Advertisement
ಶಿವಮೊಗ್ಗ ಜಿಲ್ಲೆಈ ವರ್ಷ ಸಾಗರ ತಾಲೂಕಿನ 6 ಮಂದಿ ಈಗಾಗಲೇ ಕಾಯಿಲೆಗೆ ಬಲಿಯಾಗಿದ್ದಾರೆ. ಮೃತಪಟ್ಟವರೆಲ್ಲ ಸಾಗರದ ಅರಳಗೋಡಿನವರೇ ಆಗಿದ್ದು, ಇನ್ನೂ ಅನೇಕರು ಕಾಯಿಲೆಗೆ ತುತ್ತಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 56 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ 63 ಜನರಲ್ಲಿ ಗುಣಮುಖರಾದ 33 ರೋಗಿಗಳನ್ನು ಮನೆಗೆ ತಲುಪಿಸಲಾಗಿದೆ. 25 ಮಂದಿಗೆ ಮಂಗನ ಕಾಯಿಲೆ ಇಲ್ಲ ಎಂದು ದೃಢೀಕರಿಸಲಾಗಿದೆ. ಪ್ರಸ್ತುತ ಸಾಗರದಲ್ಲಿ ನಾಲ್ಕು ಮಂದಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸಂಗಡಿ, ಕಂಡೂರು, ಹಿರ್ಗಾನ, ಶಿರೂರು ಮೊದಲಾದೆಡೆ ಜ.12ರ ವರೆಗೆ 16 ಮಂಗಗಳ ಸಾವು ಕಂಡು ಬಂದಿದೆ. ಇವುಗಳಲ್ಲಿ ಏಳು ಮಂಗಗಳ ಭಾಗಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಕೊಳೆತು ಹೋದ ಕಾರಣ ಒಂದನ್ನು ತಿರಸ್ಕರಿಸಲಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬಂದಿಲ್ಲ. ಉಡುಪಿ ಜಿಲ್ಲೆಯಲ್ಲಿ ಕಾಯಿಲೆ ತಗುಲಿದ ವರದಿಯಾಗಿಲ್ಲ.
Related Articles
ಜಿಲ್ಲೆಯಲ್ಲಿ 2018 ಜನವರಿಯಿಂದ ಡಿಸೆಂಬರ್‌ವರೆಗೆ ನಾನಾ ಕಾರಣಗಳಿಂದ 23 ಮಂಗಗಳು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಅವುಗಳಲ್ಲಿ ಎರಡನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು. 13 ಉಣುಗು ಮಾದರಿ ಸಂಗ್ರಹಿಸಲಾಗಿದ್ದು, ಒಂದರಲ್ಲೂ ಕಾಯಿಲೆಯ ವೈರಸ್ ಕಂಡು ಬಂದಿಲ್ಲ. ಜಿಲ್ಲೆಯಲ್ಲಿ ಕಳೆದ ವರ್ಷ 19 ರೋಗಿಗಳ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಅವರ ಪೈಕಿ ಹೊನ್ನಾವರ ತಾಲೂಕಿನ ಸಂಶಿಯ ನಾಲ್ವರಲ್ಲಿ ದೃಢಪಟ್ಟಿತ್ತು.
