ಬೆಂಗಳೂರು: ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ರಾಜ್ಯದ ವಿದ್ಯಾರ್ಥಿಗಳನ್ನು ಕರೆತರುವ ಪ್ರಕ್ರಿಯೆ ಮುಂದುವರಿದಿದೆ. ಬುಧವಾರ 31 ವಿದ್ಯಾರ್ಥಿಗಳು ಆಗಮಿಸಿದ್ದು, ಇಲ್ಲಿಯವರೆಗೆ 86 ಮಂದಿ ತಾಯ್ನಾಡಿಗೆ ಮರಳಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರ ಹೇಳಿದೆ.
ರಾಜ್ಯದಿಂದ ಉಕ್ರೇನಿಗೆ ವೈದ್ಯಕೀಯ ಕೋರ್ಸ್‌ಗಾಗಿ 694 ವಿದ್ಯಾರ್ಥಿಗಳು ತೆರಳಿರುವ ಮಾಹಿತಿ ಇದ್ದು, ಎಲ್ಲರ ಕುಟುಂಬಗಳನ್ನು ಸಂಪರ್ಕಿಸಲು ಆಯಾ ಜಿಲ್ಲಾಡಳಿತ
ಗಳಿಗೆ ಹೊಣೆ ನೀಡಲಾಗಿದೆ. ದೂರವಾಣಿ ಮೂಲಕ 425 ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸಲಾಗಿದೆ. ಈ ನಡುವೆ ಅಧಿಕಾರಿಗಳು ಖುದ್ದಾಗಿ 314 ಕುಟುಂಬಗಳನ್ನು ಭೇಟಿ ಮಾಡಿದ್ದಾರೆ. ವಿಪತ್ತು ನಿರ್ವಹಣ ಪ್ರಾಧಿಕಾರದ ಮಾಹಿತಿಯಂತೆ ಬುಧವಾರ 6 ತಂಡಗಳಲ್ಲಿ 31 ವಿದ್ಯಾರ್ಥಿಗಳು ದಿಲ್ಲಿ ಮೂಲಕ ಬೆಂಗಳೂರಿಗೆ ಬಂದಿಳಿದಿದ್ದಾರೆ.
ಬೆಂಗಳೂರಿನವರೇ ಹೆಚ್ಚು
ಉಕ್ರೇನ್‌ನಲ್ಲಿ ಸಿಲುಕಿರುವವರಲ್ಲಿ ಬೆಂಗಳೂರಿನವರೇ ಹೆಚ್ಚಾಗಿದ್ದಾರೆ. ಅಂದರೆ, ಬೆಂಗಳೂರಿನ 427 ವಿದ್ಯಾರ್ಥಿಗಳು ಉಕ್ರೇನ್‌ನ ವಿವಿಧ ಕಾಲೇಜುಗಳಲ್ಲಿ ಕಲಿಯುತ್ತಿದ್ದಾರೆ. ಇವರಲ್ಲಿ ದೂರವಾಣಿ ಮೂಲಕ 191 ಮತ್ತು ಅಧಿಕಾರಿಗಳು 106 ಕುಟುಂಬಗಳ ಸಂಪರ್ಕ ಸಾಧಿಸಿದ್ದಾರೆ. ಉಳಿದವರ ಪತ್ತೆಗಾಗಿ ಪ್ರಯತ್ನಿಸಲಾಗುತ್ತಿದೆ.
ಉಳಿದಂತೆ ಮೈಸೂರಿನ 28, ಬಾಗಲಕೋಟೆ ಮತ್ತು ಬೆಂಗಳೂರು ಗ್ರಾಮಾಂತರದ ತಲಾ 20, ತುಮಕೂರಿನ 19, ವಿಜಯಪುರದ 18, ದಕ್ಷಿಣ ಕನ್ನಡದ 17, ರಾಯಚೂರಿನ 13, ಬೆಳಗಾವಿ, ಹಾಸನದ ತಲಾ 12, ಕೊಡಗಿನ 11, ಚಿಕ್ಕಬಳ್ಳಾಪುರ, ದಾವಣಗೆರೆ, ಹಾವೇರಿಯ ತಲಾ 10, ಕೋಲಾರದ 9 ಸಹಿತ ವಿವಿಧ ಜಿಲ್ಲೆಗಳ 694 ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬೆಂಗಳೂರು, ಮೈಸೂರು ಸಹಿತ ಮೂರ್ನಾಲ್ಕು ಜಿಲ್ಲೆಗಳ ಕೆಲವು ವಿದ್ಯಾರ್ಥಿಗಳ ಕುಟುಂಬಗಳಷ್ಟೇ ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ. ಉಳಿದಂತೆ ಬಹುತೇಕ ಎಲ್ಲ ಜಿಲ್ಲೆಗಳ ವಿದ್ಯಾರ್ಥಿಗಳ ಕುಟುಂಬಸ್ಥರ ಸಂಪರ್ಕ ಸಾಧಿಸಲಾಗಿದೆ ಎಂದು ವಿಪತ್ತು ನಿರ್ವಹಣ ಪ್ರಾಧಿಕಾರ ತಿಳಿಸಿದೆ.