ಮುಂಬಯಿ, ಜು. 7: ಕೋವಿಡ್ ವಿರುದ್ಧದ ಹೋರಾಟಕ್ಕೆ ಮುಂಬಯಿ ಮಹಾನಗರ ಪಾಲಿಕೆಯು ಈವರೆಗೆ ಸುಮಾರು 630 ಕೋ. ರೂ. ಖರ್ಚು ಮಾಡಿದ್ದು, ಪ್ರಸ್ತುತ 2020-21ರ ಬಜೆಟ್ ಹಂಚಿಕೆಗಾಗಿ ಪುನಃ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಕೋವಿಡ್ ಸಂಬಂಧಿತ ವೆಚ್ಚಗಳನ್ನು ಪೂರೈಸಲು ನಾಗರಿಕ ಸಂಸ್ಥೆಯು ಬಜೆಟ್‌ನಲ್ಲಿ ಕೆಲವು ಯೋಜನೆಗಳಿಗೆ ನಿಗದಿಪಡಿಸಿದ ಹಣವನ್ನು ಬೇರೆಡೆಗೆ ತಿರುಗಿಸುವ ಸಾಧ್ಯತೆಯಿದೆ. ದೇಶದ ಶ್ರೀಮಂತ ನಾಗರಿಕ ಸಂಸ್ಥೆ ಎಂದೇ ಪ್ರಸಿದ್ಧಿಯನ್ನು ಪಡೆದ ಬಿಎಂಸಿ ಅನಿರೀಕ್ಷಿತವಾಗಿ ರಚಿಸಲಾದ 50,850 ಕೋ.ರೂ. ಆಕಸ್ಮಿಕ ನಿಧಿಯಿಂದ ಹಣವನ್ನು ಬಳಸಿಕೊಳ್ಳುತ್ತಿದೆ.
ಮುಂದಿನ ದಿನಗಳಲ್ಲಿ ನಿರ್ಧಾರ : ನಮ್ಮಲ್ಲಿ ಸುಮಾರು 220 ಕೋಟಿ ರೂ. ಆಕಸ್ಮಿಕ ನಿಧಿ ಉಳಿದಿದೆ. ಹೆಚ್ಚಿನ ಹಣವನ್ನು ಆರೋಗ್ಯ ಸೌಲಭ್ಯಗಳ ಸೃಷ್ಟಿಗೆ ಬಳಸಿಕೊಳ್ಳಲಾಯಿತು. ಅಗತ್ಯವಿದ್ದಲ್ಲಿ, ನಾವು ಶೀಘ್ರದಲ್ಲೇ ಆಂತರಿಕ ಕೆಲಸವನ್ನು ಪ್ರಾರಂಭಿಸುತ್ತೇವೆ ಎಂದು ಹೆಚ್ಚುವರಿ ಪುರಸಭೆ ಆಯುಕ್ತ ಪಿ. ವೆಲ್ರಾಸು ಹೇಳಿದರು.
ಕೋವಿಡ್ -19 ವೆಚ್ಚಗಳನ್ನು ಪೂರೈಸಲು ಆಕಸ್ಮಿಕ ನಿಧಿಯ ಮೊತ್ತವು ಮುಗಿದಿದ್ದರೆ ಹೆಚ್ಚಿನ ಹಣವನ್ನು ಹೇಗೆ ಸಂಗ್ರಹಿಸುವುದು ಎಂದು ನಿರ್ಧರಿಸಿಲ್ಲ ಎಂದು ಬಿಎಂಸಿ ಹೇಳಿದೆ. ಕಳೆದ ಎರಡು ತಿಂಗಳುಗಳಿಂದ ಹೆಚ್ಚುತ್ತಿರುವ ಪ್ರಕರಣಗಳ ಕಾರಣದಿಂದಾಗಿ ಎಚ್ಚರಿಕೆಯಿಂದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಏಪ್ರಿಲ್ ವರೆಗೆ, ಬಿಎಂಸಿ ಸುಮಾರು 100 ಕೋ. ರೂ. ಗಳವರೆಗೆ ಖರ್ಚು ಮಾಡಿದೆ. ಜೂನ್ ಮೊದಲ ವಾರದ ವೇಳೆಗೆ ಸುಮಾರು 480 ಕೋ. ರೂ.ಗೆ ಏರಿಕೆಯಾಗಿದೆ. ಜುಲೈ ಮೊದಲ ವಾರದ ವೇಳೆಗೆ ಅದು ಒಟ್ಟು 630 ಕೋ. ರೂ. ಗಳಿಗೆ ತಲುಪಿದೆ ಎಂದು ಬಿಎಂಸಿ ತಿಳಿಸಿದೆ.
