Advertisement

Mangalore University; ಆರನೇ ಸೆಮಿಸ್ಟರ್‌ ಫಲಿತಾಂಶ ಶೀಘ್ರ ಪ್ರಕಟ

12:40 AM Aug 07, 2024 | Team Udayavani |

ಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಪದವಿ ಕಾಲೇಜುಗಳ ತರಗತಿಗಳು ಆ. 12ರಿಂದ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳು ಸೆ. 9ರಿಂದ ಆರಂಭವಾಗಲಿದೆ.

Advertisement

ಈಗಾಗಲೇ 6ನೇ ಸೆಮಿಸ್ಟರ್‌ನ ಮೌಲ್ಯಮಾಪನ ಶೇ.70ರಷ್ಟು ಪೂರ್ಣವಾಗಿದ್ದು ಶೀಘ್ರ ಫಲಿತಾಂಶ ಪ್ರಕಟಿಸಲಾಗುವುದು ಎಂದು ವಿ.ವಿ.ಯ ಕುಲಪತಿ ಪ್ರೊ| ಪಿ.ಎಲ್‌.ಧರ್ಮ ಹೇಳಿದರು.

ವಿ.ವಿ.ಯ 2024-25ನೇ ಸಾಲಿನ ದ್ವಿತೀಯ ವಿಶೇಷ ಶೈಕ್ಷಣಿಕ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಎಸ್‌ಇಪಿ (ರಾಜ್ಯ ಶಿಕ್ಷಣ ನೀತಿ)ಅಡಿಯಲ್ಲಿ ಸಿದ್ದಪಡಿಸಲಾದ ಪದವಿಯ ಒಟ್ಟು 67 ಪರಿಷ್ಕೃತ ಪಠ್ಯಕ್ರಮಗಳಿಗೆ, ಬಿಎಡ್‌ ಪದವಿಯ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಸಂಬಂಧಿಸಿದ ಕರಡು ಮಾರ್ಗಸೂಚಿಗೆ ಅನುಮೋದನೆ ಪಡೆಯಲಾಯಿತು ಎಂದರು.

ಪಿಂಚಣಿಗಾಗಿ ಸರಕಾರಕ್ಕೆ ಹೊಸ ಪ್ರಸ್ತಾವ
ಹಣಕಾಸು ವಿಭಾಗದ ಅಧಿಕಾರಿ ಪ್ರೊ| ಸಂಗಪ್ಪ ಅವರು 2024-25ನೇ ಸಾಲಿನ ಆಯವ್ಯಯ ಮಂಡಿಸಿದರು. ಈ ಸಾಲಿನಲ್ಲಿ 177.03 ಕೋ.ರೂ. ಆದಾಯ ನಿರೀಕ್ಷಿಸಿ, 197.82 ಕೋ.ರೂ. ಖರ್ಚು ಅಂದಾಜಿಸಲಾಗಿದೆ. ಕಳೆದ ಸಾಲಿನಲ್ಲಿ 1.75 ಕೋ.ರೂ. ಕೊರತೆಯಾಗಿದ್ದು, ಈ ಸಾಲಿನಲ್ಲಿ 19.04 ಕೋ.ರೂ. ಕೊರತೆ ಹೆಚ್ಚಳವಾಗಿದೆ. ಪ್ರಸ್ತುತ 426 ಮಂದಿ ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರು ಇದ್ದು, ಇವರಿಗೆ ವಾರ್ಷಿಕ 25.61 ಕೋ.ರೂ. ವೆಚ್ಚವಾಗುತ್ತಿದೆ. ಈ ಸಾಲಿನಲ್ಲಿ 22 ಮಂದಿ ನಿವೃತ್ತರಾಗುತ್ತಿದ್ದು, ಅವರಿಗೆ 10.80 ಕೋ.ರೂ.ಗಳ ಅಗತ್ಯವಿದೆ. ಇದಕ್ಕಾಗಿ ಹೊಸದಾಗಿ 36.41 ಕೋ.ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. 10 ಕೋ.ರೂ.ಗಳ ಮೊತ್ತವನ್ನು ಸರಕಾರ ಮಂಜೂರು ಮಾಡಿದೆ ಎಂದರು.

