ಬೆಂಗಳೂರು: ಅರಣ್ಯ ಹಾಗೂ ಕಂದಾಯ ಜಮೀನು ವಿಚಾರದ ಸಂಘರ್ಷ ತಪ್ಪಿಸಲು ಅರಣ್ಯ ಎಂದು ಪರಿಗಣಿಸಿದ (ಡೀಮ್ಡ್ ಫಾರೆಸ್ಟ್) 9.50 ಲಕ್ಷ ಹೆಕ್ಟೇರ್ ಪ್ರದೇಶದ ಪೈಕಿ 6 ಲಕ್ಷ ಹೆಕ್ಟೇರ್ ಕಂದಾಯ ಇಲಾಖೆಗೆ ವಾಪಸ್ ಪಡೆಯಲು ರಾಜ್ಯ ಸರಕಾರ ತೀರ್ಮಾನಿಸಿದೆ.
ವಿಧಾನಸೌಧದಲ್ಲಿ ಸೋಮವಾರ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಕುರಿತು ಸುಪ್ರೀಂಕೋರ್ಟ್‌ಗೆ ಪರಿಷ್ಕೃತ ಪ್ರಮಾಣ ಪತ್ರ ಸಲ್ಲಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಕಂದಾಯ ಇಲಾಖೆಗೆ ಪಡೆಯಲು ಉದ್ದೇಶಿಸಿರುವ 6 ಲಕ್ಷ ಹೆಕ್ಟೇರ್ ಹೊರತುಪಡಿಸಿ ಉಳಿದ 3.50 ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ರೂಪದಲ್ಲಿ ಅರಣ್ಯ ಇಲಾಖೆಗೆ ಬಿಟ್ಟುಕೊಡ ಲಾಗುವುದು ಎಂದು ಹೇಳಿದರು.
ಈ ತೀರ್ಮಾನವು ಕೇವಲ ಕಂದಾಯ ಇಲಾಖೆಯಿಂದಲೇ ಅರಣ್ಯ ಇಲಾಖೆಗೆ ಹಸ್ತಾಂತರವಾಗಿದ್ದ ಡೀಮ್ಡ್ ಫಾರೆಸ್ಟ್ ಜಮೀನಿಗೆ ಮಾತ್ರ ಅನ್ವಯ. ಕಾಯ್ದಿಟ್ಟ (ರಿಸರ್ವ್ ಫಾರೆಸ್ಟ್) ಪ್ರದೇಶಕ್ಕೆ ಅನ್ವಯಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಡೀಮ್ಡ್ ಫಾರೆಸ್ಟ್ ಜಮೀನು ಮರು ಹಸ್ತಾಂತರ ಸಂಬಂಧ ಹಿಂದಿನ ಸರಕಾರದ ಅವಧಿಯಲ್ಲಿ ಕೈಗೊಂಡ ತೀರ್ಮಾನದಂತೆ ಈಗಾಗಲೇ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದು, ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆದು ಪರಿಷ್ಕೃತ ಪ್ರಮಾಣಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪರಿಷ್ಕೃತ ಪ್ರಮಾಣ ಪತ್ರ ಮಾನ್ಯವಾದರೆ ಹಲವು ದಶಕಗಳಿಂದ ಕಗ್ಗಂಟಾಗಿರುವ ಸಮಸ್ಯೆ ಬಗೆಹರಿಯಲಿದೆ. ಶಿವಮೊಗ್ಗ, ಚಿಕ್ಕಮಗಳೂರು ಸಹಿತ ಮಲೆನಾಡು ಭಾಗದಲ್ಲಿ ಮನೆ ಕಟ್ಟಿಕೊಂಡಿರುವ, ಉಳುಮೆ ಮಾಡುತ್ತಿರುವ ಬಡವರಿಗೆ ಅನುಕೂಲವಾಗಲಿದೆ. ಪ್ರವಾಹದಿಂದ ಮನೆ ಕಳೆದು ಕೊಂಡವರಿಗೂ ಮನೆ ನಿರ್ಮಿಸಿಕೊಡಲು ಸಹಕಾರಿಯಾಗಲಿದೆ ಎಂದರು. ಅರಣ್ಯ ಸಚಿವ ಆನಂದ್ ಸಿಂಗ್ ಉಪಸ್ಥಿತರಿದ್ದರು.