ಚಿಕ್ಕಬಳ್ಳಾಪುರ: ಕೋವಿಡ್ 19 ಸಂಕಷ್ಟದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಪೋಷಕರಲ್ಲಿ ತೀವ್ರ ಚರ್ಚೆ ಹಾಗೂ ಆತಂಕಕ್ಕೆ ಕಾರಣವಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲಾದ್ಯಂತ ಗುರುವಾರ 64 ಕೇಂದ್ರಗಳಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲದೇ ನಿರಾತಂಕವಾಗಿ ನಡೆದಿದ್ದು, ಮೊದಲ ದಿನ ನಡೆದ ಆಂಗ್ಲ ವಿಷಯದ ಪರೀಕ್ಷೆಗೆ ನೋಂದಣಿಯಾಗಿದ್ದ 16,345 ಪೈಕಿ 15,657 ವಿದ್ಯಾರ್ಥಿಗಳು ಪರೀಕ್ಷೆ ಬರೆದು 688 ವಿದ್ಯಾರ್ಥಿಗಳು ಗೈರಾಗಿದ್ದರು. ಪರೀಕ್ಷೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ, ದ್ವಿತೀಯ ಪಿಯುಸಿ ಆಂಗ್ಲ ವಿಷಯದ ಪರೀಕ್ಷೆಯಲ್ಲಿ ಆದ ಹಲವು ಗೊಂದಲಗಳಿಂದ ಎಚ್ಚೆತ್ತಿಕೊಂಡು ಸುಗಮ, ಶಾಂತಿಯುತವಾಗಿ ನಡೆಸಿತು.
ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್: ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಇಲಾಖೆ ವ್ಯವಸ್ಥೆ ಮಾಡಿದ್ದ ಸಾರಿಗೆ ಬಸ್‌ಗಳಲ್ಲಿ ಬೆಳಗ್ಗೆ 8:30ಕ್ಕೆ ಪರೀಕ್ಷಾ ಕೇಂದ್ರಗಳನ್ನು ತಲುಪಿದ್ದ ವಿದ್ಯಾರ್ಥಿಗಳಿಗೆ ಪ್ರತಿ ಕೇಂದ್ರಕ್ಕೆ ನಿಯೋಜನೆಗೊಂಡಿದ್ದ ಆಶಾ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಆರೋಗ್ಯ ತಪಾಸಣೆ ಒಳಪಟ್ಟು ಬಳಿಕ ಪರೀಕ್ಷಾ ಕೇಂದ್ರಗಳಿಗೆ ತೆರಳಿದರು. ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:30ರ ವರೆಗೂ ಪರೀಕ್ಷೆ ಸುಗಮವಾಗಿ ನಡೆಯಿತು. ಪರೀಕ್ಷಾ ಕೊಠಡಿಗಳಲ್ಲಿ ಪ್ರತಿ ಕೊಠಡಿಗೆ 18 ರಿಂದ 20 ಮಕ್ಕಳನ್ನು ಕೂರಿಸಲಾಗಿತ್ತು. ಪ್ರತಿ ಕೇಂದ್ರದಲ್ಲಿ ಸ್ಕೌಟ್ಸ್ ಅಂಡ್ ಗೈಡ್ ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾರ್ಗ ದರ್ಶನ ನೀಡಿ ಸುಗಮ ಪರೀಕ್ಷೆಗೆ ಸಹಕರಿಸಿದರು.
ಡೀಸಿ, ಸಿಇಒ, ಎಸ್ಪಿ ಭೇಟಿ: ಜಿಲ್ಲೆಯ ಹಲವು ಪರೀಕ್ಷಾ ಕೇಂದ್ರಗಳಿಗೆ ಡೀಸಿ ಆರ್.ಲತಾ, ಜಿಪಂ ಸಿಇಒ ಫೌಝೀಯಾ ತರುನ್ನುಮ್, ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ತೆರಳಿ ಮೂಲ ಸೌಕರ್ಯ ಪರಿಶೀಲಿಸಿದರು. ಕಳೆದೊಂದು ತಿಂಗಳಿಂದ ಪರೀಕ್ಷೆಗಾಗಿ ಜಿಪಂ ಸಿಇಒ ಬಿ.ಫೌಝೀಯಾ ತರುನ್ನುಮ್, ಅಧಿಕಾರಿ ಗಳೊಂದಿಗೆ ಸರಣಿ ಸಭೆ ನಡೆಸಿ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಸೋಂಕು ಹರಡದಂತೆ ಹಲವು ಬಿಗಿ ಕ್ರಮಗಳನ್ನು ಕೈಗೊಂಡಿದ್ದಾರೆ.ಕಂಟೈನ್ಮೆಂಟ್ ಪ್ರದೇಶಗಳಿಂದ 10 ವಿದ್ಯಾರ್ಥಿಗಳು ಆಗಮಿಸಿ ಪರೀಕ್ಷೆ ಬರೆದರು.
ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೊದಲ ದಿನ ನಡೆದ ಆಂಗ್ಲ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ನೋಂದಾ ಯಿತರಲ್ಲಿ 688 ವಿದ್ಯಾರ್ಥಿಗಳು ಗೈರಾಗಿದ್ದರು. ಜ್ವರ, ಕೆಮ್ಮು ಮತ್ತಿತರ ಕಾರಣಗಳಿಗೆ 10 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಸಲಾಯಿತು.
-ಎಸ್.ಜಿ.ನಾಗೇಶ್, ಡಿಡಿಪಿಐ