ನವದೆಹಲಿ:ಶಂಕಿತ ಕೋವಿಡ್ 19 ವೈರಸ್ ನಿಂದ 25 ವರ್ಷದ ರೋಗಿಯೊಬ್ಬ ಬುಧವಾರ ತಡರಾತ್ರಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ 68 ವೈದ್ಯರು, ನರ್ಸ್ ಹಾಗೂ ಸರ್ಕಾರಿ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಮನೆಯಲ್ಲಿಯೇ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿದೆ ಎಂದು ವರದಿ ತಿಳಿಸಿದೆ.
25ವರ್ಷದ ಗರ್ಭಿಣಿ ಮಹಿಳೆಯೊಬ್ಬಳು ದಿಲ್ಲಿಯ ಭಗವಾನ್ ಮಹಾವೀರ್ ಆಸ್ಪತ್ರೆಗೆ ಸೋಮವಾರ ದಾಖಲಾಗಿದ್ದರು. ಆದರೆ ಆಕೆ ಇತ್ತೀಚೆಗೆ ವಿದೇಶಕ್ಕೆ ಪ್ರಯಾಣಿಸಿ ವಾಪಸ್ ಆದ ವಿಷಯವನ್ನು ಬಹಿರಂಗಪಡಿಸಿರಲಿಲ್ಲವಾಗಿತ್ತು ಎಂದು ದೂರಲಾಗಿದೆ.ದಿಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ 200 ರೋಗಿಗಳನ್ನು ದಾಖಲಿಸಲು ಅವಕಾಶ ಇತ್ತು ಎಂದು ತಿಳಿಸಿದ್ದು, ನಂತರ ಮಹಿಳೆ ಸುಳ್ಳು ಮಾಹಿತಿ ನೀಡಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ವರದಿ ವಿವರಿಸಿದೆ.
ರೋಗಿ ನಮ್ಮಲ್ಲಿ ವಿದೇಶ ಪ್ರಯಾಣ ಮಾಡಿ ಬಂದಿರುವ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಿರಲಿಲ್ಲವಾಗಿತ್ತು. ನಿಜ ವಿಷಯ ಏನೆಂದರೆ ಆಕೆಗೆ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಆದರೆ ಆಸ್ಪತ್ರೆಗೆ ದಾಖಲಾಗುವಾಗ ಸಲ್ಲಿಸಿದ್ದ ಅರ್ಜಿಯಲ್ಲಿ ಸುಳ್ಳು ಮಾಹಿತಿ ನೀಡಿರುವುದಾಗಿ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಬುಧವಾರ ಆಕೆಯ ಆರೋಗ್ಯ ತುಂಬಾ ಗಂಭೀರವಾಗಿದ್ದು, ನಂತರ ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ನಂತರ ವೈದ್ಯರ ಬಳಿ ಆಕೆ ತಾನು ವಿದೇಶ ಭೇಟಿ ಮಾಡಿ ಬಂದಿದ್ದು, ಕೋವಿಡ್ ಸೋಂಕು ಪೀಡಿತ ಪ್ರಯಾಣಿಕರಿಂದ ತನಗೆ ಸೋಂಕು ತಗುಲಿದ್ದು, ತನಗೂ ಹಾಗೂ ಕುಟುಂಬದ ನಾಲ್ವರು ಸದಸ್ಯರಿಗೂ ಜಿಲ್ಲಾಧಿಕಾರಿ ಏ.10ರಿಂದ 24ರವರೆಗೆ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚನೆ ನೀಡಿರುವುದಾಗಿ ವಿವರಿಸಿದ್ದಳು ವರದಿ ಹೇಳಿದೆ.
ಇದೀಗ ಈ ಮಹಿಳೆಯ ಸಂಪರ್ಕಕ್ಕೆ ಬಂದ ಎಲ್ಲಾ ವೈದ್ಯರು, ಆಸ್ಪತ್ರೆಯ ನರ್ಸ್, ಸಿಬ್ಬಂದಿಗಳಿಗೆ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.