Advertisement
ಚಿಕ್ಕಮಗಳೂರು ಜಿಲ್ಲೆಜಿಲ್ಲೆಯಲ್ಲಿ ಈವರೆಗೆ ಎಲ್ಲಿಯೂ ಕಾಯಿಲೆ ಕಂಡು ಬಂದಿಲ್ಲ. 2005ರಲ್ಲಿ ಜಿಲ್ಲೆಯ ಕರಡಿಖಾನ್ ಗ್ರಾಮದಲ್ಲಿ 3 ಜನ ಮತ್ತು ಬಾಳೆಹೊನ್ನೂರು ಸಮೀಪ ಓರ್ವ ವ್ಯಕ್ತಿ ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದರು. ಅದಾದ ಬಳಿಕ 2013ರ ಮಾರ್ಚ್‌ನಲ್ಲಿ ನರಸಿಂಹರಾಜಪುರ ತಾಲೂಕಿನಲ್ಲಿ ಓರ್ವ ವ್ಯಕ್ತಿಯಲ್ಲಿ ಪತ್ತೆಯಾಗಿತ್ತು. 2016ರಲ್ಲಿ ಓರ್ವ ವ್ಯಕ್ತಿ ಈ ಕಾಯಿಲೆಯಿಂದ ಬಳಲಿದ್ದರು. ಬಳಿಕ ಕಾಯಿಲೆ ಕಂಡುಬಂದಿಲ್ಲ. ವೈರಸ್ ಕಂಡು ಬಂದಿದ್ದು 1957ರಲ್ಲಿ
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಸುಮಾರು 20 ವರ್ಷಗಳ ಹಿಂದೆ ಮಂಗನ ಕಾಯಿಲೆ ಕಂಡು ಬಂದಿತ್ತು. ಮಂಗನ ಕಾಯಿಲೆಯನ್ನು ಕ್ಯಾಸನೂರು ಫಾರೆಸ್ಟ್ ಕಾಯಿಲೆ (ಕೆಎಫ್ಡಿ) ಎನ್ನುತ್ತಾರೆ. ಈ ವೈರಸ್ ಫ್ಲಾವಿವಿರಿಡೆ ಎಂಬ ವೈರಸ್ ಪಂಗಡಕ್ಕೆ ಸೇರಿದೆ. ಶಿವಮೊಗ್ಗ ಜಿಲ್ಲೆ ಕ್ಯಾಸನೂರು ಕಾಡಿನಲ್ಲಿ ಈ ಕಾಯಿಲೆಗೆ ತುತ್ತಾದ ಒಂದು ಮಂಗನ ದೇಹದಲ್ಲಿ 1957ರಲ್ಲಿ ಈ ವೈರಸ್‌ನ್ನು ಮೊದಲ ಬಾರಿ ಗುರುತಿಸಲಾಯಿತು. ಅಂದಿನಿಂದ ವರ್ಷವೂ 400-500 ಜನರಿಗೆ ಈ ಕಾಯಿಲೆ ಕಂಡು ಬಂದಿದೆ. ಉಣುಗುಗಳ ಕಡಿತದಿಂದ ಹರಡುವ ಈ ಕಾಯಿಲೆ ಡಿಸೆಂಬರ್‌ನಿಂದ ಎಪ್ರಿಲ್ ತಿಂಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಉಣುಗು ಯೌವ್ವನಾವಸ್ಥೆಯಲ್ಲಿರುವಾಗ ಮಾತ್ರ ಕಚ್ಚುತ್ತವೆ ಎನ್ನುತ್ತಾರೆ ವೈದ್ಯರು. ಈ ವೈರಸ್ ಎಲ್ಲಿಂದ ಬಂತು ಎಂಬುದು ಈವರೆಗೂ ಪತ್ತೆಯಾಗಿಲ್ಲ. ಚಿಕಿತ್ಸೆ ಹೇಗೆ?
ಕಾಯಿಲೆ ಪತ್ತೆ ಹಚ್ಚಲು ಮಣಿಪಾಲ ಕೆಎಂಸಿಯ ವೈರಾಲಜಿ ವಿಭಾಗದಲ್ಲಿ ಅತ್ಯಾಧುನಿಕ ವ್ಯವಸ್ಥೆ ಇದೆ. ಕಾಯಿಲೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಬೇಗನೆ ಆಸ್ಪತ್ರೆಗೆ ದಾಖಲಾಗಿ ದೇಹಾರೋಗ್ಯಕ್ಕೆ ಸಹಾಯಕವಾಗುವ ಚಿಕಿತ್ಸೆ ಒದಗಿಸುವುದು