ಬೀಜಿಂಗ್:ಪಶ್ಚಿಮ ಚೀನಾದ ಸಿಚುವಾನ್ ಪ್ರಾಂತ್ಯದ ಪರ್ವತ ಪ್ರದೇಶದ ಸಮೀಪ ಸೋಮವಾರ (ಸೆಪ್ಟೆಂಬರ್ 05) ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿರುವುದಾಗಿ ಚೀನಾದ ಭೂಕಂಪನ ಕೇಂದ್ರದ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಹಲವರ ಬಳಿ ನನ್ನ ಮೊಬೈಲ್ ನಂಬರ್ ಇದೆ, ಆದರೆ ಧೋನಿ ಮಾತ್ರ ಅಂದು ಮೆಸೇಜ್ ಮಾಡಿದ್ರು..: ಕೊಹ್ಲಿ
ರಿಕ್ಟರ್ ಮಾಪಕದಲ್ಲಿ 6.8ರಷ್ಟು ತೀವ್ರತೆ ದಾಖಲಾಗಿದೆ. ಸಿಚುವಾನ್ ರಾಜಧಾನಿ ಚೆಂಗ್ಡುವಿನಿಂದ 180 ಕಿಲೋ ಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿರುವುದಾಗಿ ವರದಿ ವಿವರಿಸಿದೆ. ಪ್ರಬಲ ಭೂಕಂಪದಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ.
ಭೂಕಂಪನದಿಂದ ಚೆಂಗ್ಡು ಹಾಗೂ ಇತರ ಪ್ರದೇಶಗಳಲ್ಲಿ ಭಾರೀ ಕಂಪನದ ಅನುಭವವಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ವರದಿ ಹೇಳಿದೆ. 2017ರ ನಂತರ ಸಂಭವಿಸಿದ ಪ್ರಬಲ ಭೂಕಂಪನ ಇದಾಗಿದೆ ಎಂದು ವರದಿ ತಿಳಿಸಿದೆ.
ಭೂಕಂಪನದಿಂದಾಗಿ ಕೆಲವು ರಸ್ತೆಗಳು ಮತ್ತು ಮನೆಗಳು ಹಾನಿಗೊಂಡಿದ್ದು, ಕೆಲವು ಪ್ರದೇಶದಲ್ಲಿ ದೂರವಾಣಿ, ಮೊಬೈಲ್ ಸಂಪರ್ಕ ಕಡಿತಗೊಂಡಿರುವುದಾಗಿ ವರದಿ ಹೇಳಿದೆ. ಸಿಚುವಾನ್ ನಗರದಲ್ಲಿ ಸುಮಾರು 21 ಮಿಲಿಯನ್ ಜನರು ವಾಸವಾಗಿದ್ದಾರೆ.
ಸಿಚುವಾನ್ ಪ್ರದೇಶದಲ್ಲಿ ಭೂಕಂಪನ ಸಾಮಾನ್ಯವಾಗಿದ್ದು, ಇಂದು ಸಂಭವಿಸಿದ ಭೂಕಂಪನದಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿರುವುದಾಗಿ ವರದಿ ವಿವರಿಸಿದೆ.