Advertisement

IT; ಬ್ಯಾಂಕ್‌ ಖಾತೆಯಿಂದ 65 ಕೋಟಿ ರೂ. ವಿತ್‌ಡ್ರಾಗೆ ಐಟಿ ಇಲಾಖೆ ಯತ್ನ: ಕಾಂಗ್ರೆಸ್‌

11:48 PM Feb 21, 2024 | Team Udayavani |

ಹೊಸದಿಲ್ಲಿ: ಹಿಂದಿನ ವರ್ಷಗಳ ತೆರಿಗೆ ಪಾವತಿಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ಕಾಂಗ್ರೆಸ್‌ನ ವಿವಿಧ ಬ್ಯಾಂಕ್‌ ಖಾತೆಗಳಿಂದ ಒಟ್ಟು 65 ಕೋಟಿ ರೂ.ಗಳನ್ನು ಕಡಿತಗೊಳಿಸುವಂತೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಇದು ಪ್ರಜಾಸತ್ತಾತ್ಮಕ ನಡೆಯಲ್ಲ ಎಂದು ಕಾಂಗ್ರೆಸ್‌ ಖಜಾಂಚಿ ಅಜಯ್‌ ಮಾಕನ್‌ ಆರೋಪಿಸಿದ್ದಾರೆ.

Advertisement

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರದಲ್ಲಿ ತೆರಿಗೆ ಪಾವತಿಗೆ ಸಂಬಂಧಿಸಿದ ಪ್ರಕರಣ ವಿಚಾರಣೆ ಹಂತದಲ್ಲಿದೆ. ಆದರೆ ಕಾಂಗ್ರೆಸ್‌ ಮತ್ತು ಯುವ ಕಾಂಗ್ರೆಸ್‌ನ ವಿವಿಧ ಬ್ಯಾಂಕ್‌ ಖಾತೆಗಳಿಂದ 65 ಕೋಟಿ ರೂ. ಕಡಿತಗೊಳಿಸುವಂತೆ ಆದಾಯ ತೆರಿಗೆ ಇಲಾಖೆಯು ಬ್ಯಾಂಕ್‌ಗಳಿಗೆ ಪತ್ರ ಬರೆದಿದೆ’ ಎಂದು ತಿಳಿಸಿದ್ದಾರೆ.

“ಇದಕ್ಕೂ ಮುನ್ನ, ರಿಟರ್ನ್ಸ್ ಸಲ್ಲಿಕೆಯಲ್ಲಿ ವ್ಯತ್ಯಾಸಗಳು ಕಂಡುಬಂದಿವೆ ಎಂದಿದ್ದ ಐಟಿ ಇಲಾಖೆ 210 ಕೋಟಿ ರೂ. ವಸೂಲಿ ಮಾಡಲು ಮುಂದಾಗಿತ್ತು. ಈ ಸಂಬಂಧ ಕಾಂಗ್ರೆಸ್‌ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರದ ಮೊರೆ ಹೋದ ಬಳಿಕ, ಪ್ರಾಧಿಕಾರವು ಇದಕ್ಕೆ ತಡೆ ನೀಡಿತ್ತು. ಆದರೂ ಪಕ್ಷದ ಬ್ಯಾಂಕ್‌ ಖಾತೆಗಳಿಂದ ಹಣ ಕಡಿತದ ಕ್ರಮ ಪ್ರಜಾಸತ್ತಾತ್ಮ ಕವಾದ ನಡೆಯಲ್ಲ,’ ಎಂದ ಅವರು, “ತನಿಖಾ ಸಂಸ್ಥೆಗಳು ವಿಚಾರಣೆಯನ್ನು ಅನಿಯಂತ್ರಿತವಾಗಿ ನಡೆಸುವುದನ್ನು ರೂಢಿಸಿಕೊಂಡರೆ ಪ್ರಜಾಪ್ರಭುತ್ವವೇ ನಾಶವಾದಂತೆ’ ಎಂದು ದೂರಿದ್ದಾರೆ.

ಆದಾಯ ತೆರಿಗೆ ಇಲಾಖೆಯ ಕ್ರಮವನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಅನೇಕ ನಾಯಕರು ಖಂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next