ಮುಖ್ಯ. ಸಹಾಯಕ ಚಿಕಿತ್ಸೆ ಎಂದರೆ ದೇಹದಲ್ಲಿ ಸಾಕಷ್ಟು ನೀರಿನಂಶ ಇರುವಂತೆ ನೋಡಿಕೊಳ್ಳುವುದು, ರಕ್ತಸ್ರಾವ ತೊಂದರೆ ಇರುವ ರೋಗಿಗಳಿಗೆ ವಿಶೇಷ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಮುಖ್ಯ. ಅನಿವಾರ್ಯವಾದಾಗ ರಕ್ತ ಪೂರೈಸಬೇಕಾದೀತು. ಹೆಚ್ಚುವರಿ ನಿಯಂತ್ರಣ ಕ್ರಮವೆಂದರೆ ಕೀಟನಾಶಕ ಬಳಸುವುದು, ಉಣುಗು ಕಾಣಿಸುವ ಕಡೆ ಕೈಕಾಲುಗಳನ್ನು ರಕ್ಷಿಸುವಂಥ ಕವಚ ಧರಿಸುವುದು ಒಳ್ಳೆಯದು. ಕೆಎಫ್‌ಡಿ ವೈರಸ್ ಪತ್ತೆಗೆ ಇಷ್ಟು ದಿನ ಪುಣೆ ಅಥವಾ ಬೆಂಗಳೂರಿನ ಲ್ಯಾಬ್‌ಗಳನ್ನು ಆಶ್ರಯಿಸಬೇಕಿತ್ತು. ಲ್ಯಾಬ್ ವರದಿಗೆ ಕನಿಷ್ಠ ಒಂದು ವಾರ ಕಾಯಬೇಕಿತ್ತು. ಇದು ಸಹ ಕೆಎಫ್‌ಡಿ ಹತೋಟಿಗೆ ತೊಡಕಾಗಿತ್ತು. 1 ಕೋ. ರೂ. ವೆಚ್ಚದಲ್ಲಿ 2014ರಲ್ಲಿ ಶುರುವಾಗಿದ್ದ ಲ್ಯಾಬ್ ಈಗ ಶಿವಮೊಗ್ಗದಲ್ಲಿ ಅ ಧಿಕೃತವಾಗಿ ಕಾರ್ಯಾರಂಭ ಮಾಡಿದೆ. ಹೀಗಾಗಿ ಶಿವಮೊಗ್ಗದಲ್ಲೇ ಕೆಎಫ್‌ಡಿ ವೈರಸ್ ಪತ್ತೆ ಮಾಡಬಹುದು. ಹೆಚ್ಚು ಬಾಧಿತವಾಗುವ ಪ್ರದೇಶಗಳು:
ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಭಟ್ಕಳ, ಸಿದ್ದಾಪುರ, ಜೊಯಿಡಾ, ದಕ್ಷಿಣ ಕನ್ನಡದ ಪುತ್ತೂರು, ಬೆಳ್ತಂಗಡಿ ತಾಲೂಕುಗಳು, ಉಡುಪಿ ಜಿಲ್ಲೆ, ಚಾಮರಾಜನಗರದ ಬಂಡೀಪುರ, ಮೈಸೂರಿನ ಕೆಲ ಅರಣ್ಯ ಪ್ರದೇಶದಲ್ಲಿ ಈ ಕಾಯಿಲೆ ಹೆಚ್ಚಾಗಿ ಹರಡುವ ಪ್ರದೇಶಗಳು. ಜೋಯಿಡಾ ಹಾಗೂ ಚಾಮರಾಜನಗರ ಭಾಗಗಳಲ್ಲೂ ಕಾಯಿಲೆ ಹರಡುವ ಸಾಧ್ಯತೆ ಇದೆ. ರೋಗ ಲಕ್ಷಣಗಳು
ಮನುಷ್ಯರಿಗೆ ಉಣುಗು ಕಚ್ಚಿದ 3-8 ದಿನಗಳ ಕಾಲ ರೋಗದ ಲಕ್ಷಣಗಳಿರುವುದಿಲ್ಲ.
ಜ್ವರ, ಚಳಿ ಜ್ವರ, ತಲೆನೋವು ಕಾಣುತ್ತದೆ. ವಾಂತಿಯೊಂದಿಗೆ ಮೈ-ಕೈ ನೋವು, ಜಠರ, ಕರುಳಿನ ರೋಗ ಲಕ್ಷಣಗಳು, ರಕ್ತಸ್ರಾವಗಳು ಕಾಣಿಸಿಕೊಳ್ಳುತ್ತವೆ.
ಕಡಿಮೆ ರಕ್ತದೊತ್ತಡ, ಕಡಿಮೆ ಪ್ಲೇಟ್‌ಲೆಟ್ ಸಂಖ್ಯೆ, ಕೆಂಪು ರಕ್ತಕಣ, ಬಿಳಿ ರಕ್ತಕಣಗಳ ಸಂಖ್ಯೆ ಇಳಿಮುಖವಾಗುವ ಲಕ್ಷಣ ಕಂಡು ಬರಬಹುದು.
