Advertisement
ಇದೇ ವೇಗದಲ್ಲೇ ಸೋಂಕಿತರ ಸಂಖ್ಯೆ ಏರುತ್ತಾ ಹೋದರೆ, ಇನ್ನೂ 3-4 ದಿನಗಳಲ್ಲೇ ಭಾರತವು ಜಾಗತಿಕ ಹಾಟ್‌ಸ್ಪಾಟ್‌ಗಳಲ್ಲಿ ಮೂರನೇ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ.
ಒಂದೆಡೆ ದೇಶದಲ್ಲಿ ಕೋವಿಡ್-19 ಸೋಂಕಿತರ ಚೇತರಿಕೆ ಪ್ರಮಾಣ 59.37 ಪ್ರತಿಶತ ತಲುಪಿರುವುದು ಸಮಾಧಾನದ ವಿಷಯವಾದರೂ ಇನ್ನೊಂದೆಡೆ ನಿತ್ಯ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇರುವುದು ಆತಂಕದ ಸಂಗತಿ.
Related Articles
Advertisement
ಆತಂಕದ ವಿಷಯವೆಂದರೆ, ಕೆಲ ಸಮಯದಿಂದ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲೂ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದ್ದು, ದೇಶದಲ್ಲಿ ಸೋಂಕಿತ ರಾಜ್ಯಗಳ ಪಟ್ಟಿಯಲ್ಲೀಗ ಕರ್ನಾಟಕ 9ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಜೂನ್ 27ರಿಂದ ಜುಲೈ 1ರ ವರೆಗೆ, ಅಂದರೆ ಕೇವಲ 5 ದಿನಗಳಲ್ಲೇ 5,509 ಹೊಸ ಪ್ರಕರಣಗಳು ಪತ್ತೆಯಾಗಿವೆ.
5 ದಿನದಲ್ಲೇ 1 ಲಕ್ಷ ಸೋಂಕಿತರು!ದೇಶದಲ್ಲಿ ಮೊದಲ ಕೋವಿಡ್ 19 ಪ್ರಕರಣ ಪತ್ತೆಯಾದದ್ದು ಜನವರಿ 30 ರಂದು, ತದನಂತರ ಸೋಂಕಿತರ ಸಂಖ್ಯೆ 1 ಲಕ್ಷಕ್ಕೆ ತಲುಪಲು 109 ದಿನಗಳು ಹಿಡಿದವು. ಮೇ 18ರಂದು ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಒಂದು ಲಕ್ಷಕ್ಕೆ ಏರಿತು. ಗಮನಾರ್ಹ ಸಂಗತಿಯೆಂದರೆ, ಅದೇ ದಿನವೇ ಮೊದಲ ಬಾರಿ ದೇಶದಲ್ಲಿ ನಿತ್ಯ ಪರೀಕ್ಷೆಗಳ ಸಂಖ್ಯೆಯೂ 1 ಲಕ್ಷ ತಲುಪಿತ್ತು. ಆ ಅವಧಿಯಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್ ಜಾರಿಯಲ್ಲಿದ್ದ ಕಾರಣ ರೋಗ ದ್ವಿಗುಣಗೊಳ್ಳುವ ದರವೂ ವೇಗ ಪಡೆದಿರಲಿಲ್ಲ. ಆದರೆ ಲಾಕ್‌ಡೌನ್ ನಿರ್ಬಂಧಗಳು ಸಡಿಲವಾಗುತ್ತಿದ್ದಂತೆಯೇ, ಸೋಂಕಿತರ ಸಂಖ್ಯೆ ನೋಡನೋಡುತ್ತಿದ್ದಂತೆಯೇ ಏರಿಕೆ ಕಾಣಲಾರಂಭಿಸಿತು.
ಚೀನ 9 ಕೋಟಿ ಪರೀಕ್ಷೆಗಳು ಎಷ್ಟು ಸತ್ಯ?
ಇದುವರೆಗೂ ಅತಿಹೆಚ್ಚು ಟೆಸ್ಟ್‌ಗಳನ್ನು ನಡೆಸಿದ ರಾಷ್ಟ್ರಗಳಲ್ಲಿ ಮೊದಲ ಸ್ಥಾನದಲ್ಲಿ ಚೀನ ಇದೆ ಎಂದು ವಲ್ಡೋಮೀಟರ್‌ನ ಅಂಕಿಸಂಖ್ಯೆಗಳು ಹೇಳುತ್ತವೆ. ಇದುವರೆಗೂ ಜಿನ್‌ಪಿಂಗ್ ಆಡಳಿತವು ತಮ್ಮ ದೇಶದಲ್ಲಿ 9 ಕೋಟಿಗೂ ಅಧಿಕ ಟೆಸ್ಟಿಂಗ್‌ಗಳನ್ನು ನಡೆಸಲಾಗಿದೆ ಎಂದು ಹೇಳುತ್ತದೆ. ಅದರಲ್ಲೂ ವುಹಾನ್ ನಗರವೊಂದರಲ್ಲೇ 1 ಕೋಟಿಗೂ ಅಧಿಕ ಟೆಸ್ಟಿಂಗ್‌ಗಳನ್ನು ನಡೆಸಿದ್ದೇವೆ ಎನ್ನುತ್ತದೆ ಆರೋಗ್ಯ ಇಲಾಖೆ. ಆದರೆ ಈ ವಿಚಾರವಾಗಿ ಸಾಂಕ್ರಾಮಿಕ ರೋಗತಡೆ ತಜ್ಞರು ಅನುಮಾನ ವ್ಯಕ್ತಪಡಿಸುತ್ತಾರೆ. ಚೀನ ಸೋಂಕಿತರ ಸಂಖ್ಯೆಯನ್ನು ಮುಚ್ಚಿಡುವ ಜತೆ ಜತೆಗೇ ಟೆಸ್ಟಿಂಗ್‌ಗಳ ಸಂಖ್ಯೆಯನ್ನು ಬೇಕೆಂದೇ ಹೆಚ್ಚು ಹೇಳುತ್ತಿದೆ ಎನ್ನುವುದು ಅವರ ವಾದ. ಚೀನವನ್ನು ಬದಿಗೆ ಸರಿಸಿ ನೋಡಿದರೆ, ಅತಿ ಹೆಚ್ಚು ಟೆಸ್ಟಿಂಗ್‌ಗಳನ್ನು ನಡೆಸಿರುವುದು ಅಮೆರಿಕ. ಅಲ್ಲೀಗ 3 ಕೋಟಿ 48 ಲಕ್ಷಕ್ಕೂ ಅಧಿಕ ಜನರನ್ನು ಪರೀಕ್ಷಿಸಲಾಗಿದೆ. ಅತಿ ಹೆಚ್ಚು ಟೆಸ್ಟಿಂಗ್ ನಡೆಸಿದ ರಾಷ್ಟ್ರಗಳಲ್ಲಿ ಭಾರತವೀಗ 5ನೇ ಸ್ಥಾನದಲ್ಲಿದೆ. 90 ಲಕ್ಷ ಪರೀಕ್ಷೆಗಳನ್ನು ನಡೆಸಿದ ಭಾರತ
ಜುಲೈ 1ರ ವೇಳೆಗೆ ದೇಶದಲ್ಲಿ 90 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ. ಗಮನಾರ್ಹ ಸಂಗತಿಯೆಂದರೆ ಕೆಲ ದಿನಗಳಿಂದ ಪ್ರತಿನಿತ್ಯ 2 ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಮ್ಮಲ್ಲಿ ನಡೆಸಲಾಗುತ್ತಿದೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟಿಂಗ್ ನಡೆಸುವುದೂ ಸಹ ಪ್ರಮುಖ ಅಸ್ತ್ರವಾಗಿದ್ದು, ಈ ನಿಟ್ಟಿನಲ್ಲಿ ಭಾರತ ಈ ತಿಂಗಳಾಂತ್ಯದ ವೇಳೆಗೆ ನಿತ್ಯ ಏನಿಲ್ಲವೆಂದರೂ ಕನಿಷ್ಠ 4 ಲಕ್ಷವಾದರೂ ಪರೀಕ್ಷೆಗಳನ್ನು ನಡೆಸುವಂತಾಗಬೇಕು ಎನ್ನುವುದು ಪರಿಣತರ ಅಭಿಪ್ರಾಯ. ಇದುವರೆಗೂ ಭಾರತದಲ್ಲಿ ಅತಿಹೆಚ್ಚು ಟೆಸ್ಟ್‌ಗಳು ನಡೆದಿರುವುದು ನೆರೆಯ ತಮಿಳುನಾಡಿನಲ್ಲಿ, ಜುಲೈ 2ರ ವೇಳೆಗೆ ಆ ರಾಜ್ಯದಲ್ಲಿ 12 ಲಕ್ಷ 2 ಸಾವಿರ ಟೆಸ್ಟ್‌ಗಳು ನಡೆದಿವೆ. ಇನ್ನು ಅತ್ಯಂತ ವೇಗವಾಗಿ ಹಾಟ್‌ಸ್ಪಾಟ್ ಆಗುವ ಹಾದಿಯಲ್ಲಿ ಸಾಗುತ್ತಿರುವ ತೆಲಂಗಾಣದಲ್ಲಿ ಇದುವರೆಗೂ ಕೇವಲ 92 ಸಾವಿರ ಪರೀಕ್ಷೆಗಳನ್ನಷ್ಟೇ ನಡೆಸಲಾಗಿದೆ.