ಸ್ನಾತಕೋತ್ತರ ಭೂಗೋಳಶಾಸ್ತ್ರ ಪರಿಷ್ಕೃತ ಪಠ್ಯ
ಕ್ರಮದಲ್ಲಿ ಪಶ್ಚಿಮಘಟ್ಟದ ವಿವಿಧ ಸಂಗತಿ, ವಿಪತ್ತು ಪರಿಹಾರ ಸ್ವರೂಪದ ಬಗ್ಗೆ ಉಲ್ಲೇಖೀಸಲಾಗಿದೆ. ಎಂಜಿನಿಯರಿಂಗ್‌/ಟೆಕ್ನಾಲಜಿಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಸ್ನಾತಕೋತ್ತರ ವಸ್ತು ವಿಜ್ಞಾನ ಆಯ್ಕೆ ಮಾಡಲು ಅವಕಾಶವನ್ನು ನೀಡಲಾಯಿತು. ಎನ್‌ಇಪಿಯ ಕೆಲವು ಸೆಮಿಸ್ಟರ್‌ಗಳ ಪಠ್ಯಕ್ರಮಕ್ಕೆ ಅನುಮೋದನೆ ನೀಡಲಾಯಿತು.

Advertisement

ಅಂಕಪಟ್ಟಿ ಡಿಜಿ ಲಾಕರ್‌ನಲ್ಲಿ ಮಾತ್ರ !
ಎನ್‌ಇಪಿ ಅಡಿಯಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಡಿಜಿ ಲಾಕರ್‌ ಮೂಲಕ ಗ್ರೇಡ್‌ ಆಧಾರಿತ ಅಂಕಪಟ್ಟಿ ನೀಡಲಾಗುತ್ತಿದೆ. ಇದು ಕೇಂದ್ರ ಸರಕಾರದ ನಿರ್ದೇಶನವಾಗಿದ್ದು, ಇದನ್ನು ಮೀರಿ ಭೌತಿಕ ಅಂಕ ಪಟ್ಟಿ ನೀಡಲು ಅವಕಾಶ ಇಲ್ಲ. ಈಗಾಗಲೇ ಒಬ್ಬರಿಗೆ ಅಂಕಪಟ್ಟಿ ನೀಡಿದ ವಿಚಾರದ ಬಗ್ಗೆ ಆಂತರಿಕ ಸಮಿತಿಯಿಂದ ತನಿಖೆ ನಡೆಸಲಾಗುವುದು ಎಂದು ಕುಲಪತಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಕುಲಸಚಿವ (ಆಡಳಿತ) ರಾಜು ಮೊಗವೀರ, ಕುಲಸಚಿವ (ಪರೀಕ್ಷಾಂಗ) ಡಾ| ದೇವೇಂದ್ರಪ್ಪ ಉಪಸ್ಥಿತರಿದ್ದರು.

ಮೊದಲ ಸೆಮಿಸ್ಟರ್‌ಗೆ “ಅರ್ಥಶಾಸ್ತ್ರ’ವಿಲ್ಲ!
ಬಿಕಾಂ-ಬಿಬಿಎ ವಾಣಿಜ್ಯಶಾಸ್ತ್ರದ ಪ್ರಥಮ-ದ್ವಿತೀಯ ವರ್ಷಗಳಲ್ಲಿ ಒಟ್ಟು 4 ಸೆಮಿಸ್ಟರ್‌ಗಳಲ್ಲಿ 4 ಅನ್ವಯಿಕ ಅರ್ಥಶಾಸ್ತ್ರ ವಿಷಯವನ್ನು ಎಲ್ಲ ವಿ.ವಿ.ಗಳಲ್ಲಿ ಬೋಧಿಸಲಾಗುತ್ತಿತ್ತು. ಆದರೆ ಈಗ ಹೊಸದಾಗಿ ಜಾರಿಯಾಗುತ್ತಿರುವ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ)ಯಲ್ಲಿ ಅರ್ಥಶಾಸ್ತ್ರವನ್ನು ಪೂರ್ಣವಾಗಿ ವಾಣಿಜ್ಯ ಶಾಸ್ತ್ರದಿಂದ ತೆಗೆಯುವಂತಾಗಿದೆ ಎಂಬ ವಿಚಾರವು ವಿ.ವಿ. ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು.

