ಹೊಸದಿಲ್ಲಿ: ಉಕ್ರೇನ್‌ನಲ್ಲಿ ಸಿಲುಕಿರುವ 20 ಸಾವಿರ ಭಾರತೀಯರಲ್ಲಿ 6 ಸಾವಿರ ಮಂದಿಯನ್ನು ಈಗಾಗಲೇ ಭಾರತಕ್ಕೆ ಕರೆತರಲಾಗಿದೆ ಎಂದು ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ವಿ. ಮುರಳೀಧರನ್ ತಿಳಿಸಿದ್ದಾರೆ.
ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ಹಾಗೂ ಇತರ ನಾಗರಿಕರು ಸೇರಿ ಒಟ್ಟು 20,000 ಮಂದಿಯಿದ್ದಾರೆ. ಅವರಲ್ಲಿ 6,000 ಮಂದಿಯನ್ನು ವಾಪಸ್ ಕರೆಯಿಸಿಕೊಳ್ಳಲಾಗುತ್ತಿದೆ. ವಾಪಸ್ ಬಂದವರಲ್ಲಿ 4,000 ಮಂದಿಯನ್ನು ಯುದ್ಧ ಆರಂಭಕ್ಕೆ ಅಂದರೆ ಫೆ. 24ಕ್ಕಿಂತ ಮುನ್ನವೇ ಸ್ವದೇಶಕ್ಕೆ ಕರೆತರಲಾಗಿದೆ. ಮಂಗಳವಾರದವರೆಗೆ ಇನ್ನೂ 2,000 ಮಂದಿ ಭಾರತಕ್ಕೆ ಬಂದಿದ್ದು, ತೆರವು ಕಾರ್ಯಾಚರಣೆ ಮುಂದುವರಿದಿದೆ” ಎಂದು ತಿಳಿಸಿದರು.
“ಉಕ್ರೇನ್‌ನಲ್ಲಿ ಇನ್ನೂ ಸಾವಿರಾರು ಭಾರತೀಯರು ಇರುವುದರಿಂದ ಅವರ ತ್ವರಿತ ತೆರವಿಗಾಗಿ ಸೇನಾ ವಿಮಾನ ಗಳನ್ನು ಬಳಸಲು ತೀರ್ಮಾನಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ರಷ್ಯಾ ಅಭಯ: ಉಕ್ರೇನ್‌ನ ಖಾರ್ಕಿವ್, ಸುಮಿ ಹಾಗೂ ಇನ್ನಿತರ ಯುದ್ಧಪೀಡಿತ ಪ್ರದೇಶಗಳಲ್ಲಿರುವ ಭಾರತೀಯರು, ಸುರಕ್ಷಿತವಾಗಿ ರಷ್ಯಾಕ್ಕೆ ಆಗಮಿಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿದ್ದೇವೆ ಎಂದು ರಷ್ಯಾ ತಿಳಿಸಿದೆ.
ಸದ್ಯದಲ್ಲೇ 31 ವಿಮಾನ: ಆಪರೇಷನ್ ಗಂಗಾ ಕಾರ್ಯಾಚರಣೆಯ ಅಡಿಯಲ್ಲಿ ಉಕ್ರೇನ್‌ನಲ್ಲಿರುವ ಭಾರತೀಯರನ್ನು ಕರೆತರಲು ಮುಂದಿನ ದಿನಗಳಲ್ಲಿ 31 ವಿಮಾನಗಳನ್ನು ಉಕ್ರೇನ್‌ನ ನೆರೆರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲಿವೆ. ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಇಂಡಿಗೋ, ಸ್ಪೈಸ್ ಜೆಟ್, ಇಂಡಿಯನ್ ಏರ್ ಫೋರ್ಸ್ ಸಂಸ್ಥೆಗಳು ಈ ಕಾರ್ಯಾಚರಣೆಗಳ ಮೇಲುಸ್ತುವಾರಿ ವಹಿಸಲಿವೆ ಎಂದು ಮೂಲಗಳು ತಿಳಿಸಿವೆ.