ಅಫಜಲಪುರ: ತಾಲೂಕಿನ ಸೊನ್ನದಲ್ಲಿರುವ 3.166 ಟಿಎಂಸಿ ಅಡಿ ಸಾಮರ್ಥ್ಯದ ಭೀಮಾ ಏತ ನೀರಾವರಿ ಬ್ಯಾರೇಜ್ ಭರ್ತಿಯಾಗಿದ್ದು, ಬ್ಯಾರೇಜ್ ನಿಂದ 18 ಗೇಟ್ ಮೂಲಕ 64,800 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಸದ್ಯ 3.04 ಟಿಎಂಸಿ ಅಡಿ ನೀರು ಸಂಗ್ರಹವಿದೆ ಎಂದು ಕೆಎನ್‌ಎನ್‌ಎಲ್ ಎಇಇಗಳಾದ ಲಕ್ಷ್ಮೀಕಾಂತ, ಬಿ.ಎಸ್. ಐನಾಪುರ ತಿಳಿಸಿದ್ದಾರೆ.
ಮಹಾರಾಷ್ಟ್ರದ ಪುಣೆ ಮತ್ತು ಮುಂಬೈ ಮಹನಾನಗರಗಳು ಸೇರಿದಂತೆ ಅನೇಕ ಕಡೆಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಅಲ್ಲಿನ ಜಲಾಶಯಗಳೆಲ್ಲ ಭರ್ತಿಯಾಗಿವೆ. ಹೀಗಾಗಿ ಹೆಚ್ಚುವರಿ ನೀರನ್ನು ಅಲ್ಲಿನ ಅಧಿಕಾರಿಗಳು ಭಿಮಾ ನದಿಗೆ ಹರಿಬಿಡುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ನೀರಿನ ಒಳಹರಿವು ಏರಿಕೆಯಾಗಿದ್ದು, ಭೀಮಾ ನದಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಸದ್ಯ 18 ಗೇಟ್‌ಗಳಿಂದ ನೀರು ಹರಿಬಿಡಲಾಗುತ್ತಿದೆ. 10 ಗೇಟ್‌ಗಳನ್ನು 1 ಮೀಟರ್ ಎತ್ತರ ಏರಿಸಲಾಗಿದೆ. ಇನ್ನುಳಿದ 8 ಗೇಟ್‌ಗಳನ್ನು 0.5 ಮೀಟರ್ ಎತ್ತರ ತೆಗೆದು ನೀರು ಬಿಡಲಾಗುತ್ತಿದೆ. ಸದ್ಯ 64,800 ಕ್ಯೂಸೆಕ್ ನೀರು ಒಳ ಮತ್ತು ಹೊರ ಹರಿವು ಇದೆ. ಹೀಗಾಗಿ ಭಾರಿ ಪ್ರಮಾಣದ ನೀರು ಭೀಮಾ ನದಿಯಲ್ಲಿ ಹರಿಯುತ್ತಿದೆ. ನದಿ ದಡಕ್ಕೆ ಮಕ್ಕಳು, ದನ, ಕುರಿಗಾಹಿಗಳು, ಮೀನುಗಾರರು ಹೋಗಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಘತ್ತರಗಿ, ದೇವಲ ಗಾಣಗಾಪುರ ಮತ್ತು ಚಿನ್ನಮಳ್ಳಿ ಗ್ರಾಮಗಳಲ್ಲಿರುವ ಬ್ರಿಜ್ ಕಂಬ್ಯಾರೇಜ್‌ಗಳಲ್ಲಿ ಯಾರು ಹೋಗದ ಹಾಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇನ್ನೂ ಒಂದು ವಾರಕ್ಕೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಭಾರಿ ಪ್ರಮಾಣದ ನೀರು ಭೀಮಾ ನದಿಗೆ ಬರಲಿದೆ. ಇನ್ನೂ ಒಂದು ವಾರದ ವರೆಗೆ ಭೀಮಾ ನದಿಯಲ್ಲಿ ಪ್ರವಾಹ ಭೀತಿ ಇರಲಿದೆ ಎಂದು ಉಜನಿ ಜಲಾಶಯದ ತಾಂತ್ರಿಕ ಅಧಿಕಾರಿಗಳು ಉದಯವಾಣಿಗೆ ತಿಳಿಸಿದ್ದಾರೆ.