ಒಂದೆರಡು ವಾರಗಳ ಬಳಿಕ ಕೆಲವು ರೋಗಿಗಳು ಚೇತರಿಸಿಕೊಳ್ಳುತ್ತಾರೆ.
ಕೆಲವರಲ್ಲಿ (ಶೇ.10-20) ಮೂರನೇ ವಾರದ ಆರಂಭದಲ್ಲಿ ಎರಡನೇ ಹಂತದ ರೋಗ ಲಕ್ಷಣ ಕಾಣಿಸುತ್ತದೆ.
ಜ್ವರ, ನರಸಂಬಂಧಿ ತೊಂದರೆಗಳಾದ ತೀವ್ರ ತಲೆ ನೋವು, ಮಾನಸಿಕ ತೊಂದರೆ, ನಡುಕ, ದೃಷ್ಟಿ ನ್ಯೂನತೆ ಇದರ ಲಕ್ಷಣಗಳು.
ಸಾವು ಸಂಭವಿಸುವ ಸಾಧ್ಯತೆ ಸುಮಾರು ಶೇ.3-5 ಮಾತ್ರ. ಆದರೆ ಸಾವು ಸಂಭವಿಸುವುದು ತೀವ್ರ ರಕ್ತ ಸ್ರಾವದಿಂದ. ನೀವೇನು ಮಾಡಬೇಕು?
ಮಂಗ ಸಾವಿಗೀಡಾದರೆ ಪಶುವೈದ್ಯಾಲಯ/ ಆರೋಗ್ಯ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು.
ಅರಣ್ಯದಲ್ಲಿ ಕೆಲಸ ಮಾಡುವವರು/ ಭೇಟಿ ನೀಡುವವರು ರಕ್ಷಣಾತ್ಮಕ ಬಟ್ಟೆ, ಗ್ಲೌಸ್, ಬೂಟ್ಸ್ ಬಳಸಬೇಕು.
ಅರಣ್ಯಕ್ಕೆ ತೆರಳುವ ಮೊದಲು ಮುಚ್ಚದೆ ಇರುವ ದೇಹದ ಭಾಗಗಳಿಗೆ ಕೀಟಾಣುಗಳನ್ನು ಓಡಿಸುವ ಡಿಎಂಪಿಯಂತಹ ಎಣ್ಣೆ ಹಚ್ಚಬೇಕು.
ಅರಣ್ಯದಿಂದ ಹಿಂದಿರುಗಿದ ಬಳಿಕ ಬಿಸಿ ನೀರು/ ಸೋಪಿನಿಂದ ತೊಳೆದು ಸ್ನಾನ ಮಾಡಬೇಕು.
ಮಂಗಗಳು ಸಾವಿಗೀಡಾದ ಅರಣ್ಯಕ್ಕೆ ಹೋಗದಂತೆ ತಿಳಿ ಹೇಳಬೇಕು.
ಜಾನುವಾರು, ಸಾಕುಪ್ರಾಣಿಗಳಲ್ಲಿ ನೆಲೆಸುವ ಪರೋಪಜೀವಿಗಳನ್ನು ನಿಯಂತ್ರಿಸಬೇಕು. ಏನು ಮಾಡಬಾರದು?
ಕಾಯಿಲೆ ಬಾಧಿತ ಪ್ರದೇಶದ ಮರಗಳ ಎಲೆಗಳನ್ನು ಜಾನುವಾರು ಕೊಟ್ಟಿಗೆಗೆ ತಂದು ಹರಡಬಾರದು.
ಮಂಗಗಳು ಸಾವಿಗೀಡಾದ ಮತ್ತು ಕಾಯಿಲೆ ವರದಿಯಾದ ಪ್ರದೇಶಕ್ಕೆ ಹೋಗಬಾರದು.