ವಿಷಯ ಪ್ರಸ್ತಾವಿಸಿದ ಪ್ರೊ| ಧರ್ಮ ಅವರು ಹಿಂದಿನ ವ್ಯವಸ್ಥೆಯಲ್ಲಿ ಇದ್ದಂತೆ ಬಿಕಾಂ ಹಾಗೂಬಿಬಿಎ ಕೋರ್ಸ್‌ಗಳಲ್ಲಿ ಅರ್ಥಶಾಸ್ತ್ರ ವಿಷಯಮುಂದುವರಿಸುವಂತೆ ವಿ.ವಿ. ಅರ್ಥಶಾಸ್ತ್ರ ಅಧ್ಯಾಪಕರ ಸಂಘದಿಂದ ಮನವಿ ಬಂದಿದೆ. ಆದರೆ, ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ಕುಲಪತಿಗಳಿಗೆ ಇಲ್ಲ ಎಂದರು.

ಪ್ರೊ| ಪಿ.ಎಲ್‌.ಧರ್ಮ ಮಾತನಾಡಿ, “ಈ ವಿಚಾರದಲ್ಲಿ ಯಾರಿಗೂ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಆದರೆ ಪದವಿ ತರಗತಿ ಶೀಘ್ರ ಆರಂಭವಾಗುವ ಕಾರಣ ಮೊದಲ ಸೆಮಿಸ್ಟರ್‌ ಅನ್ನು ಯಥಾಸ್ಥಿತಿ ನಡೆಸಬೇಕಾಗಿದೆ. ಹಾಗೂ ವಾರದೊಳಗೆ ಅರ್ಥಶಾಸ್ತ್ರ ಹಾಗೂ ವಾಣಿಜ್ಯಶಾಸ್ತ್ರ ಅಧ್ಯಾಪಕರ ಸಂಘದ ಪ್ರಮುಖರ ಜತೆಗೆ ಮಹತ್ವದ ಜಂಟಿ ಸಭೆ ನಡೆಸಿ ಒಮ್ಮತದ ತೀರ್ಮಾನ ಕೈಗೊಂಡು ಮುಂದಿನ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.

ವಿ.ವಿ.ಯಲ್ಲಿ “ಸ್ಕೂಲ್‌ ಆಫ್‌ ಬಯೋ ಸೈನ್ಸ್‌’
ದೇಶದ ಕೆಲವು ವಿ.ವಿ.ಗಳ ಸ್ನಾತಕೋತ್ತರ ಪದವಿಯಲ್ಲಿ ಜಾರಿಯಲ್ಲಿರುವಂತೆ ಮಂಗಳೂರು ವಿ.ವಿ.ಯಲ್ಲಿಯೂ “ಸ್ಕೂಲ್‌ ಸಿಸ್ಟಂ’ ಎಂಬ ಪರಿಕಲ್ಪನೆಯನ್ನು ಜಾರಿಗೆ ಉದ್ದೇಶಿಸಲಾಗಿದೆ. ಪ್ರಾರಂಭಿಕವಾಗಿ “ಬಯೋ ಸೈನ್ಸ್‌’ ವಿಭಾಗದಲ್ಲಿ ಇದನ್ನು ಜಾರಿಗೆ ತರಲಾಗುತ್ತದೆ. ಈ ವಿಭಾಗಕ್ಕೆ ಪ್ರತ್ಯಕ್ಷ-ಪರೋಕ್ಷವಾಗಿ ಸಂಬಂಧವಿರುವ ಎಲ್ಲ ಅನ್ವಯಿಕ ವಿಭಾಗಗಳನ್ನು ಒಂದೇ ಸೂರಿನಡಿ ತಂದು ಅಲ್ಲಿನ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಹಿರಿಯ ಉಪನ್ಯಾಸಕರಿಂದ ಪಾಠ-ಪ್ರವಚನ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಮೂಲಭೂತ ವಿಷಯಗಳನ್ನು ಹೊಂದಿರುವ ವಿಭಾಗಗಳೆಲ್ಲವೂ ಒಂದೇ ಕಡೆ ಸೇರಿಸಿ ಹೆಚ್ಚುವರಿ ಮಾಹಿತಿ ವಿದ್ಯಾರ್ಥಿಗಳು ಪಡೆಯಲು ಸಾಧ್ಯ. ಮುಂಬರುವ ದಿನದಲ್ಲಿ ಕೆಮಿಕಲ್‌ ಸೈಯನ್ಸ್‌ ವಿಭಾಗದಲ್ಲಿಯೂ ಇಂತಹುದೇ ಪರಿಕಲ್ಪನೆಗೆ ಉದ್ದೇಶಿಸಲಾಗಿದೆ. ಆದರೆ ಮೂಲ ಪಠ್ಯ, ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪ್ರೊ| ಧರ್ಮ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next