್‌ಗೆ ಮೊದಲ 2 ಎಸೆತಗಳಲ್ಲಿ 2 ವಿಕೆಟ್ ಸಿಕ್ಕಿತು. 3ನೇ ಎಸೆತ ಡಾಟ್‌ಬಾಲ್ ಆಯಿತು. ನಂತರದ ಮೂರು ಎಸೆತದಲ್ಲಿ ಸತತ ಮೂರು ವಿಕೆಟ್ ಕಬಳಿಸಿದರು. ಒಟ್ಟಾರೆ ಇವರ ಮೊದಲ ಓವರ್‌ನಲ್ಲಿ ಇವರಿಗೆ ಸಿಕ್ಕಿದ ವಿಕೆಟ್ ಸಂಖ್ಯೆ ಶೂನ್ಯಕ್ಕೆ 5. ನಂತರ 11ನೇ ಓವರ್ ಎಸೆಯಲು ಬಂದ ಇವರು ಮೊದಲ ಎಸೆತದಲ್ಲೇ ವಿಕೆಟ್ ಕಬಳಿಸಿ ವಿಕೆಟ್‌ಗಳಿಕೆ ಸಂಖ್ಯೆಯನ್ನು 6ಕ್ಕೇರಿಸಿಕೊಂಡರು. ಇವರ ಮಾರಕ ಬೌಲಿಂಗ್‌ನಿಂದಾಗಿ ಪಯೋನಿಯರ್ ತಂಡ ನೀಡಿದ್ದ 264 ರನ್ ಗುರಿ ಬೆನ್ನಟ್ಟಿದ ಮರ್ಕೆರಾ ಯೂತ್ ತಂಡ 14.3 ಓವರ್‌ಗಳಲ್ಲಿ 57 ರನ್‌ಗೆ ಆಲೌಟಾಗಿ ಭಾರೀ ಮುಖಭಂಗ ಅನುಭವಿಸಿತು.
Related Articles
ಮೂಲತಃ ಸರ್ಫ್ರಾಜ್ ಜಾರ್ಖಂಡ್‌ನವರು. ಸದ್ಯ ಇವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ. ಇವರು ಬೆಂಗಳೂರಿನ ಅಲ್‌ಅಮೀನ್ ಪದವಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು.
Advertisement
2014-15ರ ಸಾಲಿನ ಸೈಯದ್ ಮುಷ್ತಾಕ್ ಅಲಿ ಏಕದಿನ ಕ್ರಿಕೆಟ್‌ನಲ್ಲಿ ಜಾರ್ಖಂಡ್ ತಂಡವನ್ನು ಪ್ರತಿನಿಧಿಸಿದ್ದರು. ಒಟ್ಟಾರೆ 7 ಪಂದ್ಯಗಳಿಂದ 11 ವಿಕೆಟ್ ಕಬಳಿಸಿದ್ದರು. ಆ ವರ್ಷ ದೇಶೀಯ ಕ್ರಿಕೆಟ್‌ನಲ್ಲಿ 2ನೇ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಸದ್ಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ನ ಪ್ರಮುಖ ತಂಡಗಳಲ್ಲಿ ಒಂದಾಗಿರುವ ಹುಬ್ಬಳ್ಳಿ ಟೈಗರ್ ತಂಡದ ಸದಸ್ಯರಾಗಿದ್ದಾರೆ.