Advertisement

25 ರೈಲುಗಳಿಗೆ 6 ಬೋಗಿ ಭಾಗ್ಯ

11:30 AM Nov 23, 2018 | Team Udayavani |

ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ “ನಮ್ಮ ಮೆಟ್ರೋ’ ಮೊದಲ ಹಂತದಲ್ಲಿರುವ ಅರ್ಧಕ್ಕರ್ಧ ಮೆಟ್ರೋ ರೈಲುಗಳು ಮೂರರಿಂದ ಆರು ಬೋಗಿ ರೈಲುಗಳಾಗಿ ಪರಿವರ್ತನೆ ಆಗಲಿವೆ. ಈಗಾಗಲೇ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗ (ನೇರಳೆ)ದ ಮೂರು ರೈಲುಗಳು ಆರು ಬೋಗಿಗಳಿಗೆ ಪರಿವರ್ತನೆಯಾಗಿವೆ.

Advertisement

ಮುಂದಿನ 15 ದಿನಗಳಲ್ಲಿ ಮತ್ತೂಂದು ಆರು ಬೋಗಿಯ ರೈಲು ಸೇರ್ಪಡೆ ಆಗಲಿದ್ದು, ಇದನ್ನು ನಾಗಸಂದ್ರ-ಯಲಚೇನಹಳ್ಳಿ (ಹಸಿರು) ಮಾರ್ಗದಲ್ಲಿ ನಿಯೋಜಿಸಲು ಉದ್ದೇಶಿಸಲಾಗಿದೆ. ಬರುವ ಮಾರ್ಚ್‌ ಅಂತ್ಯದೊಳಗೆ ಒಟ್ಟಾರೆ 25 ರೈಲುಗಳು ಆರು ಬೋಗಿಗಳಿಗೆ ಪರಿವರ್ತನೆ ಆಗಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ವಿಧಾನಸೌಧದ ಡಾ.ಬಿ.ಆರ್‌.ಅಂಬೇಡ್ಕರ್‌ ಮೆಟ್ರೋ ನಿಲ್ದಾಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಆರು ಬೋಗಿಗಳ ಮೂರನೇ ಮೆಟ್ರೋ ರೈಲು ಲೋಕಾರ್ಪಣೆ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಪ್ರಸ್ತುತ ನೇರಳೆ ಮಾರ್ಗಲ್ಲಿ 25 ಮತ್ತು ಹಸಿರು ಮಾರ್ಗದಲ್ಲಿ 19 ಮೆಟ್ರೋ ರೈಲುಗಳು ಕಾರ್ಯಾಚರಣೆ ಮಾಡುತ್ತಿದ್ದು, ಆರು ರೈಲುಗಳು ಹೆಚ್ಚುವರಿಯಾಗಿವೆ.

ಆ ಪೈಕಿ ಮಾರ್ಚ್‌ ಅಂತ್ಯದೊಳಗೆ 25 ರೈಲುಗಳು ಆರು ಬೋಗಿಗಳಾಗಿ ಮಾರ್ಪಾಡು ಆಗಲಿವೆ. ಇವುಗಳು ಪೀಕ್‌ ಅವರ್‌ನಲ್ಲಿಯೇ ಕಾರ್ಯಾಚರಣೆ ಮಾಡುವುದರಿಂದ ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ದುಪ್ಪಟ್ಟಾಗುವುದರ ಜತೆಗೆ ಅನುಕೂಲವೂ ಆಗಲಿದೆ ಎಂದು ಹೇಳಿದರು.

