ಉತ್ತರಕಾಶಿ : ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಭಾನುವಾರ ಗುಜರಾತ್‌ನಿಂದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ಸು ಕಮರಿಗೆ ಬಿದ್ದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ 27 ಜನರನ್ನು ರಕ್ಷಿಸಲಾಗಿದ್ದು, ಬಸ್ ಅವಶೇಷಗಳಲ್ಲಿ ಸಿಲುಕಿರುವ ಮತ್ತೊಬ್ಬ ವ್ಯಕ್ತಿಯನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ.
ಬಸ್ ಗಂಗೋತ್ರಿಯಿಂದ ಹಿಂತಿರುಗುತ್ತಿದ್ದಾಗ ಗಂಗ್ನಾನಿಯಲ್ಲಿ ಅಪಘಾತ ಸಂಭವಿಸಿದೆ. ಕಮರಿಗೆ ಬಿದ್ದಾಗ ಬಸ್ ನಲ್ಲಿ ಒಟ್ಟು 35 ಮಂದಿ ಇದ್ದರು.
X ನಲ್ಲಿ ಆಲ್ ಇಂಡಿಯಾ ರೇಡಿಯೊ ನ್ಯೂಸ್ ಹಂಚಿಕೊಂಡ ವಿಡಿಯೋ ಉತ್ತರಕಾಶಿಯಲ್ಲಿ ಅಪಘಾತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತೋರಿಸುತ್ತದೆ.
ರಕ್ಷಣೆ ಮಾಡಿದ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಸಮೀಪದ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ಕುರಿತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ತ್ವರಿತ ಆರಂಭಕ್ಕೆ ನಿರ್ದೇಶನಗಳನ್ನು ನೀಡಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅಪಘಾತಕ್ಕೆ ತೀವ್ರ ಸಂತಾಪ ಸೂಚಿಸಿದ್ದು, ಉತ್ತರಾಖಂಡ ಸರ್ಕಾರದೊಂದಿಗೆ ತಮ್ಮ ಸರ್ಕಾರ ಸಂಪರ್ಕದಲ್ಲಿದೆ ಎಂದು ಹೇಳಿದ್ದಾರೆ.