ದೇಣಿಗೆ ಬಗ್ಗೆ ನಿಖರ ಮಾಹಿತಿಯಿಲ್ಲ : ಆರೋಗ್ಯ ಮೂಲಸೌಕರ್ಯಗಳ ಹೊರತಾಗಿ ಮುಂಚೂಣಿ ಸಿಬಂದಿಯ ವಸತಿಗಾಗಿ ಹೊಟೇಲ್ ಬಿಲ್, ಗುತ್ತಿಗೆ ಆಧಾರದ ಮೇಲೆ ಹೊಸ ಸಿಬಂದಿ ನೇಮಕ, ಆಹಾರ ವಿತರಣೆ, ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್‌ಗಳು, ಎನ್-95 ಮುಖವಸ್ತ್ರ, ಕೈಗವಸುಗಳು, ಹೈಡ್ರಾಕ್ಸಿಕ್ಲೋರೋಕ್ವಿನ್, ಥರ್ಮಲ್ ಮೀಟರ್, ಸ್ಯಾನಿಟೈಸರ್ ಇತ್ಯಾದಿ ಕೆಲವು ವಸ್ತುಗಳನ್ನು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ರೂಪದಲ್ಲಿ ಅಥವಾ ಸಂಸ್ಥೆಗಳಿಂದ ದೇಣಿಗೆ ರೂಪದಲ್ಲಿ ಸ್ವೀಕರಿಸಲಾಗಿದೆ. ಆದರೆ ದಾನ ಮಾಡಿದ ವಸ್ತುಗಳ ನಿಖರವಾದ ಪ್ರಮಾಣ ಇನ್ನೂ ತಿಳಿದುಬಂದಿಲ್ಲ.
ವೆಚ್ಚಗಳ ಮೇಲೆ ಪಾರದರ್ಶಕತೆ ಅಗತ್ಯ ಬಿಎಂಸಿ ವಿಪಕ್ಷ ನಾಯಕ ರವಿ ರಾಜಾ ಮಾತನಾಡಿ, ಭವಿಷ್ಯದ ಕೋವಿಡ್ ವೆಚ್ಚ ಗಳಿಗಾಗಿ ಬಿಎಂಸಿ ಹೇಗೆ ಹಣ ಸಂಗ್ರಹಿಸಬಹುದು ಎಂಬುದರ ಕುರಿತು ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ, ಬಿಎಂಸಿ ಇನ್ನೂ ಚುನಾಯಿತ ಪ್ರತಿನಿಧಿಗಳಿಗೆ ವೆಚ್ಚಗಳ ಬಗ್ಗೆ ತಿಳಿಸಿಲ್ಲ. ನಾನು ವೈಯಕ್ತಿಕವಾಗಿ ಅಧಿಕಾರಿ ಗಳಿಂದ ವಿವರಗಳನ್ನು ಕೋರಿದ್ದೇನೆ. ಆದರೆ ಅವರು ಅದನ್ನು ಹಂಚಿಕೊಳ್ಳುತ್ತಿಲ್ಲ. ವೆಚ್ಚಗಳ ಮೇಲೆ ಪಾರದರ್ಶಕತೆ ಇದೆ ಎಂದು ನಾವು ನಿರೀಕ್ಷಿಸುತ್ತೇವೆ. ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಚುನಾಯಿತ ಪ್ರತಿನಿಧಿಗಳಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.