ಗುವಾಹಟಿ: ಈಶಾನ್ಯ ರಾಜ್ಯಗಳಲ್ಲಿ ಉತ್ತಮ ದರ್ಜೆಯ ವೈಮಾನಿಕ ಸಂಚಾರ ಕಲ್ಪಿಸುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರ, ಆ ಪರಿಕಲ್ಪನೆಯನ್ನು ನನಸು ಮಾಡಲು ಮತ್ತೂಂದು ಹೆಜ್ಜೆಯನ್ನಿಟ್ಟಿದೆ.
ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸೋಮವಾರ ಈಶಾನ್ಯ ರಾಜ್ಯಗಳ ಮೂರು ನಗರಗಳನ್ನು ಸಂಪರ್ಕಿಸುವ 6 ಹೆಚ್ಚುವರಿ ವಾಯುಮಾರ್ಗಗಳನ್ನು ಆನ್‌ಲೈನ್ ಮೂಲಕ ಲೋಕಾರ್ಪಣೆ ಮಾಡಿದ್ದಾರೆ.
ಅದರಂತೆ, ಕೋಲ್ಕತಾ-ಗುವಾಹಟಿ, ಗುವಾಹಟಿ-ಐಜ್ವಾಲ್, ಐಜ್ವಾಲ್-ಶಿಲ್ಲಾಂಗ್, ಶಿಲ್ಲಾಂಗ್-ಐಜ್ವಾಲ್, ಐಜ್ವಾಲ್-ಗುವಾಹಟಿ, ಗುವಾಹಟಿ-ಕೋಲ್ಕತಾ ನಡುವೆ ಹೊಸದಾಗಿ ವಿಮಾನ ಸಂಚಾರ ಆರಂಭಗೊಳ್ಳಲಿದೆ.
ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಈ ಮಾರ್ಗಗಳಲ್ಲಿ ವಿಮಾನ ಸಂಚಾರ ಇರಲಿದೆ. ಮುಖ್ಯವಾಗಿ ಮಿಜೋರಂವರೆಗೆ ಅಲ್ಲಿಗೆ ಸಂಪರ್ಕ ಕಲ್ಪಿಸುವುದು ಇಲ್ಲಿನ ಇನ್ನೊಂದು ಉದ್ದೇಶವಾಗಿದೆ. ಆ ನಗರ, ನೆರೆರಾಷ್ಟ್ರ ಮಾಯೆನ್ಮಾರ್ ಗಡಿಭಾಗದಲ್ಲಿರುವುದರಿಂದ ಅಂತರಗಡಿ ಸಂಚಾರಕ್ಕೂ ಅನುಕೂಲವಾಗಲಿದೆ ಎಂಬುದು ಕೇಂದ್ರದ ಆಶಯವಾಗಿದೆ.
ಇದನ್ನೂ ಓದಿ:ಪಿಎನ್‌ಬಿ ಹಗರಣದ ಪ್ರಮುಖ ಆರೋಪಿ ದೇಶಭ್ರಷ್ಟ ನೀರವ್ ಮೋದಿಗೆ ಮತ್ತೆ ನಿರಾಶೆ
6 ಮಾರ್ಗಗಳ ಲೋಕಾರ್ಪಣೆ ನಂತರ ಮಾತನಾಡಿದ ಸಿಂದಿಯಾ, “ಪ್ರತಿಯೊಂದು ರಾಜ್ಯದ ವಿಶೇಷತೆಯನ್ನು ಇತರ ಎಲ್ಲಾ ರಾಜ್ಯಗಳ ಜನತೆ ನೋಡಿ, ಖುಷಿಪಡಲೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ.
ಹೀಗಾಗಿಯೇ, ದಶಕಗಳವರೆಗೆ ವಿಸ್ತಾರವಾದ ವೈಮಾನಿಕ ಸೇವೆಯಿಂದ ವಂಚಿತವಾಗಿದ್ದ ಈಶಾನ್ಯ ರಾಜ್ಯಗಳಿಗೆ ಉತ್ತಮ ದರ್ಜೆಯ ವಿಮಾನ ಸೇವಾ ಸೌಕರ್ಯ ಕಲ್ಪಿಸುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ” ಎಂದಿದ್ದಾರೆ.