Advertisement

65 ವರ್ಷದಿಂದ ದೇಶಕ್ಕೆ ಚೊಂಬು ಹಿಡಿಸಿದ್ದೆ ಕಾಂಗ್ರೆಸ್‌ ಸಾಧನೆ: ಹರಿಪ್ರಕಾಶ ಕೋಣೆಮನೆ

05:58 PM May 06, 2024 | Team Udayavani |

ಉದಯವಾಣಿ ಸಮಾಚಾರ
ಶಿರಸಿ: ಕಾಂಗ್ರೆಸ್ಸಿಗರಿಗೆ ಚೊಂಬು ಬಹಳ ಪ್ರೀತಿ. 65 ವರ್ಷ ದೇಶಕ್ಕೆ ಚೊಂಬು ಹಿಡಿಸಿದ್ದಾರೆ. ಈಗ ಪುನಃ ಚೊಂಬು ಹಿಡಿಸಲು ಬಂದಿರುವ ಕಾಂಗ್ರೆಸ್ಸಿಗರನ್ನು ಮತದಾರ ಬಂಧುಗಳು ಮನೆಗೆ ಕಳುಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ವಾಗ್ಧಾಳಿ ನಡೆಸಿದರು.

Advertisement

ಭಾನುವಾರ ನಗರದ ದೀನ ದಯಾಳ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮತ್ತು
ಕಾಂಗ್ರೆಸ್‌ ಪಕ್ಷದ ನೇತೃತ್ವ ವಹಿಸಿದವರು ಸುಳ್ಳಿನ ಪ್ರಚಾರ, ಹತಾಶರಾಗಿ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ಮೀಸಲಾತಿ ಬದಲಾಯಿಸಲು ಅವಕಾಶವಿಲ್ಲ. ಸಂವಿಧಾನದ ಕುರಿತು ಅಮಿತ್‌ ಶಾ ಹೇಳಿಕೆ ತಿರುಚಿದ ಕಾಂಗ್ರೆಸ್‌ನ ಕೆಲವರು ಕಂಬಿ ಎಣಿಸುವ ದಿನ ಹತ್ತಿರ ಬರಲಿದೆ ಎಂದರು.

2015 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಉದ್ಯೋಗ ಸೃಷ್ಟಿ ಮಾಡದೇ ದೇಶವನ್ನು ದಿವಾಳಿ ಅಂಚಿಗೆ ತಲುಪಿಸಿರುವುದು ಮನಮೋಹನ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಎಂದು ಕಿಡಿಕಾರಿದ ಅವರು, 2023-24ರಲ್ಲಿ ದೇಶದಲ್ಲಿ ಖಾತರಿ ಉದ್ಯೋಗ ಹೊಂದಿರುವವರ ಸಂಖ್ಯೆ 22 ಕೋಟಿ ಆಗಿದೆ. ಸುಮಾರು 7 ಕೋಟಿ ಉದ್ಯೋಗ ಸೇರ್ಪಡೆಯಾಗಿದೆ. ನೋಂದಾಯಿತ ಉದ್ಯಮಿಗಳ ಸಂಖ್ಯೆ 6.5 ಕೋಟಿ ದಾಟಿದೆ.

ಪ್ರಧಾನ ಮಂತ್ರಿ ರೋಜಗಾರ್‌ ಯೋಜನೆಯಲ್ಲಿ 7.5 ಲಕ್ಷ ಉದ್ಯೋಗಿಗಳು ಉದ್ಯೋಗ ಪಡೆದಿದ್ದಾರೆ. ಕೇಂದ್ರ ಎಚ್‌ಎಎಲ್‌ ಮಾರಾಟಕ್ಕೆ ಮುಂದಾಗಿದೆ ಎಂದು ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್‌ ಮುಖಂಡರು ಹೇಳಿದ್ದರು. ಎಚ್‌ ಎಎಲ್‌ ನಮ್ಮ ದೇಶದ ಹೆಮ್ಮೆಯ ಸಂಸ್ಥೆಯಾಗಿದ್ದು, 84 ಸಾವಿರ ಕೋಟಿ ರೂ. ಒಡಂಬಡಿಕೆ ಮಾಡಿಕೊಂಡು ಮುಂದುವರೆಯುತ್ತಿರುವ ದೇಶಗಳಿಗೆ ಯುದ್ಧ ವಿಮಾನ ತಯಾರಿಸಿ, ರಫ್ತು ಮಾಡುವ ಸಂಸ್ಥೆಯಾಗಿದೆ. ಈಗ 50 ಸಾವಿರ ಕೋಟಿ ಒಡಂಬಡಿಕೆಯ ಹಂತದಲ್ಲಿದೆ ಎಂದರು.

ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದು 1 ವರ್ಷದ ಅವ ಧಿಯಲ್ಲಿ ಕರ್ನಾಟಕದಲ್ಲಿ ಕೈಗಾರಿಕೆಗಳ ತೆರೆದ ದಾಖಲೆಗಳನ್ನು
ಬಹಿರಂಗಗೊಳಿಸಬೇಕು. ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ದಿನಕ್ಕೆ 46 ಕಿ.ಮೀ ಹೆದ್ದಾರಿ ನಿರ್ಮಾಣವಾಗುತ್ತಿದೆ. ಕಾಂಗ್ರೆಸ್‌ ಸರ್ಕಾರ ಧರ್ಮಾಧಾರಿತ ಮೀಸಲಾತಿ ನೀಡಲು ಹೊರಟಿದೆ. ಒಬಿಸಿ ಸಮುದಾಯದ ಮೀಸಲಾತಿ ಕಡಿತಗೊಳಿಸಿ, ಮುಸ್ಲಿಂರಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ. ಒಂದು ಕಡೆ ಸಮಾನತೆ ಎನ್ನುವ ಕಾಂಗ್ರೆಸ್‌ ಮತ್ತೂಂದು ಕಡೆ ತುಷ್ಟೀಕರಣದ
ರಾಜಕೀಯ ಮಾಡುತ್ತಿದೆ. ಇಂತಹ ಪಕ್ಷ ದೇಶದಿಂದ ತೊಲಗಬೇಕು ಎಂದರು.

Advertisement

ಕರ್ನಾಟಕದಲ್ಲಿ ಮೊದಲ ಹಂತದ ಮತದಾನ 26 ಕ್ಕೆ ಮುಗಿದಿದ್ದು, ಗರಿಷ್ಠ ಪ್ರಮಾಣದ ದಾಖಲೆ ಮತದಾನವಾಗಿದೆ. ಮೇ.7 ರಂದು ಎರಡನೇ ಹಂತದಲ್ಲಿ 14 ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ಪ್ರಚಾರ ಕಾರ್ಯ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರ 5 ಬೃಹತ್‌ ರ್ಯಾಲಿಗಳು ಯಶಸ್ವಿಯಾಗಿ ನಡೆದಿದೆ. ಮೋದಿ ಸಮಾವೇಶದ ನಂತರ ಉತ್ತರಕನ್ನಡ ಕ್ಷೇತ್ರದಲ್ಲಿ ಅತ್ಯುತ್ತಮ ವಾತಾವರಣ ಸೃಷ್ಟಿಯಾಗಿದ್ದು ಎಲ್ಲೆಡೆ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದರು.ವಿಶೇಷವಾಗಿ ಯುವ ಮತದಾರರು ಬೈಕ್‌ ರ್ಯಾಲಿ, ಮನೆ ಮನೆಗೆ ಸಂಪರ್ಕ, ಮತದಾರರನ್ನು ತಲುಪುವಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.

ಕಾಂಗ್ರೆಸ್‌ ವೈಫಲ್ಯವನ್ನು ಸ್ಪಷ್ಟವಾಗಿ ಗುರುತಿಸುತ್ತಿದ್ದಾರೆ. ನಮ್ಮ ಆಯ್ಕೆ ಬಿಜೆಪಿ, ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಮ್ಮ ಕ್ಷೇತ್ರದಿಂದ ಗೆಲ್ಲಿಸಿ ಮೋದಿಯವರ ಬಲ ಹೆಚ್ಚಿಸಬೇಕು ಎಂಬುದು ಎಲ್ಲರ ಒತ್ತಾಸೆಯಾಗಿದೆ ಎಂದ ಅವರು, ರಾಜ್ಯದ 28 ಕ್ಷೇತ್ರವನ್ನು ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಖಜಾಂಚಿ ರಮಾಕಾಂತ ಭಟ್‌, ಪ್ರಮುಖರಾದ ಶ್ರೀರಾಮ ನಾಯ್ಕ, ರವಿ ಶೆಟ್ಟಿ ಇದ್ದರು.

ಜಿಲ್ಲೆಯ ಜನರ ಬೆವರ ಹನಿಯನ್ನು ವ್ಯರ್ಥಮಾಡಲು ಬಿಡುವುದಿಲ್ಲ. ಇದಕ್ಕೆ ಖಂಡಿತ ನ್ಯಾಯ ಒದಗಿಸುತ್ತೇನೆ ಎಂದು ಶಿರಸಿಯ
ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ನಾನು ಬದ್ಧನಿದ್ದೇನೆ ಎಂದು ಹೇಳಿದ್ದಾರೆ. ಅವರನ್ನು ನಾವು ಬೆಂಬಲಿಸಬೇಕು. ನಮ್ಮ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಪ್ರಚಂಡ
ಮತಗಳ ಅಂತರದಿಂದ ಮತದಾರರು ಗೆಲ್ಲಿಸಬೇಕು.
ಹರಿಪ್ರಕಾಶ ಕೋಣೆಮನೆ,
ಬಿಜೆಪಿ ರಾಜ್ಯ ವಕ್ತಾರ

ರಾಜ್ಯದ ಕಾಂಗ್ರೆಸ್‌ ಸರ್ಕಾರದ ಬಳಿ ಪರಿಹಾರ ನೀಡಲು ಸಾಕಷ್ಟು ಒತ್ತಾಯ ಮಾಡಿದರೂ, ನೀಡುತ್ತಿಲ್ಲ. ದುರಂಹಕಾರದ ವರ್ತನೆ ತೋರುತ್ತಿದೆ. ಸಂಕಷ್ಟ ಕಾಲದಲ್ಲಿ ರೈತರಿಗೆ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ ಮೂಲಕ ಹಣ ಜಮಾ ಆಗಿದೆ. ಪ್ರಧಾನಿ ಎಂದಿಗೂ ದೇಶದ ಅನ್ನದಾತನನ್ನು ಕೈಬಿಡುವುದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ.
ಸದಾನಂದ ಭಟ್ಟ,
ಬಿಜೆಪಿ ಜಿಲ್ಲಾ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next