ಹಸಿರು ಮಾರ್ಗದ ಉದ್ದ ಹೆಚ್ಚಿದ್ದರೂ, ನೇರಳೆ ಮಾರ್ಗದಲ್ಲೇ ಅಧಿಕ ಜನ ಪ್ರಯಾಣಿಸುತ್ತಾರೆ. “ಪೀಕ್‌ ಅವರ್‌’ನಲ್ಲಿ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ನಡುವೆ ಗಂಟೆಗೆ 19 ಸಾವಿರ ಜನ ಪ್ರಯಾಣಿಸಿದರೆ, ಯಲಚೇನಹಳ್ಳಿ-ನಾಗಸಂದ್ರ ಮಧ್ಯೆ ಗಂಟೆಗೆ ಹತ್ತು ಸಾವಿರ ಜನ ಸಂಚರಿಸುತ್ತಾರೆ. ಇದಕ್ಕೆ ಕಾರಣ ನೇರಳೆ ಮಾರ್ಗದಲ್ಲಿ ವಾಣಿಜ್ಯ ಮತ್ತು ಆರ್ಥಿಕ ಚಟವಟಿಕೆಗಳು ಹೆಚ್ಚಿವೆ. ವಿವಿಧ ಕಚೇರಿಗಳು ಇದೇ ಮಾರ್ಗದಲ್ಲಿ ಬರುತ್ತವೆ. ಹಾಗಾಗಿ, ನೇರಳೆ ಮಾರ್ಗಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

Advertisement

ಸೆಪ್ಟೆಂಬರ್‌ ವೇಳೆಗೆ ಎಲ್ಲವೂ ಆರು ಬೋಗಿ: ಭಾರತ್‌ ಅರ್ಥ್ ಮೂವರ್ ಲಿ., (ಬಿಇಎಂಎಲ್‌) ಈಗ ತಿಂಗಳಿಗೆ ಆರು ಬೋಗಿಗಳನ್ನು ಪೂರೈಸುತ್ತಿದೆ. ಬರುವ ತಿಂಗಳಿಂದ ಪೂರೈಕೆ ಪ್ರಮಾಣ ದುಪ್ಪಟ್ಟು ಮಾಡುವುದಾಗಿ ಹೇಳಿದೆ. 2019ರ ಆಗಸ್ಟ್‌-ಸೆಪ್ಟೆಂಬರ್‌ ಒಳಗೆ ಎಲ್ಲ 150 ಬೋಗಿಗಳು ಪೂರೈಕೆ ಆಗಲಿವೆ. ಮೂರು ಬೋಗಿಗಳ ಮೆಟ್ರೋದಲ್ಲಿ 750 ಪ್ರಯಾಣಿಕರು ಸುಗಮವಾಗಿ ಸಂಚರಿಸಬಹುದು. ಆರು ಬೋಗಿಗಳಲ್ಲಿ ಸಾಮರ್ಥ್ಯ 2 ಸಾವಿರ ಇದ್ದರೂ, 1,574 ಜನ ಆರಾಮದಾಯಕ ಪ್ರಯಾಣ ಮಾಡಬಹುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಆರು ಬೋಗಿಗಳ ವಿನ್ಯಾಸ: “ನಮ್ಮ ಮೆಟ್ರೋ’ ನಿಲ್ದಾಣಗಳ ಪ್ಲಾರ್ಟ್‌ಫಾರಂಗಳನ್ನು ಆರು ಬೋಗಿಗಳ ನಿಲುಗಡೆಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದ್ದು, ಭವಿಷ್ಯದಲ್ಲಿ ಅಗತ್ಯ ಬಿದ್ದರೆ ಈ ಸಾಮರ್ಥ್ಯವನ್ನು ಹೆಚ್ಚಿಸಲು ಅವಕಾಶ ಇದೆ ಎಂದು ಅವರು ಹೇಳಿದರು. 2020ಕ್ಕೆ ಕನಕಪುರ ಮತ್ತು ಮೈಸೂರು ರಸ್ತೆಯ ವಿಸ್ತರಿಸಿದ ಮಾರ್ಗಗಳು ಕಾರ್ಯಾಚರಣೆಗೆ ಮುಕ್ತವಾಗಲಿವೆ. ಎರಡನೇ ಹಂತದ ವಿಳಂಬಕ್ಕೆ ಪ್ರಮುಖವಾಗಿ ಭೂಸ್ವಾಧೀನ ಮತ್ತು ಯುಟಿಲಿಟಿಗಳ ಸ್ಥಳಾಂತರ ಎಂದು ಸ್ಪಷ್ಟಪಡಿಸಿದರು.

