ಬಂಟ್ವಾಳ: ರಾಯಿಯಲ್ಲಿದ್ದ ಮೊಬೈಲ್ ಟವರ್‌ಗೆ 4ಜಿ ನೆಟ್‌ವರ್ಕ್ ಅಳವಡಿಕೆಗೆ ಸಂಬಂಧಿಸಿ ತಂದಿದ್ದ 7.56 ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಆರೋಪಿಯೋರ್ವ ಪಿಕಪ್ ವಾಹನದಲ್ಲಿ ಕದ್ದು ಸಾಗಿಸಿದ ಘಟನೆ ಮಾ. 15 ರಂದು ನಡೆದಿದೆ.
ಗಿರೀಶ್ ಪ್ರಕರಣ ಆರೋಪಿ. ಘಟನೆಯ ಕುರಿತು ಪೆರಿಗ್ರಿನ್ ಸಂಸ್ಥೆಯ ಸೆಕ್ಯೂರಿಟಿ ಸೂಪರ್‌ವೈಸರ್ ದಿನೇಶ್ ಕೆ. ಪೊಲೀಸರಿಗೆ ದೂರು ನೀಡಿದ್ದು, ರಾಯಿ ಗ್ರಾಮದ ಅನಿಲ್ ಕುವೆಲ್ಲೊ ಅವರ ಜಾಗದಲ್ಲಿದ್ದ ಟವರ್‌ಗೆ 4ಜಿ ನೆಟ್‌ವರ್ಕ್ ಅಳವಡಿಸಲು ಸಾಮಗ್ರಿಗಳನ್ನು ತಂದು ಹಾಕಲಾಗಿತ್ತು. ಸಿಬಂದಿ ನರೇಂದ್ರಪಾಲ್ ಅವರು ಮಾ. 16ರಂದು ಬಂದು ನೋಡಿದಾಗ ಸಾಮಗ್ರಿಗಳು ಅಲ್ಲಿರಲಿಲ್ಲ.
ಈ ಕುರಿತು ಸಿಬಂದಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಈ ಕುರಿತು ಟವರ್‌ನ ಜಾಗದ ಮಾಲಕರಲ್ಲಿ ವಿಚಾರಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಮಾ. 15ರಂದು ಮಧ್ಯಾಹ್ನ ಆರೋಪಿ ಗಿರೀಶ್ ಪಿಕಪ್ ವಾಹನದಲ್ಲಿ ಸಾಮಗ್ರಿಗಳನ್ನು ತಂದು ಇರಿಸಿ ಅದರ ಫೋಟೋ ತೆಗೆದು ಸಂಬಂಧಪಟ್ಟವರಿಗೆ ಕಳುಹಿಸಿದ್ದನು. ಸಂಜೆ ವೇಳೆ ಮತ್ತೆ ಅಲ್ಲಿಗೆ ಬಂದು ತಪ್ಪು ವಿಳಾಸಕ್ಕೆ ಸಾಮಗ್ರಿಗಳನ್ನು ತಂದು ಇರಿಸಿದ್ದೇನೆ ಎಂದು ಅವುಗಳನ್ನು ಸರಿಯಾದ ವಿಳಾಸಕ್ಕೆ ತಲುಪಿಸುವುದಾಗಿ ಹೇಳಿ ತೆಗೆದುಕೊಂಡು ಹೋಗಿದ್ದಾನೆ ಎಂದು ಜಾಗದ ಮಾಲಕರು ವಿವರಿಸಿದ್ದಾರೆ.
7.56 ಲಕ್ಷ ರೂ. ಮೌಲ್ಯ
ಕಳವಾಗಿರುವ ಸಾಮಗ್ರಿಗಳ ಮೌಲ್ಯ 7,56,728 ರೂ. ಎಂದು ಅಂದಾಜಿಸಲಾಗಿದೆ. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.