ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಎರಡು ದಿನಗಳ ಕಾಲ ನಡೆಯುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಶನಿವಾರ ಅಧಿಕೃತ ಚಾಲನೆ ದೊರೆತಿದೆ.
ಮಧ್ಯಾಹ್ನ 2.40ರ ವೇಳೆಗೆ ಧ್ವಜಾರೋಹಣ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಾರ್ಯಕಾರಿಣಿಗೆ ಅಧಿಕೃತವಾಗಿ ಚಾಲನೆ ನೀಡಿದರು.
ನಗರದ ಭಟ್ರಹಳ್ಳಿ ಆಂಜನೇಯ ದೇವಾಲಯದ ಬಯಲು ಪ್ರದೇಶದಲ್ಲಿ ಕಾರ್ಯಕಾರಿಣಿ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿ ಎಲ್ ಸಂತೋಷ್, ಸಿಟಿ ರವಿ, ಗೃಹ ಸಚಿವರಾದ ಅರಗ ಜ್ಞಾನೇಂದ್ರ, ಜಗದೀಶ ಶೆಟ್ಟರ್, ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮುಲು, ಬಿಸಿ ನಾಗೇಶ್, ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ, ಬಿ.ವೈ. ರಾಘವೇಂದ್ರ ಸೇರಿದಂತೆ ಹಲವು ನಾಯಕರು ಧ್ವಜಾರೋಹಣ ಸಮಾರಂಭದಲ್ಲಿ ಭಾಗಿಯಾಗಿದರು.
ರಾಜ್ಯದ ಬಿಜೆಪಿ ಶಾಸಕರು, ಸಚಿವರು ಸೇರಿದಂತೆ ಸುಮಾರು 650 ಜನರು ಪಾಲ್ಗೊಂಡಿದ್ದಾರೆ. ಇದರ ನಡುವೆ ಬಿಜೆಪಿಯ ಒಳ ನಿರ್ಧಾರಗಳ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲವೂ ಹೆಚ್ಚಾಗಿದೆ. ಇದಕ್ಕೂ ಮೊದಲು ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಯ ವೇದಿಕೆ ಮುಂಭಾಗದಲ್ಲಿ ಡೊಳ್ಳು ಕುಣಿತ, ವಿವಿಧ ಕಲಾ ತಂಡಗಳು, ಜಾನಪದ ಕಲಾವಿದರು ತಮ್ಮ ಕಲಾ ಪ್ರದರ್ಶನದ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸ್ವಾಗತ ಕೋರಿದರು.
ಸಮಾರೋಪದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪಾಲ್ಗೊಳ್ಳಲಿದ್ದಾರೆ. ಸಚಿವ ಸಂಪುಟ ವಿಸ್ತರಣೆ, ಕೆಲವು ಮಂತ್ರಿಗಳ ರಾಜೀನಾಮೆ ಪಡೆದು ಹೊಸಮುಖಗಳಿಗೆ ಅವಕಾಶ ಸೇರಿದಂತೆ ಹಲವು ಪ್ರಮುಖ ವಿಚಾರಗಳು ನಾಳೆ ಚರ್ಚೆಯಾಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದಕ್ಕೂ ಮುನ್ನ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರ ತಪ್ಪಿಲ್ಲ. ಯಾರನ್ನು ಕೇಳಿ ನಾಲ್ಕು ಕೋಟಿ ರೂಪಾಯಿಗಳ ಕಾಮಗಾರಿ ನಡೆಸಿದ್ದಾರೆ. ಈ ಬೆಳವಣಿಗೆ ಹಿಂದೆ ಕಾಂಗ್ರೆಸ್‌ನವರ ಕೈವಾಡ ಇದೆ ಆರೋಪಿಸಿದರು.