ರಾತ್ರಿ ಸೇವೆ ವಿಸ್ತರಣೆ ಸಾಧ್ಯ: ಮೆಟ್ರೋ ಸೇವೆಯನ್ನು ಮಧ್ಯರಾತ್ರಿ 12ರವರೆಗೆ ವಿಸ್ತರಿಸಲು ಸಾಧ್ಯವಿದೆ. ಆದರೆ, ಇದಕ್ಕಾಗಿ ನಿರ್ವಹಣಾ ಕಾರ್ಯಕ್ಷಮತೆಯನ್ನು ಮತ್ತಷ್ಟು ಉತ್ತಮಗೊಳಿಸುವ ಅವಶ್ಯಕತೆ ಇದೆ ಎಂದು ಅಜಯ್‌ ಸೇಠ್ ತಿಳಿಸಿದರು. ಪ್ರಸ್ತುತ ಮೆಜೆಸ್ಟಿಕ್‌ನ ಕೆಂಪೇಗೌಡ ನಿಲ್ದಾಣದಿಂದ ರಾತ್ರಿ 11.30ಕ್ಕೆ ಕೊನೆ ಮೆಟ್ರೋ ರೈಲು ನಿರ್ಗಮಿಸುತ್ತಿದೆ.

ಇದನ್ನು 12 ಗಂಟೆವರೆಗೆ ವಿಸ್ತರಿಸಬಹುದು. ಅಷ್ಟೇ ಅಲ್ಲ, ವಾರಾಂತ್ಯಗಳಲ್ಲಿ ಬೆಳಗ್ಗೆ ನಗರಕ್ಕೆ ಬಂದಿಳಿಯುವ ಪ್ರಯಾಣಿಕರಿಗೆ ಪೂರಕವಾಗಿ ಮೆಟ್ರೋ ಸೇವೆಗಳನ್ನು ಕಲ್ಪಿಸಲು ಅವಕಾಶವಿದೆ. ಈ ಸಂಬಂಧ ಬೆಂಗಳೂರು ರೈಲ್ವೆ ವಿಭಾಗೀಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಅದಕ್ಕೆ ಪೂರಕವಾಗಿ ಈ ಸೇವೆ ನೀಡಬೇಕು. ಇದೆಲ್ಲಕ್ಕೂ ಮುನ್ನ ನಿರ್ವಹಣಾ ಕಾರ್ಯಕ್ಷಮತೆ ಉತ್ತಮಗೊಳಿಸಬೇಕು ಎಂದರು.

ಬೈಯಪ್ಪನಹಳ್ಳಿ-ಮೈಸೂರು ರಸ್ತೆ
ನಿರ್ಗಮನ    ತಲುಪುವ ಸಮಯ (ಬೆಳಗ್ಗೆ)

7.20    7.59
7.47    8.26
8.26    9.05
8.45    9.24
9.14    9.53
9.54    10.25 (ವಿಜಯನಗರ)

ನಿರ್ಗಮನ    ತಲುಪುವ ಸಮಯ (ಸಂಜೆ)
5.29    6.08
5.42    6.21
6.03    6.42
6.55    7.34
7.07    7.46
7.27    8.06

ಮೈಸೂರು ರಸ್ತೆ-ಬೈಯಪ್ಪನಹಳ್ಳಿ (ಸಂಜೆ)
ನಿರ್ಗಮನ    ತಲುಪುವ ಸಮಯ

6.12    6.51
6.25    7.04
6.45    7.24
7.36    8.15
7.48    8.27
8.11    8.50

Advertisement

Udayavani is now on Telegram. Click here to join our channel and stay updated with the latest news.

Next