ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚಾಗಿರುವುದರಿಂದ 7, 8 ಮತ್ತು 9ನೇ ತರಗತಿ ಪರೀಕ್ಷೆಗಳನ್ನು ಮಾ. 31ರವರೆಗೆ ಮುಂದೂಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಸೋಮವಾರದಿಂದ ಆರಂಭವಾಗಬೇಕಾಗಿದ್ದ 7ರಿಂದ 9ನೇ ತರಗತಿ ಪರೀಕ್ಷೆ ಮುಂದೂಡಲಾಗಿದ್ದು, ಅಲ್ಲಿಯವರೆಗೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ರಜೆ ಘೋಷಿಸಲಾಗಿದೆ.
ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣ ನೋಡಿಕೊಂಡು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಮುಂದಿನ ಪರೀಕ್ಷಾ ದಿನಾಂಕವನ್ನು ನಿಗದಿ ಮಾಡುವುದಾಗಿ ಶಿಕ್ಷಣ ಇಲಾಖೆ ತಿಳಿಸಿದೆ. ಈ ಮೊದಲು ಮಾ.23ರ ಒಳಗೆ 7ರಿಂದ 9ನೇ ತರಗತಿವರೆಗಿನ ಪರೀಕ್ಷೆಗಳನ್ನು ಮುಗಿಸಿ ಬೇಸಿಗೆ ರಜೆ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಆದರೆ, ಕೊರೊನಾ ಆತಂಕ ಹೆಚ್ಚಾದ ಹಿನ್ನೆಲೆಯಲ್ಲಿ ಹಳೆಯ ಆದೇಶವನ್ನು ರದ್ದು ಮಾಡಿ, ಹೊಸ ಆದೇಶ ಹೊರಡಿಸಿದೆ.
ಪರಿಸ್ಥಿತಿಗೆ ಅನುಗುಣವಾಗಿ ಮುಂದೆ ವೇಳಾಪಟ್ಟಿ ಪ್ರಕಟಿಸುವುದಾಗಿ ತಿಳಿಸಲಾಗಿದ್ದು, ಈ ಆದೇಶ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಿಗೆ ಸೇರಿ ಸರ್ಕಾರ ಅಧೀನದ ಎಲ್ಲಾ ಶಾಲೆಗಳಿಗೂ ಅನ್ವಯ ಆಗಲಿದೆ. ಈಗಾಗಲೇ 1ರಿಂದ 6 ನೇ ತರಗತಿವರೆಗೆ ಪರೀಕ್ಷೆಗಳನ್ನು ಶಿಕ್ಷಣ ಇಲಾಖೆ ರದ್ದು ಮಾಡಿ ಮಕ್ಕಳಿಗೆ ಬೇಸಿಗೆ ರಜೆ ಘೋಷಿಸಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮೊದಲೇ ನಿಗದಿಯಾಗಿರುವಂತೆ ಮಾ.27 ರಿಂದ ನಡೆಯಲಿವೆ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ಮುಖ್ಯಮಂತ್ರಿಯವರು ಇತ್ತೀಚೆಗೆ ಉನ್ನತ ಮಟ್ಟದ ಸಭೆ ಕರೆದು ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ 7ರಿಂದ 9ನೇ ತರಗತಿಗಳ ಪರೀಕ್ಷೆಗಳನ್ನು ಮಾ.31ರವರೆಗೆ ಮುಂದೂಡಲಾಗಿದೆ.
-ಎಸ್.ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