ರಕ್ಷಣಾ ಸಾಧನ ಧರಿಸದೆ ಸತ್ತ ಮಂಗನ ದೇಹವನ್ನು ಮುಟ್ಟಬಾರದು. 60 ಮಂದಿಗೆ ಕಾಯಿಲೆ ಸೋಂಕು
ಸಾಗರ : ಮಹಾಮಾರಿ ಮಂಗನಕಾಯಿಲೆ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದ್ದರೂ ಮಂಗಗಳ ಸಾವು ಮಾತ್ರ ಮುಂದುವರಿದಿದೆ. ಈ ವರೆಗೆ ತೀರ್ಥಹಳ್ಳಿಯ ಮೂವರ ಸಹಿತ ಒಟ್ಟು 60 ಮಂದಿಗೆ ವೈರಸ್ ತಗುಲಿರುವುದು ರಕ್ತ ಪರೀಕ್ಷೆಯಿಂದ ದೃಢಪಟ್ಟಿದೆ. ಶನಿವಾರ ಆರು ಜನರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಾಗರ ಉಪ ವಿಭಾಗೀಯ ಆಸ್ಪತ್ರೆಯಿಂದ ಕೆಎಂಸಿಗೆ ರವಾನಿಸಲಾಗಿದೆ. ಕಾಯಿಲೆ ದೃಢಪಟ್ಟ 15 ಜನರಿಗೆ ಚಿಕಿತ್ಸೆ ಮುಂದುವರಿದಿದ್ದು, ಬಹು ತೇಕ ಅವರೆಲ್ಲ ಪ್ರಾಣಾಪಾಯದಿಂದ ಪಾರಾ ಗಿದ್ದಾರೆ. ಮಣಿಪಾಲದಲ್ಲಿ ಚಿಕಿತ್ಸೆ ಪಡೆಯು ತ್ತಿದ್ದ ಅರಳಗೋಡು ಗ್ರಾ.ಪಂ. ಅಧ್ಯಕ್ಷೆ ಶ್ರೀಲಕ್ಷ್ಮೀ ಚೇತರಿಸಿ ಮನೆಗೆ ಮರಳಿದ್ದಾರೆ. ಇನ್ನೊಂದೆಡೆ ಮಂಗಗಳ ಸಾವಿನ ಸರಪಳಿ ಮುಂದುವರಿದಿದೆ. ಅರಳಗೋಡು ಮತ್ತು ಅರಳಗೋಡು ಹತ್ತಿರದ ಮಳ್ಳುಮನೆ ಗ್ರಾಮದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ 2 ಮಂಗಗಳು ಪತ್ತೆಯಾಗಿವೆ. ಕೆಳದಿ ಸಮೀಪದ ಮಾಸೂರು ಪೇಟೆಯಲ್ಲಿ ಒಂದು ಮಂಗ ಸಾವನ್ನಪ್ಪಿದ್ದು ನಾಯಿಗಳಿಗೆ ಆಹಾರವಾಗಿದೆ. ಆನಂದಪುರ ಹತ್ತಿರದ ಜಡೇಹಳ್ಳಿ ಇಸ್ಲಾಂಪುರದಲ್ಲಿ ಸತ್ತ ಮಂಗವನ್ನು ಪಶು ವೈದ್ಯ ಡಾ| ಮೋಹನ್ ಪೋಸ್ಟ್‌ಮಾರ್ಟ್‌ಂ ನಡೆಸಲಾಗಿದೆ. ಕಾರ್ಗಲ್‌ನಲ್ಲಿ ಅಸ್ವಸ್ಥ ಮಂಗ ಕಾಣಿಸಿಕೊಂಡಿದೆ. ತುಮರಿಯಲ್ಲಿ ಒಂದು ಮಂಗ ಕೊಳೆತ ಸ್ಥಿತಿಯಲ್ಲಿ ಕಾಣಿಸಿದೆ ಎಂದು ಹೇಳಲಾಗಿದ್ದರೂ ದೃಢಪಟ್ಟಿಲ್ಲ.ಬ್ಯಾಕೋಡು ಗ್ರಾ. ಪಂ. ವ್ಯಾಪ್ತಿಯ ಎಸ್.ಎಸ್. ಭೋಗ್‌ನಲ್ಲಿ 1 ಮಂಗ, ಆವಿನಹಳ್ಳಿ ಗ್ರಾ. ಪಂ. ವ್ಯಾಪ್ತಿಯ ಕಬ್ಬಿನಾಡಕೊಪ್ಪದಲ್ಲಿ ಒಂದು ಮೃತ ಮಂಗ ಪತ್ತೆಯಾಗಿದೆ. ಸರಕಾರ ಕೈಗೊಂಡಿರುವ ಕ್ರಮಗಳು
