ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಡೆಂಘೀ ನಿಯಂತ್ರಣಕ್ಕಾಗಿ ಎರಡು ವರ್ಷಗಳ ಹಿಂದಿನ ಕಾರ್ಯತಂತ್ರವನ್ನೇ ಅನುಸರಿಸಲು ಮುಂದಾಗಿದೆ. 2017ರಲ್ಲಿ ರಾಜ್ಯದಲ್ಲಿ ಡೆಂಘೀ ಹೆಚ್ಚಳವಾದಾಗ ಮನೆ ಒಳಗೆ ರಾಸಾಯನಿಕ ಸಿಂಪಡಣೆ, ಜಾಗೃತಿಗೆ ಹೆಚ್ಚುವರಿ ಸಿಬ್ಬಂದಿ ನೇಮಕ, ಪ್ರಯೋಗಾಲಯ ಶುಲ್ಕ ಹತೋಟಿ, ಪ್ಲೇಟ್‌ಲೆಟ್ ಶುಲ್ಕ ಮರುಪಾವತಿ, ಅಪಾರ್ಟ್‌ಮೆಂಟ್‌ಗಳಿಗೆ ಸ್ವಚ್ಛತಾ ನಿಯಮ, ನಾಗರಿಕರಿಗೊಂದು ಸವಾಲು…ಇಂತಹ ಕಾರ್ಯಕ್ರಮಗಳಿಂದ ಸಾಂಕ್ರಾಮಿಕ ರೋಗ ಡೆಂಘೀಯನ್ನು ಹತೋಟಿಗೆ ತಂದಿತ್ತು. ರಾಜ್ಯದಲ್ಲಿ 2018ರಲ್ಲಿ ಸಾಕಷ್ಟು ನಿಯಂತ್ರಣಕ್ಕೆ ಬಂದಿತ್ತು.
2017ರಲ್ಲಿ ರಾಜ್ಯದಲ್ಲಿ 10,252 ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 7,013 ಡೆಂಘೀ ಸೋಂಕು ಪ್ರಕರಣಗಳು ದಾಖಲಾಗಿದ್ದವು. ರಾಜ್ಯ ಸರ್ಕಾರ ಈ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಿ, 2018ರಲ್ಲಿ ರಾಜ್ಯದಲ್ಲಿ 3,161 ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 1,266 ಡೆಂಘೀ ಸೋಂಕು ಪ್ರಕರಣಗಳನ್ನು ನಿಯಂತ್ರಿಸಲಾಗಿತ್ತು. ಆದರೆ, ಸದ್ಯ ನಗರದಲ್ಲಿ 6,515 ರಾಜ್ಯದ ಇತರೆಡೆ 4,167 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಇದಕ್ಕೆ ಜಾಗೃತಿ ಕಾರ್ಯಕ್ರಮಗಳ ಕೊರತೆ ಹಾಗೂ ಕಳೆದ ವರ್ಷದ ಕಾರ್ಯಕ್ರಮಗಳನ್ನು ನಿಲ್ಲಿಸಿರುವುದು ಎಂದು ಮನವರಿಕೆ ಮಾಡಿಕೊಂಡಿರುವ ಆರೋಗ್ಯ ಇಲಾಖೆ, 2017ರಲ್ಲಿ ಬಿಬಿಎಂಪಿ ಕೈಗೊಂಡಿದ್ದ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸೂಚಿಸಿದೆ.
ಡೆಂಘೀ ಪರೀಕ್ಷೆಗೆ ಹೆಚ್ಚು ಶುಲ್ಕ ವಸೂಲಿ ಮಾಡುವಂತಿಲ್ಲ: ಕಳೆದ ತಿಂಗಳಲ್ಲಿ ರೋಗಿಯು ಖಾಸಗಿ ರಕ್ತನಿಧಿಗಳಲ್ಲಿ ಪ್ಲೇಟ್‌ಲೆಟ್ ಪಡೆದಿದ್ದರೆ, ಹೆಚ್ಚುವರಿ ಶುಲ್ಕ ಮರುಪಾವತಿಗೆ ಸೂಚನೆ ನೀಡಿತ್ತು. ಈಗ ಖಾಸಗಿ ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳು ಡೆಂಘೀ ಪರೀಕ್ಷೆ ದರ ನಿಯಮ ಪಾಲನೆಗೆ ಸೂಚನೆ ನೀಡಿದೆ. ಖಾಸಗಿ ಆಸ್ಪತ್ರೆಗಳು ಡೆಂಘೀ ಪರೀಕ್ಷೆಗಳಿಗೆ 500ರೂ. ಮಾತ್ರ ಪಡೆಯಬೇಕು. ಹೆಚ್ಚು ಶುಲ್ಕ ವಸೂಲಿ ಮಾಡಿದರೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ದೂರು ನೀಡಿ, ಹಣ ವಾಪಸ್ ಪಡೆಯುವಂತೆ ತಿಳಿಸಿದೆ. ದೂರು ಬಂದ ಪ್ರಯೋಗಾಲಯ ಹಾಗೂ ಆಸ್ಪತ್ರೆಗೆ ನೋಟಿಸ್ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಾಗೃತಿ ಮೂಡಿಸಲು 200 ಸಿಬ್ಬಂದಿ ತಾತ್ಕಾಲಿಕ ನೇಮಕ: ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀ ಪ್ರಕರಣ ಹೆಚ್ಚಿರುವ ವಾರ್ಡ್‌ಗಳಲ್ಲಿ ಜಾಗೃತಿ ಮೂಡಿಸಲು ಹಾಗೂ ಫಾಗಿಂಗ್ (ಧೂಮೀಕರಣ)ನಂತಹ ಕಾರ್ಯಗಳ ಮೇಲ್ವಿಚಾರಣೆಗೆ ಸಮಾಜ ಕಾರ್ಯ (ಎಂಎಸ್‌ಡಬ್ಲೂé) ಅಥವಾ ಆರೋಗ್ಯ ನಿರೀಕ್ಷಕ ಕೋರ್ಸ್ ಮಾಡಿದ 200 ಮಂದಿ ಪುರುಷ ಸಿಬ್ಬಂದಿ 3 ತಿಂಗಳ ಮಟ್ಟಿಗೆ ನೇಮಕ ಮಾಡಿಕೊಳ್ಳಲಾಗಿದೆ. ಅವರುಗಳು ಮನೆಗೆ ತೆರಳಿ ಮುನ್ನೆಚ್ಚರಿಕೆ ಕ್ರಮ, ರೋಗ ಲಕ್ಷಣ ತಿಳಿಸುತ್ತಾರೆ. ಬಡಾವಣೆಯಲ್ಲಿ ನೀರು ಸಂಗ್ರಹ ಸ್ಥಳ ಪತ್ತೆ ಮಾಡಿ, ರಾಸಾಯನಿಕ ಸಿಂಪರಣೆಗೆ ಕ್ರಮವಹಿಸುತ್ತಿದ್ದಾರೆ. ಸದ್ಯ ಬಿಬಿಎಂಪಿಯಲ್ಲಿ 50 ವಾರ್ಡ್‌ಗಳಲ್ಲಿ ಹೆಚ್ಚು ಪ್ರಕರಣಗಳಿದ್ದು, ಒಂದು ವಾರ್ಡ್‌ಗೆ 4 ಮಂದಿ ಜಾಗೃತಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ತಿಳಿಸಿದ್ದರು.
ಮನೆ ಒಳಗೆ ರಾಸಾಯನಿಕ ಸಿಂಪರಣೆ: ಕೆಲ ವಾರ್ಡ್‌ಗಳಲ್ಲಿ ಡೆಂಘೀ ಸೊಳ್ಳೆಗಳು ಮನೆಯ ಒಳಗೆ ಹೆಚ್ಚಿದ್ದು, ಅವುಗಳ ನಿಯಂತ್ರಣಕ್ಕೆ ಮನೆ ಹೊರ ಭಾಗದಲ್ಲಿ ಪಾಗಿಂಗ್ ಮಾಡುವ ಜತೆಗೆ ಮನೆ ಒಳಭಾಗದಲ್ಲಿ ಸಸ್ಯ ಮೂಲದ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ. ಈ ಕುರಿತು ಮೊದಲು ಮನೆಯ ಸದಸ್ಯರಿಗೆ ಜಾಗೃತಿ ಮೂಡಿಸಿ, ಒಪ್ಪಿಗೆ ಪಡೆದು ಆನಂತರ ಸಿಂಪರಣೆ ಕಾರ್ಯ ಮಾಡಲಾಗುತ್ತಿದೆ. ಮನೆ ಹೊರಭಾಗದಲ್ಲಿ ಹಾಗೂ ಬಡಾವಣೆಯಲ್ಲಿ ಟೆಮೆಥೋಸ್ ಬದಲು ಮೆಲಾಥಿನ್ ಸಿಂಪಡಿಸಲು ತೀರ್ಮಾನಿಸಲಾಗಿದೆ.
“ಸಾರ್ವಜನಿಕರಿಗೊಂದು ಸವಾಲು’: ಆರೋಗ್ಯ ಇಲಾಖೆ ರಾಜ್ಯಾದ್ಯಂತ “ಸಾರ್ವಜನಿಕರಿಗೊಂದು ಸವಾಲು’ ಕಾರ್ಯಕ್ರಮ ಆರಂಭಿಸುತ್ತಿದೆ. ಈ ಕಾರ್ಯಕ್ರಮದಡಿ ಸೊಳ್ಳೆಗಳ ನಿಯಂತ್ರಣ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿರುವ ಕುಟುಂಬಗಳನ್ನು ಗುರುತಿಸಿ ಪ್ರಶಂಸನಾ ಪತ್ರ ನೀಡಲಿದೆ. ಮುಂದಿನ ತಿಂಗಳಿಂದ ಅರೋಗ್ಯ ಸಹಾಯಕರು ಮನೆಗಳಿಗೆ ಭೇಟಿ ನೀಡಿ ಸ್ವಚ್ಛತೆ, ಡೆಂಘೀ ಜಾಗೃತಿ, ಲಕ್ಷಣ ಕುರಿತು ಪ್ರಶ್ನೆಗಳನ್ನು ಕೇಳಿ ಉತ್ತಮವಾಗಿ ಉತ್ತರಿಸುವ ಕುಟುಂಬಗಳನ್ನು ಗುರುತಿಸಿ ಅವರಿಗೆ ಪ್ರಶಂಸಾ ಪತ್ರ ನೀಡಲಿದ್ದಾರೆ. ಜತೆಗೆ ಶಾಲಾ-ಕಾಲೇಜುಗಳು, ಆಸ್ಪತ್ರೆಗಳು, ಬಸ್ ನಿಲ್ದಾಣ, ಕಾರ್ಖಾನೆಗಳು, ಚಿತ್ರಮಂದಿರಗಳಂತಹ ಸಾರ್ವಜನಿಕ ಸ್ಥಳಗಳಲ್ಲಿಯೂ ನಡೆಯಲಿದೆ.
* ಜಯಪ್ರಕಾಶ್ ಬಿರಾದಾರ್