ಮಂಗನಕಾಯಿಲೆ ಕುರಿತು ಜಾಗೃತಿ ಮೂಡಿಸುವಲ್ಲಿ ಅರಣ್ಯ ಇಲಾಖೆ, ಪಶುಸಂಗೋಪನಾ ಇಲಾಖೆ ಮತ್ತು ಆರೋಗ್ಯ ಇಲಾಖೆಗಳು ಜಂಟಿಯಾಗಿ ಕೆಲಸ ನಿರ್ವಹಿಸುತ್ತಿವೆ. ಮೂರೂ ಇಲಾಖೆಗಳಿಗೆ ಸಾಮೂಹಿಕ ಜವಾಬ್ದಾರಿಯನ್ನು ಸರಕಾರ ನೀಡಿದೆ. ತಾಲೂಕು ಮಟ್ಟದಲ್ಲಿ ಅರಣ್ಯ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಜಂಟಿ ಸಭೆ ನಡೆದಿದೆ. ಯಾವುದೇ ಮಂಗಗಳು ಸತ್ತರೆ ಆರೋಗ್ಯ ಇಲಾಖೆ ಗಮನಕ್ಕೆ ತರಲು ಸೂಚಿಸಲಾಗಿದೆ. ಮಂಗಗಳು ಸತ್ತ ಜಾಗದ 50 ಮೀ. ಸುತ್ತ ಕ್ರಿಮಿನಾಶಕ ಸಿಂಪಡಿಸಲಾಗುತ್ತಿದೆ. ಅರಣ್ಯಕ್ಕೆ ತೆರಳುವವರಿಗೆ ದೇಹವನ್ನು ಮುಚ್ಚದೆ ಇರುವ ಭಾಗಗಳಿಗೆ ಡಿಎಂಪಿ ತೈಲವನ್ನು ಹಚ್ಚಿಕೊಳ್ಳಲು ಸೂಚಿಸಲಾಗಿದ್ದು ಆಯಾ ಜಿಲ್ಲೆಗಳ ಜಿಲ್ಲಾ ಆರೋಗ್ಯ ಇಲಾಖೆಯಿಂದ ತಾಲೂಕು ಆರೋಗ್ಯಾಧಿಕಾರಿಯವರಿಗೆ 60 ಬಾಟಲಿ ಎಣ್ಣೆಯನ್ನು ಕೊಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಸಿದ್ದಾಪುರ ಮತ್ತು ಭಟ್ಕಳ ತಾಲೂಕಿನ ಹಳ್ಳಿಗಳಲ್ಲಿ ಕರಪತ್ರಗಳ ಹಂಚಿಕೆ, ಧ್ವನಿವರ್ಧಕಗಳಲ್ಲಿ ಮಾಹಿತಿ ಪ್ರಕಟನೆ ನೀಡಲಾಗಿದೆ.
ಡಾ| ಅಶೋಕಕುಮಾರ್, ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ. ಬೇಸಿಗೆ ಕಳೆದು ಒಂದು ಮಳೆ ಬರುವವರೆಗೂ ಮಲೆನಾಡು ಪ್ರದೇಶಗಳಲ್ಲಿ ಇಲಾಖೆ ಕಣ್ಗಾವಲನ್ನು ನಡೆಸಲಿದೆ. ಆರೋಗ್ಯ ಇಲಾಖೆ ಸಿಬಂದಿ ಆಗಾಗ ಭೇಟಿ ನೀಡಿ ಪರಿಶೀಲಿಸುತ್ತಾರೆ. ಈ ವರೆಗೂ ಎಲ್ಲೂ ಸಹ ಈ ಕಾಯಿಲೆ ಕಂಡು ಬಂದಿಲ್ಲ.
ಡಾ| ಮಲ್ಲಿಕಾರ್ಜುನಯ್ಯ, ಚಿಕ್ಕಮಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಾಹಿತಿ: ಶರತ್ ಭದ್ರಾವತಿ, ಎಸ್.ಕೆ. ಲಕ್ಷ್ಮೀಪ್ರಸಾದ್, ನಾಗರಾಜ ಹರಪನಹಳ್ಳಿ, ಮಣಿಪಾಲ ಬ್ಯೂರೋ